UDUPI
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಹೊರರೋಗಿ ವಿಭಾಗ ತಾತ್ಕಾಲಿಕ ಸ್ಥಗಿತ
ಉಡುಪಿ ಜುಲೈ 20: ಉಡುಪಿಯಲ್ಲಿ ಕೊರೊನಾ ಸೊಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆ, ಆಸ್ಪತ್ರೆಯ ಸಿಬ್ಬಂದಿಗಳಿಗೂ ಕೊರೊನಾ ಸೊಂಕಿನ ಭೀತಿ ಹಿನ್ನಲೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಹೊರ ರೋಗಿ ವಿಭಾಗವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಜುಲೈ 21ರಿಂದ ಜುಲೈ 26ವರೆಗೆ ಎಲ್ಲಾ ಹೊರರೋಗಿ ಸೇವಾ ಸೌಲಭ್ಯಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೆಎಂಸಿ ವೈದ್ಯಕೀಯ ಅಧೀಕ್ಷಕರು ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.ಜುಲೈ 27ರ ನಂತರ ಹೊರರೋಗಿ ವಿಭಾಗವು ಎಂದಿನಂತೆ ಸೇವೆ ಸಲ್ಲಿಸಲಿದೆ.
ಉಡುಪಿಯಲ್ಲಿ ಕೊರೊನಾ ಪ್ರಕರಣ ಏರಿಕೆಯಾಗುತ್ತಿದ್ದು, ಮಣಿಪಾಲ ಆಸ್ಪತ್ರೆಯ ಸಿಬ್ಬಂದಿಗಳಲ್ಲೂ ಕೊರೊನಾ ಲಕ್ಷಣ ಕಂಡು ಬಂದ ಹಿನ್ನಲೆ ಈ ಕ್ರಮ ಕೈಗೊಳ್ಳಲಾಗಿದೆ. ಸದ್ಯ ಈ ಸಂದರ್ಭ ಇಡೀ ಆಸ್ಪತ್ರೆಯನ್ನು ಸ್ವಚ್ಛಗೊಳಿಸಲಾಗುವುದು ಮತ್ತು 200 ಕೋವಿಡ್ 19 ಹಾಸಿಗೆಯನ್ನು ಸಿದ್ಧಪಡಿಸಲಾಗುತ್ತಿದೆ. ಹೀಗಾಗಿ ಕೆಲವು ದಿನಗಳ ಮಟ್ಟಿಗೆ ಹೊರರೋಗಿ ವಿಭಾಗವನ್ನು ಮುಚ್ಚುವ ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ.
ಈ ನಡುವೆ ಇಂದಿನಿಂದ ವಿಡಿಯೋ ಸಮಾಲೋಚನಾ ಸೌಲಭ್ಯವನ್ನು ಆರಂಭಿಸಿದೆ. ಈ ಸೇವೆಯಡಿಯಲ್ಲಿ ವೈದ್ಯರು ದೂರವಾಣಿ ಮೂಲಕ ಅಥವಾ ವಿಡಿಯೋ ಕರೆ ಮೂಲಕ ಸಮಾಲೋಚನೆ ಮತ್ತು ವೈದ್ಯಕೀಯ ಸಲಹೆಯನ್ನು ನೀಡಲಿದ್ದಾರೆ. ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 9.00ರಿಂದ ಸಂಜೆ 4.00ರವರೆಗೆ 080 47192235 ಸಂಖ್ಯೆಗೆ ದೂರವಾಣಿ ಕರೆ ಮಾಡುವುದರ ಮೂಲಕ ಎಲ್ಲಾ ವಿಭಾಗದ ವೈದ್ಯರನ್ನು ವೀಡಿಯೊ ಸಮಾಲೋಚನೆ ಮೂಲಕ ಸಂಪರ್ಕಿಸಬಹುದಾಗಿದೆ. ಈಗಾಗಲೇ ರಾಜ್ಯಾದ್ಯಂತ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದ ಹಿನ್ನಲೆ ರೋಗಿಗಳ ಬೇಡಿಕೆಯ ಮೇರೆಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಇದರಿಂದಾಗಿ ಹೊರ ಜಿಲ್ಲೆಯ ರೋಗಿಗಳಿಗೆ ಉಪಯೋಗವಾಗಲಿದೆ ಎಂದು ಮಣಿಪಾಲ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಮಾಹಿತಿ ನೀಡಿದ್ದಾರೆ.