Connect with us

    LATEST NEWS

    ಲಾಕ್ಡೌನ್ ಟೈಮಲ್ಲಿ ಮನೆಯಲ್ಲೇ ಇದ್ದು , ಸಂಬಳ ಎಣಿಸಿದ್ದ ಆರೋಗ್ಯಧಿಕಾರಿ..!!

    ಅಲ್ರೀ… ಮಂಗಳೂರಿಗೆ ಆರೋಗ್ಯಧಿಕಾರಿ ಯಾರಂದ್ರಿ…?

    ಮಂಗಳೂರು, ಜೂನ್ 12: ಕೊರೊನಾ ಸಂದರ್ಭದಲ್ಲಿ ದೇಶದೆಲ್ಲೆಡೆ ಆರೋಗ್ಯ ಇಲಾಖೆ ಅಧಿಕಾರಿಗಳು ಅಲರ್ಟ್ ಆಗಿದ್ದರು. ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕಾಗಿ ಆರೋಗ್ಯ ಅಧಿಕಾರಿಗಳನ್ನು ರಜೆ ಇಲ್ಲದೆ ಕಾರ್ಯ ನಿರ್ವಹಿಸುವಂತೆ ಸರಕಾರಗಳು ನಿರ್ದೇಶನ ನೀಡಿದ್ದವು. ಆದರೆ, ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಇರುವ ಆರೋಗ್ಯಧಿಕಾರಿ ಮಾತ್ರ ಲಾಕ್ಡೌನ್ ಅವಧಿಯ ಮೂರು ತಿಂಗಳಲ್ಲಿ ಫೀಲ್ಡಿಗೇ ಇಳಿಯದೆ ಸಂಬಳ ಎಣಿಸುತ್ತಿದ್ದಾರೆ…!

    ಹೌದು…. ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯಧಿಕಾರಿಯಾಗಿರುವ 70ರ ಹರೆಯದ ಮಂಜಯ್ಯ ಶೆಟ್ಟಿ ಲಾಕ್ ಡೌನ್ ಕಾಲದಲ್ಲಿ ಹೊರಬಂದರೂ ಕಷ್ಟ. ಹೊರಬರದಿದ್ದರೂ ಕಷ್ಟ ಎಂಬ ಪೀಕಲಾಟದಲ್ಲಿ ಸಿಲುಕಿದ್ದರು. ಒಂದೆಡೆ ಲಾಕ್ಡೌನ್ ವೇಳೆ 60 ವರ್ಷ ಮೇಲ್ಪಟ್ಟವರು ಹೊರಬಾರದೆಂಬ ನಿಯಮ. ಮತ್ತೊಂದೆಡೆ, ಆರೋಗ್ಯಧಿಕಾರಿಯಾಗಿ ಕಡ್ಡಾಯ ಕೆಲಸ ಮಾಡಲೇಬೇಕೆಂಬ ಕಟ್ಟುನಿಟ್ಟು. ಹೀಗಾಗಿ ಲಾಕ್ ಡೌನ್ ಬಳಿಕ ಒಂದೆರಡು ಬಾರಿ ವಾಹನದಲ್ಲಿ ಬಂದು ಹೋಗಿದ್ದು ಮಾತ್ರ ಎನ್ನುವ ವಿಚಾರ ಪಾಲಿಕೆಯಿಂದಲೇ ಗೊತ್ತಾಗಿದೆ. ಆರೋಗ್ಯಧಿಕಾರಿಯನ್ನು ಇಂಥ ಪೀಕಲಾಟಕ್ಕೆ ಸಿಲುಕಿಸಿದ್ದು ಮಾತ್ರ ಮಂಗಳೂರಿನ ಕಾಂಗ್ರೆಸ್ ಮತ್ತು ಬಿಜೆಪಿಯ ಪುಢಾರಿಗಳು ಅಂದರೆ ನಂಬಲಿಕ್ಕಿಲ್ಲ..!

    ಯಸ್… ಹತ್ತು ವರ್ಷಗಳ ಹಿಂದೆಯೇ ಆರೋಗ್ಯಧಿಕಾರಿ ಹುದ್ದೆಯಿಂದ ಮಂಜಯ್ಯ ಶೆಟ್ಟಿ ನಿವೃತ್ತಿಯಾಗಿದ್ದರು. ಆನಂತ್ರ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿದ್ದ ಡಾ. ಸುದರ್ಶನ್ ಎಂಬವರನ್ನು ಪ್ರಭಾರ ನೆಲೆಯಲ್ಲಿ ನೇಮಕ ಮಾಡಲಾಗಿತ್ತು. ಆದರೆ, ಪಾಲಿಕೆಯಲ್ಲಿ ಆಡಳಿತದಲ್ಲಿದ್ದವರ ಲೆಕ್ಕಾಚಾರಕ್ಕೆ ಸುದರ್ಶನ್ ಸರಿಕಾಣಲಿಲ್ಲವೋ ಏನೋ.. ಆಗ ಆಡಳಿತದಲ್ಲಿದ್ದ ಬಿಜೆಪಿಯವರು  ನಿವೃತ್ತರಾದವರನ್ನು ಒಂದೆರಡು ವರ್ಷಕ್ಕೆ ಮುಂದುವರಿಸಬಹುದೆಂಬ ಕಾನೂನಿನ ಮಿತಿಯಲ್ಲಿ ಹಿಂದೆ ಇದ್ದ ಮಂಜಯ್ಯ ಶೆಟ್ಟಿಯನ್ನು ತಾತ್ಕಾಲಿಕ ನೆಲೆಯಲ್ಲಿ ನೇಮಕ ಮಾಡಿದ್ದರು. ದುರಂತ ಅಂದ್ರೆ, ಆನಂತರ ಆಡಳಿತಕ್ಕೆ ಬಂದ ಕಾಂಗ್ರೆಸಿಗರೂ ಮಂಜಯ್ಯ ಶೆಟ್ಟಿಯನ್ನೇ ಪ್ರತೀ ಎರಡು ವರ್ಷಕ್ಕೊಮ್ಮೆ ಮುಂದುವರಿಸುತ್ತಾ ಬಂದಿದ್ದರು. ಹೀಗಾಗಿ ತಾತ್ಕಾಲಿಕ ನೆಪದಲ್ಲಿ ನೇಮಕಗೊಂಡಿದ್ದ ಮಂಜಯ್ಯ ಶೆಟ್ಟಿ ಹತ್ತು ವರ್ಷಗಳಿಂದಲೂ ಆರೋಗ್ಯಾಧಿಕಾರಿ ಹುದ್ದೆಯಲ್ಲಿ ಪರ್ಮನೆಂಟ್ ಆಗಿ ಉಳಿದಿದ್ದಾರೆ.

    ಇತ್ತೀಚೆಗೆ, ಮಂಗಳೂರಿನ ಶಾಸಕ ವೇದವ್ಯಾಸ ಕಾಮತ್, ಮಂಗಳೂರಿಗೆ ಪೂರ್ಣಾವಧಿ ಆರೋಗ್ಯಧಿಕಾರಿಯನ್ನು ನೇಮಕ ಮಾಡಬೇಕೆಂದು ಆರೋಗ್ಯ ಮತ್ತು ನಗರಾಭಿವೃದ್ಧಿ ಇಲಾಖೆಗೆ ಮನವಿ ನೀಡಿದ್ದರು. ಹಾಗೆಂದು ಯಾರನ್ನೋ ತಂದು ಆರೋಗ್ಯಧಿಕಾರಿಯಾಗಿ ಕೂರಿಸುವಂತಿಲ್ಲ. ಮಹಾನಗರ ಪಾಲಿಕೆ ವ್ಯಾಪ್ತಿಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಾಗಿರುವ ಮಂದಿಯನ್ನೇ ನೇಮಕ ಮಾಡಬೇಕೆಂಬ ನಿಯಮ ಇದೆ. ಆರೋಗ್ಯ ಕೇಂದ್ರಗಳಲ್ಲಿರುವ ಬಹುತೇಕ ವೈದ್ಯರು ಖಾಸಗಿಯಾಗಿ ಕ್ಲಿನಿಕ್ ಹೊಂದಿದ್ದು, ಪಾಲಿಕೆಯ ಅಧಿಕಾರಿಯಾದಲ್ಲಿ ಕ್ಲಿನಿಕ್ ನಡೆಸುವಂತಿಲ್ಲ.

    ಇನ್ನು ಮಂಗಳೂರು ನಗರ ಭಾಗದ ಸಮುದಾಯ ಆರೋಗ್ಯ ಕೇಂದ್ರಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಗುತ್ತಿಗೆ ನೀಡಲಾಗಿದೆ. ಲೇಡಿಹಿಲ್, ಕದ್ರಿ, ವೆಲೆನ್ಸಿಯಾದ ಆರೋಗ್ಯ ಕೇಂದ್ರಗಳು ಕ್ರಮವಾಗಿ ಕೆಎಂಸಿ, ಫಾದರ್ ಮುಲ್ಲರ್ಸ್, ಎ.ಜೆ. ಆಸ್ಪತ್ರೆಯ ಕೈಯಲ್ಲಿವೆ. ಹೀಗಾಗಿ ತಮ್ಮ ‘’ಲೆಕ್ಕಾಚಾರ’’ಗಳಿಗೆ ಸರಿಹೊಂದುವವರು ಸಿಗಲ್ಲ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಆಡಳಿತಗಳು ಹಿಂದಿನಿಂದಲೂ ತಮ್ಮ ಹಳೆ ಆಪ್ತನನ್ನೇ ಮುಂದುವರಿಸಿಕೊಂಡು ಬಂದಿತ್ತು. ಅಷ್ಟೇ ಅಲ್ಲ, ತಿಂಗಳಿಗೆ 60 ಸಾವಿರ ರೂಪಾಯಿ ವೇತನ ನೀಡಿ, 70 ವರ್ಷದ ವೃದ್ಧರಿಂದ ತಮ್ಮ ಫೈಲುಗಳಿಗೆ ಮನೆಗೇ ತೆರಳಿ ಸಹಿ ಮಾಡಿಸಲು ಹಿಂದೆ ಮುಂದೆ ನೋಡುವುದಿಲ್ಲ.

    ಬುದ್ಧಿವಂತರ ಜಿಲ್ಲೆಯೆಂದು ಹಣೆಪಟ್ಟಿ ಹೊತ್ತಿರುವ ಮಂಗಳೂರಿನಲ್ಲಿ ಜನರ ಕಣ್ಣಿಗೆ ಮಣ್ಣೆರಚಲು ಕುಳಿತಲ್ಲೇ ಕೆಲಸ ಮಾಡುವ ಅಧಿಕಾರಿಗಳೇ ರಾಜಕಾರಣಿಗಳಿಗೆ ಬೇಕಾಗಿದ್ದಾರೆ. ಈಗ ಮತ್ತೆ ಅಂಥದ್ದೇ ವ್ಯಕ್ತಿತ್ವಕ್ಕಾಗಿ ಹುಡುಕಾಟ ನಡೆದಿರಬಹುದು !

    Share Information
    Advertisement
    Click to comment

    Leave a Reply

    Your email address will not be published. Required fields are marked *