LATEST NEWS
ತನಗೆ ಕೊರೊನಾ, ಬದುಕುವುದು ಕಷ್ಟ ಎಂದು ಪತ್ನಿಗೆ ಸುಳ್ಳು ಹೇಳಿ ಪ್ರೇಯಸಿ ಜೊತೆ ಸಿಕ್ಕಿ ಬಿದ್ದ ಭೂಪ

ತನಗೆ ಕೊರೊನಾ, ಬದುಕುವುದು ಕಷ್ಟ ಎಂದು ಪತ್ನಿಗೆ ಸುಳ್ಳು ಹೇಳಿ ಪ್ರೇಯಸಿ ಜೊತೆ ಸಿಕ್ಕಿ ಬಿದ್ದ ಭೂಪ
ಮುಂಬೈ, ಸೆಪ್ಟೆಂಬರ್ 18: ತನಗೆ ಕೊರೊನಾ ಪಾಸಿಟೀವ್ ಆಗಿದೆ, ತಾನು ಇನ್ನು ಯಾವುದೇ ಕಾರಣಕ್ಕೂ ಬದುಕುವುದಿಲ್ಲ ಎಂದು ಸುಳ್ಳು ಹೇಳಿ ಪತ್ನಿಯ ಮನೆಯಿಂದ ಹೊರಟಿದ್ದ ವ್ಯಕ್ತಿಯೋರ್ವ ಇದೀಗ ಪ್ರೇಯಸಿ ಮನೆಯಲ್ಲಿ ಪತ್ತೆಯಾಗಿದ್ದಾನೆ.
ನವಿ ಮುಂಬೈ ಪಾಲಿಕೆಯ ಕ್ಲೀನಿಂಗ್ ಸೂಪರ್ ವೈಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮನೀಷ್ ಮಿಶ್ರ ಜೂನ್ 24 ರಂದು ನವಿ ಮುಂಬೈಯಿಂದ ನಾಪತ್ತೆಯಾಗಿದ್ದ.

ನಾಪತ್ತೆಗೆ ಮೊದಲು ತನ್ನ ಪತ್ನಿಗೆ ಮೊಬೈಲ್ ಮೂಲಕ ಕರೆ ಮಾಡಿದ್ದ ಯುವಕ ತನಗೆ ಕೊರೊನಾ ಪಾಸಿಟೀವ್ ಆಗಿದ್ದು, ತಾನು ಇನ್ನು ಬದುಕುವುದಿಲ್ಲ ಎಂದು ತಿಳಿಸಿದ್ದು, ಬಳಿಕ ತನ್ನ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿದ್ದಾನೆ.
ಈ ಸಂಬಂಧ ಆತನ ಪತ್ನಿ ಪೋಲೀಸರಿಗೆ ದೂರು ನೀಡಿದ್ದರು.
ದೂರಿನ ಹಿನ್ನಲೆಯಲ್ಲಿ ವ್ಯಕ್ತಿಯ ಪತ್ತೆಗೆ ಇಳಿದಿದ್ದ ಪೋಲೀಸರಿಗೆ ವ್ಯಕ್ತಿಯ ಮೊಬೈಲ್ ವಾಶಿ ಟವರ್ ರೇಂಜ್ ನಲ್ಲಿ ಸ್ವಿಚ್ ಆಫ್ ಆಗಿರುವುದು ತಿಳಿದು ಬಂದಿದೆ.
ಬಳಿಕ ಪೋಲೀಸರು ವಾಶಿ ಯ ಹಳ್ಳದಲ್ಲಿ ಸ್ಥಳೀಯ ಮೀನುಗಾರರ ಸಹಾಯದಿಂದ ಆತನ ಶವಕ್ಕಾಗಿಯೂ ಹುಡುಕಾಟ ನಡೆಸಿದ್ದರು.
ವ್ಯಕ್ತಿಯ ಬಗ್ಗೆ ಯಾವುದೇ ಕುರುಹು ಪತ್ತೆಯಾಗದ ಹಿನ್ನಲೆಯಲ್ಲಿ ಪೋಲೀಸರು ನವಿ ಮುಂಬೈನ ಎಲ್ಲಾ ಸಿಸಿ ಕ್ಯಾಮರಾಗಳನ್ನು ಸರ್ಚ್ ಮಾಡಿದ್ದರು.
ಈ ಸಂದರ್ಭದಲ್ಲಿ ಐರೋಲಿ ಎಂಬಲ್ಲಿ ಮನೀಷ್ ಮಿಶ್ರ ಯುವತಿಯೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿರುವ ವಿಚಾರ ತಿಳಿದು ಬಂದಿದೆ.
ಈ ಆಧಾರದಲ್ಲಿ ತನಿಖೆ ನಡೆಸಿದ ಪೋಲೀಸರಿಗೆ ಮನೀಷ್ ಮಿಶ್ರ ತನ್ನ ಪ್ರೇಯಸಿಯೊಂದಿಗೆ ಇಂಧೋರ್ ನಲ್ಲಿ ನೆಲೆಸಿರುವ ವಿಚಾರ ಪತ್ತೆಯಾಗಿದೆ.
ಇದೀಗ ನವಿ ಮುಂಬೈ ಪೋಲೀಸರು ನಾಪತ್ತೆ ದೂರಿನ ಹಿನ್ನಲೆಯಲ್ಲಿ ಆತನನ್ನು ಪೋಲೀಸ್ ಠಾಣೆಗೆ ಕರೆತರಲು ಇಂಧೋರ್ ಗೆ ಪ್ರಯಾಣ ಬೆಳೆಸಿದ್ದಾರೆ.