DAKSHINA KANNADA
ಆಹಾರ ಪಥೋತ್ಸವದಲ್ಲಿ ಬೀದಿ ವ್ಯಾಪಾರ ನಿಯಮಾವಳಿ ಉಲ್ಲಂಘನೆ, ಬೀದಿ ವ್ಯಾಪಾರಸ್ಥರ ಸಂಘ ಆರೋಪ..!
ಮಂಗಳೂರು : ಮಂಗಳೂರು ನಗರದ ಮಂಗಳಾ ಕ್ರೀಡಾಂಗಣದ ಬಳಿ ಏರ್ಪಡಿಸಿದ್ದ ಆಹಾರ ಉತ್ಸವದಲ್ಲಿ ಬೀದಿ ಬದಿ ವ್ಯಾಪಾರ ನಿಯಮಾವಳಿಯನ್ನು ಸಂಪೂರ್ಣ ಉಲ್ಲಂಘಿಸಿ ನಡೆಸಲಾಗಿದೆ ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘ ಆರೋಪಿಸಿದೆ.
ಆಹಾರ ಉತ್ಸವದ ಪರಿಸರದಲ್ಲಿ ದಿನನಿತ್ಯ ಬೀದಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳನ್ನು ಬಲವಂತವಾಗಿ ಸ್ಟಾಲ್ ಗಳನ್ನು ಹಾಕಿಸಿ 20% ಕಮಿಷನ್ ಪಡೆಯಲು ದುಪ್ಪಟ್ಟು ದರಗಳಿಗೆ ಆಹಾರ ಮಾರಾಟ ಮಾಡಿಸಿರುತ್ತಾರೆ ಅಲ್ಲದೆ ಬೀದಿ ಬದಿಯಲ್ಲಿ ಆಹಾರ ಮಾರಾಟದ ದರಗಳು ಪಂಚಾತಾರ ಹೋಟೆಲುಗಳ ದರಗಳನ್ನು ವಿಧಿಸಿ ಸಾರ್ವಜನಿಕರ ಜೇಬಿಗೂ ಕತ್ತರಿ ಹಾಕಲಾಗಿದೆ.
ಬೀದಿ ಆಹಾರ ಮಾರಾಟಗಾರರಿಗೆ ತರಬೇತಿ ನೀಡಿ ಪ್ರಮಾಣ ಪತ್ರ ನೀಡಬೇಕಾದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದವರು ರಾಜಕೀಯ ಪ್ರಭಾವಕ್ಕೆ ಒಳಗಾಗಿ ಪ್ರಮಾಣ ಪತ್ರ ನೀಡಿರುತ್ತಾರೆ ಎಂದು ಬೀದಿಬದಿ ವ್ಯಾಪಾರಸ್ಥರ ಸಂಘ ಆರೋಪಿಸಿದೆ.
ಬಡ ಬೀದಿ ವ್ಯಾಪಾರಿಗಳು ತಮ್ಮ ಹೊಟ್ಟೆಪಾಡಿಗಾಗಿ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಿದರೆ ಕಾರ್ಯಾಚರಣೆ ಮಾಡುವ ಪಾಲಿಕೆ ಅಧಿಕಾರಿಗಳು, ಕೇಸು ದಾಖಲಿಸುವ ಪೊಲೀಸರು ರಸ್ತೆ ಸಂಚಾರವನ್ನೇ ನಿಷೇಧಿಸಿ ಆಹಾರ ಉತ್ಸವ ನಡೆಸಲು ಅವಕಾಶ ಕೊಟ್ಟಿರುವುದು ಎಷ್ಟು ಸರಿ? ಬಡ ಬೀದಿ ವ್ಯಾಪಾರಿಗಳಿಗೆ ಒಂದು ನ್ಯಾಯ, ರಾಜಕೀಯ ಪ್ರಭಾವಿ ಕಮಿಷನ್ ದಂಧೆಕೋರರಿಗೆ ಸಾರ್ವಜನಿಕ ರಸ್ತೆಗಳನ್ನೇ ಅಕ್ರಮವಾಗಿ ವ್ಯಾಪಾರಕ್ಕೆ ಬಳಸಿಕೊಂಡು ಕಾನೂನು ನಿಯಮ ಮೀರಿರುವ ಬಲಾಡ್ಯರಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಪೊಲೀಸರೆ ಕಾವಲು ನಿಂತು ವ್ಯಾಪಾರಕ್ಕೆ ಅನುಕೂಲತೆ ಮಾಡಿಕೊತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ಗೌರವಧ್ಯಕ್ಷ ಬಿಕೆ ಇಮ್ತಿಯಾಝ್ ಅವರು ಬೀದಿ ಬದಿ ವ್ಯಾಪಾರ ನಿಯಮಾವಳಿ ಉಲ್ಲಂಘನೆ ಮಾಡಿರುವ ಬಗ್ಗೆ ಪಾಲಿಕೆ ಆಯುಕ್ತರಿಗೆ ವಾರದ ಹಿಂದೆಯೇ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದರೂ ರಾಜಕೀಯ ಪ್ರಭಾವದಿಂದಾಗಿ ಕ್ರಮ ಕೈಗೊಂಡಿಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.