LATEST NEWS
ರಸ್ತೆ ಪುಟ್‍ಪಾತ್‍ನಲ್ಲಿರುವ ಗುಜರಿ ವಾಹನಗಳನ್ನು 15 ದಿನಗಳ ಒಳಗೆ ತೆರವುಗೊಳಿಸಿ – ಮಹಾನಗರ ಪಾಲಿಕೆ ಸೂಚನೆ
ಮಂಗಳೂರು,ಡಿಸೆಂಬರ್ 19: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯೊಳಗಿನ ಸಾರ್ವಜನಿಕ ಸ್ಥಳಗಳಲ್ಲಿ, ಪುಟ್‍ಪಾತ್ / ರಸ್ತೆ ಬದಿಗಳಲ್ಲಿ ಬಹಳ ಹಳೆಯದಾದ ನಾದುರಸ್ಥಿ ನಿರುಪಯುಕ್ತ ವಾಹನಗಳು ಹಲವಾರು ಸಮಯಗಳಿಂದ ಪಾರ್ಕಿಂಗ್ ಮಾಡಿರುವುದು ಪಾಲಿಕೆಯ ಗಮನಕ್ಕೆ ಬಂದಿರುತ್ತದೆ.
ಈ ರೀತಿ ಅನುಪಯುಕ್ತ ಹಳೆಯ ಗುಜರಿ ವಾಹನಗಳು ನಿಂತಿರುವುದರಿಂದ ರಸ್ತೆ ಬದಿಯ ಸ್ವಚ್ಚತೆಗೆ ದಕ್ಕೆಯಾಗುತ್ತಿರುವುದಲ್ಲದೆ ಮಳೆಗಾಲದ ಅವಧಿಯಲ್ಲಿ ವಿವಿಧ ಸೊಳ್ಳೆ ಆಶ್ರಿತ ರೋಗಗಳು ಹರಡಲು ಸಹಕಾರವಾಗುತ್ತಿದೆ. ಅಲ್ಲದೆ ಗುಜರಿ ವಾಹನ ನಿಲ್ಲಿಸಿರುವ ಜಾಗದಲ್ಲಿ ಸಾರ್ವಜನಿಕರು ಕಸಗಳನ್ನು ಎಸೆಯುತ್ತಿರುವುದರಿಂದ ಬೀದಿ ನಾಯಿಗಳ ಹಾವಳಿ ಉಂಟಾಗಿ ಸಾರ್ವಜನಿಕರಿಗೆ ರಸ್ತೆ ಬದಿಯಲ್ಲಿ ನಡೆದಾಡಲು ಬೀತಿಯಾಗುತ್ತಿರುವ ಹಾಗೂ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿರುವ ಬಗ್ಗೆ ಸಾರ್ವಜನಿಕರು ದೂರು ಸಲ್ಲಿಸುತ್ತಿದ್ದಾರೆ.
ಈ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಪಾಲಿಕೆ ಅಧಿಕಾರಿಗಳ ತಂಡಗಳನ್ನು ರಚಿಸಲಾಗಿದೆ. ತಂಡವು ರಸ್ತೆ ಬದಿ/ಪುಟ್‍ಪಾತ್‍ಗಳಲ್ಲಿ ನಿಂತಿರುವ ಅನುಪಯುಕ್ತ ಹಳೆಯ ಗುಜರಿ ವಾಹನಗಳನ್ನು ಪತ್ತೆಹಚ್ಚಿ, 15 ದಿನಗಳೊಳಗೆ ಸಾರ್ವಜನಿಕ ಸ್ಥಳಗಳಿಂದ ತೆರವುಗೊಳಿಸಿ ತಮ್ಮ ಸ್ವಂತ ಜಾಗದಲ್ಲಿ ನಿಲುಗಡೆಗೊಳಿಸುವಂತೆ ಸೂಚಿಸಿ, ವಾಹನಗಳ ಮೇಲೆ ನೋಟೀಸ್ ಹಚ್ಚುವ ಕ್ರಮ ಕೈಗೊಳ್ಳಲಾಗುತ್ತದೆ. ಸಂಬಂಧಪಟ್ಟ ವಾಹನದ ವಾರೀಸುದಾರರು ತೆರವುಗೊಳಿಸದಿದ್ದಲ್ಲಿ 15 ದಿನಗಳ ನಂತರ “ವಾರೀಸುದಾರ ರಹಿತ ವಾಹನ” ಎಂದು ಪರಿಗಣಿಸಿ ಎಲ್ಲಾ ಅನಾಮದೇಯ ಗುಜರಿ ವಾಹನಗಳನ್ನು ಪಾಲಿಕೆ ವತಿಯಿಂದ ತೆರವು ಕಾರ್ಯಾಚರಣೆ ಮೂಲಕ ಪಚ್ಚನಾಡಿಯಲ್ಲಿರುವ ಪಾಲಿಕೆಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸ್ಥಳಾಂತರಿಸಿ ನಿಯಮಾನುಸಾರ ಹರಾಜು ಮಾಡಲಾಗುವುದು. ವಾಹನ ಸ್ಥಳಾಂತರಿಸುವಾಗ ವಾಹನಗಳಿಗೆ ಯಾವುದೇ ರೀತಿಯ ಹಾನಿಯಾದಲ್ಲಿ ಪಾಲಿಕೆಯು ಜವಾಬ್ದಾರರಾಗಿರುವುದಿಲ್ಲ ಎಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ