LATEST NEWS
Mangaluru : ಮಸೀದಿಗಳ ಸಮೃದ್ಧಿ ಎಲ್ಲರ ಜವಾಬ್ದಾರಿ, ಬಜಾಲ್ ನಂತೂರು ನವೀಕೃತ ಮಸೀದಿ ಉದ್ಘಾಟಿಸಿದ ಆಟಕೋಯ ತಂಙಳ್
ಮಂಗಳೂರು: ಮಸೀದಿಗಳು ಅಲ್ಲಾಹನ ಭವನಗಳು. ಅಲ್ಲಾಹು ನೀಡಿದ ಸಂಪತ್ತಿನ ಸಮೃದ್ಧಿಯಿಂದ ಸುಂದರ ಮಸೀದಿಗಳು ನಿರ್ಮಾಣವಾಗುತ್ತಿದ್ದು, ಅದನ್ನು ಖಾಲಿ ಬಿಡದೆ ಎಲ್ಲ ಹೊತ್ತೂ ಸಾಮೂಹಿಕ ನಮಾಝ್ ಮಾಡುವ ಮೂಲಕ ಜನರಿಂದ ಸಮೃದ್ಧವಾಗಿಡಬೇಕು ಎಂದು ಹಿರಿಯ ಧಾರ್ಮಿಕ ವಿದ್ವಾಂಸ ಕುಂಬೋಳ್ ಅಸ್ಸಯ್ಯದ್ ಕೆ.ಎಸ್.ಆಟಕೋಯ ತಂಙಳ್ ಹೇಳಿದರು.
ಬಜಾಲ್ ನಂತೂರು ಬದ್ರಿಯಾ ಜುಮಾ ಮಸೀದಿಯ ನವೀಕೃತ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.
ಮಸೀದಿಗಳಿಗೆ ತನ್ನದೇ ಆದ ಶಿಸ್ತು, ಗೌರವ ಇದೆ. ಅದನ್ನು ಚಾಚೂ ಪಾಲಿಸಬೇಕು. ನಮಾಝ್, ಕುರ್‌ಆನ್ ಪಠಣ, ಇತರ ತಸ್ಬೀಹ್ ಬಿಟ್ಟರೆ, ಅನಗತ್ಯ ವಿಷಯಗಳ ಚರ್ಚೆಗೆ ಮಸೀದಿ ವೇದಿಕೆಯಾಗಬಾರದು. ಜಮಾತಿನವರ ಸಮಸ್ಯೆಗೆ ಆಡಳಿತ ಸಮಿತಿ ಕಿವಿಯಾಗಬೇಕು. ನೊಂದವರ ಸಮಸ್ಯೆಗಳಿಗೆ ಮಸೀದಿಗಳು ಸಾಂತ್ವನ ತಾಣವಾಗಿ ಪರಿಹಾರ ಒದಗಿಸಬೇಕು ಎಂದು ತಂಙಳ್ ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ಕ್ಷೇತ್ರ ವಿಂಗಡಣೆಗೆ ಮೊದಲು ನನ್ನ ತಂದೆ ಮತ್ತು ನಾನು ಪ್ರತಿನಿಧಿಸುತ್ತಿದ್ದ ಪ್ರದೇಶ ಇದಾಗಿದ್ದು, ಬಜಾಲನ್ನು ಮರೆಯಲು ಸಾಧ್ಯವಿಲ್ಲ. ಇದು ಜನರ ಮಧ್ಯೆ, ಪ್ರೀತಿ, ವಿಶ್ವಾಸ, ಕ್ಷಮೆಯ ಊರಾಗಬೇಕು. ಯಾರಿಗೂ ಪ್ರತೀಕಾರ ಮನೋಭಾವ ಬೇಡ ಎಂದರು.
ಯನೆಪೋಯ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಯೆನೆಪೋಯ ಅಬ್ದುಲ್ಲಾ ಕುಂಞಿ ಮಾತನಾಡಿ, ಇಲ್ಲಿ ಸುಂದರ ಮಸೀದಿ ನಿರ್ಮಾಣವಾಗಿದ್ದು, ಮಸೀದಿ ಕಟ್ಟಿ ಶುಕ್ರವಾರದ ನಮಾಝ್‌ಗೆ ಮಾತ್ರ ಸೀಮಿತ ಮಾಡದೇ, ಊರಿನ ಎಲ್ಲರೂ ದಿನದ ಐದು ಹೊತ್ತಿನ ನಮಾಝನ್ನೂ ಮಸೀದಿಗೆ ಬಂದು ನಿರ್ವಹಿಸಬೇಕು ಎಂದರು
ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಹಾಗೂ ಕಾರ್ಪೊರೇಟರ್ ಅಬ್ದುಲ್ ರವೂಫ್ ಅದ್ಯಕ್ಷ ವಹಿಸಿದರು . ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಶುಭ ಹಾರಿಸಿದರು.
ಮಸೀದಿ ಖತೀಬ್ ಪಿ.ಎ. ಅಬ್ದುಲ್ ನಾಸಿರ್ ಸಅದಿ ಕುತುಬಾ ಪಾರಾಯಣ ಮಾಡಿ ನಮಾಝ ನಿರ್ವಹಿಸಿದರು, ಎಸ್. ಎಂ. ರಶೀದ್ ಹಾಜಿ, ಗೌಸಿಯ ಜುಮಾ ಮಸೀದಿಯ ಮುದರ್ರಿಸರಾದ ಝುಬೈರ್ ಧಾರ್ಮಿ, ಕಾರ್ಪರೇಟರ್ಗಳಾದ ಅಶ್ರಫ್ ಬಜಾಲ್, ಲತೀಫ್ ಕಂದಕ, ಎಚ್ ಎಚ್ ಅಮೀನ್, ರವೂಫ್ ಸುಲ್ತಾನ್, ಫಾರದ್ ಪಲ್ನೀರ್, ಅಹಮದ್ ಭಾವ ಪಡೀಲ್, ಬಿ ಎನ್ ಅಬ್ಬಾಸ್, ಬಿ ಪಕ್ರುದ್ದೀನ್, ಎಚ್ ಎಸ್ ಹನೀಫ್, ಎಂ ಎಚ್ ಮುಹಮ್ಮದ್, ಬಿ ಜೆ ಎಂ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್, ಗೌಸಿಯ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಝಕ್, ಅಮದ್ ಭಾವ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.
ಸದರ್ ಮುಹಲ್ಲಿಮ್ ಅಬೂಬಕ್ಕರ್ ಮುಸ್ಲಿಯಾರ್ ಸ್ವಾಗತಿಸಿ ಕೊನೆಗೆ ವಂದಿಸಿದರು.