LATEST NEWS
ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಲು ಪ್ರತಿಜ್ಞೆ ಮಾಡಿದ ಮಣಿಪಾಲ್ ವಿದ್ಯಾರ್ಥಿಗಳು
ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಲು ಪ್ರತಿಜ್ಞೆ ಮಾಡಿದ ಮಣಿಪಾಲ್ ವಿದ್ಯಾರ್ಥಿಗಳು
ಉಡುಪಿ ಅಕ್ಟೋಬರ್ 15: ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್), ಮಣಿಪಾಲ್ ಅಕಾಡೆಮಿ ಫಾರ್ ಹೈಯರ್ ಎಜುಕೇಶನ್ (ಮಾಹೆ) ಇದರ ಇಕಾಸೊಫಿಕಲ್ ಎಸ್ಥೆಟಿಕ್ಸ್ ವಿದ್ಯಾರ್ಥಿಗಳು ಇದೇ ಶುಕ್ರವಾರ ಮಾಹೆಯ ಆಡಳಿತ ಕಟ್ಟಡದ ಮುಂದೆ ಕುಳಿತು ವಿಶ್ವವಿದ್ಯಾಲಯದ ಜಿಯೋಪೊಲಿಟಿಕ್ಸ್, ಕಮ್ಯುನಿಕೇಷನ್, ಯುರೋಪಿಯನ್ ಸ್ಟಡೀಸ್. ಹ್ಯೂಮಾನಿಟೀಸ್, ಎಂಜಿನಿಯರಿಂಗ್ ಮತ್ತು ಹೆಲ್ತ್ ಸೈನ್ಸ್ ವಿದ್ಯಾರ್ಥಿಗಳೊಂದಿಗೆ ‘ಹವಾಮಾನ ಸಂಭಾಷಣೆ’ ಎಂಬ ವಿನೂತನ ಕಾರ್ಯಕ್ರಮ ಆರಂಭಿಸಲಾಯಿತು.
ಸಂಭಾಷಣೆಯನ್ನು ಪ್ರಾರಂಭಿಸಿದ ಪಾವನಿ ಪಾಂಡೆ, ಅನುಷಾ ಭಟ್, ಸೌಮಿ ಪ್ರತೀಕ್, ಸುಬ್ರಮಣ್ಯ ಕಿಣಿ, ನಿಯತಿ, ತನೀಶ್ಕಾ, ವಿಜೇತ್ ಕೃಷ್ಣ ಹಾಗೂ ಕೃಷ್ಣ ಕುಮಾರ್ ಶರ್ಮಾ ಅವರು ಹವಾಮಾನ ಬದಲಾವಣೆಯು ಅವರ ಜೀವನಶೈಲಿಯ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಮತ್ತು ನಾವು ಹೇಗೆ ಹವಾಮಾನ ಬದಲಾವಣೆಗೆ ಕಾರಣವಾಗುತ್ತಿದ್ದೇವೆ ಎಂಬುದರ ಕುರಿತು ಮಾತನಾಡಿದರು.
ಪ್ರಾದೇಶಿಕ, ರಾಷ್ಟ್ರೀಯ ವಿಷಯಗಳಿಂದ ಅಂತರರಾಷ್ಟ್ರೀಯ ಮಟ್ಟದ ವಿಷಯಗಳ ಕುರಿತು ಚರ್ಚಿಸಲಾಯಿತು, ಉತ್ತಮ ಭವಿಷ್ಯವನ್ನು ಸೃಷ್ಟಿಸುವತ್ತ ಈ ಪೀಳಿಗೆಯ ಸೂಕ್ಷ್ಮ ಪ್ರಜ್ಞೆಯನ್ನು ಹೊಂದಿರುವುದು ವಿಶೇಷವೆನಿಸಿತು. ಕಡಲತೀರದ ಸುತ್ತಲೂ ಹಬ್ಬಿರುವ ಕಸದ ಕುರಿತು ಮಾತನಾಡಿ ಮಾಧ್ಯಮ ವಿದ್ಯಾರ್ಥಿ ಸ್ವೀಕೃತಿ ಗಮನ ಸೆಳೆದರು. ಅಂಡಮಾನ್ ಮತ್ತು ನಿಕೋಬಾರ್ ಮತ್ತು ಸುತ್ತಮುತ್ತಲ ಕಡಲತೀರದಲ್ಲಿ ಪ್ರಯಾಣಿಸುತ್ತಿದ್ದಾಗ ಆದ ಅನುಭವವನ್ನು ಹ್ಯೂಮಾನಿಟೀಸ್ ವಿದ್ಯಾರ್ಥಿ ಅಭಿರಾಮ್ ನೆನಪಿಸಿಕೊಂಡರು.
ಅನುಷಾ ಭಟ್ ಬದಲಾಗಿರುವ ಸನ್ನಿವೇಶದ ಕುರಿತು ಮಾತನಾಡಿ ಕಳೆದು ಹೋದ ಸಮಯ ಹಿಂತಿರುಗಿಸಲು ಹೇಗೆ ಸಾಧ್ಯವಿಲ್ಲ ಎಂಬುದನ್ನು ವಿಸ್ತರಿಸಿದರು. ಜಿಸಿಪಿಎಎಸ್ ವಿದ್ಯಾರ್ಥಿನಿ ನಿಯತಿ, ಯಾವುದೇ ಬಿಸಿ ಅಥವಾ ತಂಪು ಪಾನೀಯವನ್ನು ಕುಡಿಯುವಾಗ ಪ್ಲಾಸ್ಟಿಕ್ ಸ್ಟ್ರಾಗಳು, ಕಪ್ಗಳನ್ನು ಬಳಸುವುದನ್ನು ತಪ್ಪಿಸಲು ನಾವು ಮರುಬಳಕೆ ಮಾಡಬಹುದಾದ ಪಾತ್ರೆಗಳಾದ ಸ್ಟೀಲ್ ಗ್ಲಾಸ್, ಕಪ್, ಸ್ಟ್ರಾಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಹಂಚಿಕೊಂಡರು. ತಾವು ಮತ್ತು ಇತರ ಸಹಪಾಠಿಗಳು ತಮ್ಮ ತರಗತಿಯಲ್ಲಿ ಕೆಲವು ಸ್ಟೀಲ್ ಗ್ಲಾಸ್, ಕಪ್ ಹೇಗೆ ಇಟ್ಟುಕೊಂಡಿದ್ದಾರೆ ಎಂಬುದರ ಕುರಿತು ಅವರು ಮಾಹಿತಿ ನೀಡಿದರು.
ಕೆಲವು ವಿದ್ಯಾರ್ಥಿಗಳು ತಮ್ಮ ಬಾಲ್ಯದಿನಗಳನ್ನು ನೆನೆಸಿಕೊಳ್ಳುತ್ತಾ ಹೇಗೆ ಕೆಲವು ದಿನಬಳಕೆಯ ವಸ್ತುಗಳ ಪ್ಲಾಸ್ಟಿಕ್ ರಹಿತಬಾಗಿದ್ದವು ಎಂಬುದನ್ನು ನೆನಪಿಸಿಕೊಂಡರು. ಭಾರತದಲ್ಲಿ ಕಳೆದ ಮೂರು ದಶಕಗಳಲ್ಲಿ ಜನರು ಹೆಚ್ಚು ಹೆಚ್ಚು ಪ್ಲಾಸ್ಟಿಕ್ ಅನ್ನು ಬಳಸಲು ಪ್ರಾರಂಭಿಸಿದ್ದಾರೆ ಎಂಬ ಅಂಶದತ್ತ ಅವರು ಗಮನ ಸೆಳೆದರು. ಈ ಅಭ್ಯಾಸವನ್ನು ನಿಧಾನವಾಗಿ ತಗ್ಗಿಸುವುದಾಗಿ ಅವರು ಪ್ರತಿಜ್ಞೆ ಮಾಡಿದರು.
ನಮ್ಮ ನಗರಗಳಾದ ದೆಹಲಿ, ಬೆಂಗಳೂರು ಹೇಗೆ ಉಸಿರುಗಟ್ಟಿಸುತ್ತಿದೆ ಅಥವಾ ಬಿಸಿಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಚರ್ಚಿಸಿದರು. ಸುಬ್ರಮಣ್ಯ ಕಿಣಿ, ಭಾರೀ ಮಳೆಯ ನಂತರವೂ ಮಣಿಪಾಲ್‌ಗೆ ನೀರು ಒದಗಿಸುವ ಬಜೆ ಅಣೆಕಟ್ಟು ಅರ್ಧದಷ್ಟು ಮಾತ್ರ ತುಂಬಿದೆ ಮತ್ತು ಈ ಇಲ್ಲಿಯ ನೀರಿನ ಬೇಡಿಕೆಗಳನ್ನು ಪೂರೈಸಲು ಅದು ಸಾಕಾಗುವುದಿಲ್ಲ ಎಂಬ ವಿಚಾರವನ್ನು ಗಮನಕ್ಕೆ ತಂದರು. ಅಭಿವೃದ್ಧಿಯ ನಮ್ಮ ಪ್ರಯತ್ನದಲ್ಲಿ ನಾವು ನಮ್ಮ ಪರಿಸರವನ್ನು ವ್ಯಾಪಕವಾಗಿ ಹಾನಿಗೊಳಿಸಿದ್ದೇವೆ. ಮರಗಳನ್ನು ಕಡಿಯುವುದು ಪರಿಸರ ವ್ಯವಸ್ಥೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ನದಿಗಳು ಮತ್ತು ತೊರೆಗಳ ಬದಲಾಗುತ್ತಿರುವ ಸ್ವರೂಪದ ಬಗ್ಗೆ ವಿದ್ಯಾರ್ಥಿಗಳು ಮಾತನಾಡಿದರು.
ಈ ಗುಂಪು ಪ್ರತಿ ವಾರ ಸಭೆ ಸೇರಿ ಸಸಿಗಳನ್ನು ನೆಡುವುದು, ಅರಣ್ಯ ಮತ್ತು ಹೆಚ್ಚಿನ ಸಸ್ಯವರ್ಗದ ಪ್ರದೇಶಗಳಿಂದ ತ್ಯಾಜ್ಯವನ್ನು ತೆರವುಗೊಳಿಸುವುದು, ಮಣಿಪಾಲ್‌ನ ಉಡುಪಿ ಮತ್ತು ಸುತ್ತಮುತ್ತಲಿನ ಸಾರ್ವಜನಿಕ ಸ್ಥಳಗಳಲ್ಲಿ ಡಸ್ಟ್‌ಬಿನ್‌ಗಳನ್ನು ಅಳವಡಿಸುವುದು ಮುಂತಾದ ಚಟುವಟಿಕೆಗಳನ್ನು ಕೈಗೊಳ್ಳಲಿದೆ.
ಮಹಾತ್ಮ ಗಾಂಧಿಯವರು “ನೀವು ಜಗತ್ತಿನಲ್ಲಿ ನೋಡಲು ಬಯಸುವ ಬದಲಾವಣೆ ನಿಮ್ಮಿಂದಲೇ ಶುರುವಾಗಲಿ” ಎಂದು ಬಹಳ ಹಿಂದೆಯೇ ನಮಗೆ ದಾರಿ ತೋರಿಸಿದ್ದಾರೆ ಎಂದು ವಿದ್ಯಾರ್ಥಿಗಳು ಅಭಿಪ್ರಾಯಪಟ್ಟರು. ಅವರು ಕೈಗೊಂಡಿರುವ ಈ ಕಾರ್ಯ ಬೇರೆಯವರಿಗೆ ಮಾದರಿಯಾಗಲಿ ಎಂಬುದು ಅವರ ಹಂಬಲ.