KARNATAKA
ಮಂತ್ರಾಲಯ ವಿದ್ಯಾಪೀಠದ ವಾಹನ ಪಲ್ಟಿ – ನಾಲ್ವರು ದುರ್ಮರಣ
ಮಂತ್ರಾಲಯ ಜನವರಿ 22: ಮಂತ್ರಾಲಯದ ಸಂಸ್ಕೃತ ವಿದ್ಯಾಪೀಠದ ವಾಹನ ರಸ್ತೆಯಲ್ಲಿ ಪಲ್ಟಿಯಾದ ಪರಿಣಾಮ ಚಾಲಕ ಸೇರಿದಂತೆ ನಾಲ್ವರು ಸಾವನಪ್ಪಿದ ಘಟನೆ ಸಿಂಧನೂರು ನಗರದ ಹೊರವಲಯದಲ್ಲಿ ಈ ಘಟನೆ ಸಂಭವಿಸಿದೆ.
ಕ್ರೂಶರ್ ವಾಹನದ ಚಾಲಕ ಕಂಸಾಲಿ ಶಿವ (20), ವಿದ್ಯಾರ್ಥಿಗಳಾದ ಹಯವದನ (18), ಸುಜಯೇಂದ್ರ (22), ಅಭಿಲಾಷ್ (20) ಪ್ರಾಣ ಕಳೆದುಕೊಂಡವರು. ಕ್ರೂಶರ್ ವಾಹನದಲ್ಲಿ ಒಟ್ಟು 14 ಜನರು ಮಂತ್ರಾಲಯದಿಂದ ಕೊಪ್ಪಳದ ಆನೆಗುಂದಿಯ ನರಹರಿ ತೀರ್ಥರ ವೃಂದಾವನಕ್ಕೆ ತೆರಳುತ್ತಿದ್ದರು. ಸಿಂಧನೂರು ನಗರದ ಹೊರವಲಯದಲ್ಲಿ ಬರುತ್ತಿದ್ದಂತೆ ಕ್ರೂಶರ್ ವೇಗದಲ್ಲಿ ಇದ್ದ ಕಾರಣ ಆಕ್ಸಲ್ ಕಟ್ ಆಗಿ ಪಲ್ಟಿ ಹೊಡೆದಿದೆ.
ಕ್ರೂಶರ್ನಲ್ಲಿದ್ದ ಇನ್ನುಳಿದವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸಿಂಧನೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲು ಮಾಡಲಾಗಿದೆ.