DAKSHINA KANNADA
ಮಸೂದ್, ಪಾಝಿಲ್ ಹತ್ಯೆ ಪ್ರಕರಣ: ಎನ್‌ಐಎಗೆ ವಹಿಸದಿದ್ದರೆ ಪ್ರತಿಭಟನೆ
ಸುರತ್ಕಲ್, ಆಗಸ್ಟ್ 08: ‘ಸುಳ್ಯದ ಮಸೂದ್ ಹಾಗೂ ಸುರತ್ಕಲ್‌ನ ಪಾಝಿಲ್ ಹತ್ಯೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರವು ಎನ್‌ಐಎಗೆ (ರಾಷ್ಟ್ರೀಯ ತನಿಖಾ ದಳ) ವರ್ಗಾಹಿಸಿ ನಿಷ್ಪಕ್ಷಪಾತ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಸುರತ್ಕಲ್‌ನ ಮುಸ್ಲಿಂ ಐಕ್ಯತಾ ವೇದಿಕೆ ಆಗ್ರಹಿಸಿದೆ.
ಸುರತ್ಕಲ್ ಪ್ರದೇಶದ 27 ಮೊಹಲ್ಲಾಗಳ ಸಂಘಟನೆಯಾದ ಮುಸ್ಲಿಂ ಐಕ್ಯತಾ ವೇದಿಕೆಯ ಮುಖಂಡರು ಸೋಮವಾರ ಸುದ್ದಿಗೋಷ್ಠಿಯಲ್ಲಿ ನಡೆಸಿ, ಜಿಲ್ಲೆಯಲ್ಲಿ ನಡೆದ ದ್ವೇಷಬಿಂಬಿತ ಮೂರು ಹತ್ಯೆಗಳನ್ನು ತೀವ್ರವಾಗಿ ಖಂಡಿಸಿದರು. ವೇದಿಕೆಯ ಕಾನೂನು ಸಲಹೆಗಾರ ಉಮರ್ ಫಾರೂಕ್ ಮಾತನಾಡಿ, ‘ರಾಜ್ಯ ಸರ್ಕಾರಕ್ಕೆ ತಮ್ಮದೇ ತನಿಖಾ ಸಂಸ್ಥೆ, ಪೊಲೀಸ್ ವ್ಯವಸ್ಥೆ ಇದ್ದರೂ ಆ ವ್ಯವಸ್ಥೆಯ ಮೇಲೆ ವಿಶ್ವಾಸ ಹೊಂದಿಲ್ಲ. ಹೀಗಿರುವಾಗ ನಾವು ಹೇಗೆ ಆ ಸಂಸ್ಥೆಗಳ ಮೇಲೆ ವಿಶ್ವಾಸ ಹೊಂದಬೇಕು ಎಂದು ಪ್ರಶ್ನಿಸಿದರು.
ಪಾಖಿಲ್ ಹತ್ಯೆಯಾಗಿರುವ ದಿನ ಕಾನ ನಿವಾಸಿ ಸಲಾಂ ಎಂಬುವರನ್ನು ಹಿಂಬಾಲಿಸಿಕೊಂಡು ಬಂದ ವಾಹನದ ಕುರಿತು ತನಿಖೆಯಾಗಬೇಕು. ಪಾಝಿಲ್ ಹತ್ಯೆಯಲ್ಲಿ ಬಳಸಿದ ವಾಹನಗಳನ್ನು ನಿಖರವಾದ ಜಪ್ತಿ ಮಾಡಿಲ್ಲ. ತನಿಖಾಧಿಕಾರಿಗಳ ನಡೆ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ರಾಜ್ಯ ಸರ್ಕಾರವು 10 ದಿನಗಳ ಒಳಗೆ ಈ ಎರಡು ಪ್ರಕರಣಗಳನ್ನು ಎನ್‌ಐಎಗೆ ವಹಿಸದಿದ್ದರೆ ಸುರತ್ಕಲ್ ಪ್ರದೇಶದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಮೃತ ಪಾಝಿಲ್‍ನ ತಂದೆ ಉಮರ್ ಫಾರೂಕ್ ಮಾತನಾಡಿ, ‘ಮಗನ ಹತ್ಯೆಯ ನಿಖರ ಕಾರಣ ಹಾಗೂ ಕೆಲವೊಂದು ತನಿಖೆಯಲ್ಲಿನ ಲೋಪದೋಷಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸುವ ಅವಶ್ಯಕತೆ ಇದೆ’ ಎಂದರು. ಚೊಕ್ಕಬೆಟ್ಟು ಮೊಹಿಯುದ್ದೀನ್ ಜುಮ್ಮಾ ಮಸೀದಿ ಧರ್ಮಗುರು ಅಝೀಝ್ ದಾರಿಮಿ ಮಾತನಾಡಿ, ರಾಜ್ಯ ಸರ್ಕಾರವು ಪರಿಹಾರ ನೀಡುವಲ್ಲಿ ತಾರತಮ್ಯ ಸರಿಯಲ್ಲ. ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಮುಸ್ಲಿಂ ಸಮಾಜವನ್ನು ಬಿಂಬಿಸುವ ಪ್ರವೃತ್ತಿ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸದರು.
ಕೃಷ್ಣಾಪುರ ಬದ್ರಿಯ ಜುಮ್ಮಾ ಮಸೀದಿ ಅಧ್ಯಕ್ಷ ಬಿ.ಎಮ್ ಮಮ್ತಾಜ್ ಅಲಿ ಮಾತನಾಡಿ, ಮೃತ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡುವ ಇರಾದೆ ನಮ್ಮದು ಎಂದರು. ಕೃಷ್ಣಾಪುರ ಬದ್ರಿಯ ಜುಮ್ಮಾ ಮಸೀದಿಯ ಖತೀಬರಾದ ಉಮರ್ ಫಾರೂಕು, ಮುಸ್ಲಿಂ ಐಕ್ಯತಾ ವೇದಿಕೆಯ ಅಧ್ಯಕ್ಷ ಅಶ್ರಫ್ ಬದ್ರಿಯ, ಪ್ರದಾನ ಕಾರ್ಯದರ್ಶಿ ಕೆ.ಶರೀಫ್, ಅಬುಬಕ್ಕರ್ ಕುಳಾಯಿ, ಜಲೀಲ್ ಇದ್ದರು.