LATEST NEWS
ಮಂಗಳೂರು :ಬೆಂಗ್ರೆಯಲ್ಲಿ ಎಸ್ ಸಿಡಿಸಿಸಿ ಬ್ಯಾಂಕ್ 112ನೇ ಶಾಖೆ ಲೋಕಾರ್ಪಣೆ..!
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇದರ 112ನೇ ಶಾಖೆಯ ಉದ್ಘಾಟನಾ ಸಮಾರಂಭ ಸ್ಯಾಂಡ್ ಪಿಟ್ ಬೆಂಗ್ರೆಯಲ್ಲಿ ಜರುಗಿತು.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇದರ 112ನೇ ಶಾಖೆಯ ಉದ್ಘಾಟನಾ ಸಮಾರಂಭ ಸ್ಯಾಂಡ್ ಪಿಟ್ ಬೆಂಗ್ರೆಯಲ್ಲಿ ಜರುಗಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಮಾತನಾಡಿ, “ಬೆಂಗ್ರೆಯ ಜನರು ಬ್ಯಾಂಕ್ ಕೆಲಸ ಕಾರ್ಯಗಳಿಗೆ ಹೋಗಬೇಕಿದ್ದರೆ ಪಣಂಬೂರು, ಕೂಳೂರು, ಸ್ಟೇಟ್ ಬ್ಯಾಂಕ್ ಕಡೆಗೆ ಬಸ್ಸು ಇಲ್ಲವೇ ದೋಣಿಯ ಮೂಲಕ ಸಂಚಾರ ನಡೆಸಬೇಕಿತ್ತು.
ಇದರಿಂದ ಸಮಯ ಮತ್ತು ಹಣ ಎರಡೂ ವ್ಯರ್ಥವಾಗುತ್ತಿತ್ತು.
ಈ ಸಂದರ್ಭದಲ್ಲಿ ಬೆಂಗ್ರೆಯ ಜನಸಾಮಾನ್ಯರಿಗೆ ನಿಮ್ಮ ಜೊತೆಗೆ ನಮ್ಮ ಬ್ಯಾಂಕ್ ಇದೆ,
ನೂತನ 112ನೇ ಶಾಖೆಯನ್ನು ಇಲ್ಲೇ ಆರಂಭಿಸುತ್ತೇವೆ ಎಂದು ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಮುಂದೆ ಬಂದಿದ್ದಾರೆ,
ಅದಕ್ಕಾಗಿ ಅವರು ಅಭಿನಂದನಾರ್ಹರು. ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿರುವ ಎಟಿಎಂ, ನೆಫ್ಟ್ ಸೇರಿದಂತೆ ಎಲ್ಲಾ ಸೇವೆಯನ್ನು ಪಡೆಯಲು ಎಸ್ ಸಿಡಿಸಿಸಿ ಬ್ಯಾಂಕ್ ನಿಂದ ಸಾಧ್ಯವಾಗಿದೆ.
ಜನಸಾಮಾನ್ಯರಿಗೆ ಅವರ ಕೊಡುಗೆ ಸ್ಮರಣಾರ್ಹ. ಕೊರೋನಾ ಸಂದರ್ಭದಲ್ಲಿ ಜಿಲ್ಲಾಡಳಿತಕ್ಕೆ ಪೂರ್ಣ ರೀತಿಯಲ್ಲಿ ಸಹಕಾರ ನೀಡಿರುವ ಬ್ಯಾಂಕ್ ಆಶಾ ಕಾರ್ಯಕರ್ತರಿಗೆ ಆರ್ಥಿಕ ನೆರವು, ಫುಡ್ ಕಿಟ್, ಆಂಬುಲೆನ್ಸ್ ಸೇವೆ, ಕ್ವಾರಂಟೈನ್ ಹೀಗೇ ಸಮಾಜಕ್ಕೆ ಸಾಕಷ್ಟು ನೆರವು ನೀಡುತ್ತಾ ಬಂದಿದೆ.
ಸಹಕಾರ ಕ್ಷೇತ್ರದಲ್ಲಿ ದೇಶದಲ್ಲೇ ದೊಡ್ಡ ಕ್ರಾಂತಿಯನ್ನು ಮಾಡಿರುವ ರಾಜೇಂದ್ರ ಕುಮಾರ್ ಅವರು ಜಿಲ್ಲೆಗೆ ಹೆಸರು ತಂದಿದ್ದಾರೆ” ಎಂದರು.
ಬಳಿಕ ಮಾತಾಡಿದ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು, “ಬ್ಯಾಂಕ್ ವ್ಯವಹಾರ ಸರಾಗವಾಗಿ ನಡೆಯುವಲ್ಲಿ ಗ್ರಾಹಕರು ಬ್ಯಾಂಕ್ ಮೇಲಿಟ್ಟಿರುವ ಭರವಸೆ ಪ್ರಮುಖವಾಗುತ್ತದೆ.
ಮೀನುಗಾರರು ಶ್ರಮ ಜೀವಿಗಳು. ಕಡಲಿಗೆ ಹೋಗಿ ಮೀನು ಹಿಡಿದು ತಮ್ಮ ಕುಟುಂಬದ ರಕ್ಷಣೆಯ ಜೊತೆಗೆ ಸಮಾಜದ ಪರ ಕಾಳಜಿ ಉಳ್ಳವರು.
ಮಹಿಳೆಯರ ಅಭಿವೃದ್ಧಿಗಾಗಿ ಬ್ಯಾಂಕ್ ಹತ್ತಾರು ಯೋಜನೆಗಳನ್ನು ರೂಪಿಸಿದೆ.
ಈ ನಿಟ್ಟಿನಲ್ಲಿ 46 ಹೊಸ ಸ್ವಸಹಾಯ ಸಂಘಗಳನ್ನು ಪ್ರಾರಂಭಿಸಲಾಗಿದೆ. ಪಡೆದುಕೊಂಡ ಸಾಲ ದುರುಪಯೋಗ ಮಾಡದೇ 100 ಶೇ. ವಾಪಾಸ್ ಪಾವತಿ ಮಾಡುವುದು ಮಹಿಳೆಯರು ಮಾತ್ರ.
ಈಗಾಗಲೇ 500ಕ್ಕೂ ಹೆಚ್ಚು ಮಹಿಳೆಯರು ಯೋಜನೆಯಲ್ಲಿ ಸೇರಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಹಿಳೆಯರು ಸಂಘಕ್ಕೆ ಸೇರಲಿದ್ದಾರೆ.
ನಮ್ಮ ಬ್ಯಾಂಕ್ ಯಾವತ್ತೂ ವಿಲೀನಗೊಳ್ಳುವುದಿಲ್ಲ. ನಾವು ಜನರ ಅನುಕೂಲಕ್ಕೆ ತಕ್ಕಂತೆ ಶಾಖೆಯನ್ನು ಹೆಚ್ಚಿಸುತ್ತೇವೆ. ಬ್ಯಾಂಕ್ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಿ” ಎಂದರು.
ವೇದಿಕೆಯಲ್ಲಿ ‘ಸಹಕಾರ ರತ್ನ’ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ. ಎನ್. ರಾಜೇಂದ್ರ ಕುಮಾರ್, ಬೆಂಗ್ರೆ ವಾರ್ಡ್ ಕಾರ್ಪೊರೇಟರ್ ಮುನೀಬ್ ಬೆಂಗ್ರೆ, ಭರತ್ ಕುಮಾರ್, ಸುರೇಶ್ ಸುವರ್ಣ, ಸಂಜಯ್ ಸುವರ್ಣ, ಮಹಾಜನ ಸಭಾ ಬೆಂಗ್ರೆ ಇದರ ಅಧ್ಯಕ್ಷ ಕೇಶವ ಕರ್ಕೇರ, ಮತ್ಯೋದ್ಯಮಿ ಶಶಿಕುಮಾರ್ ಬೆಂಗ್ರೆ, ಮೋಹನ್ ಬೆಂಗ್ರೆ, ಅಲ್ ಮದ್ರಸತುಲ್ ದೀನಿಯ್ಯ ಅಸೋಸಿಯೇಷನ್ ಅಧ್ಯಕ್ಷ ಜನಾಬ್ ಬಿಲಾಲ್ ಮೊಯ್ದಿನ್, ಬ್ಯಾಂಕ್ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ., ಬ್ಯಾಂಕ್ ನಿರ್ದೇಶಕರುಗಳಾದ ಬಿ.ನಿರಂಜನ್, ಟಿ.ಜಿ.ರಾಜಾರಾಮ ಭಟ್, ಭಾಸ್ಕರ್ ಎಸ್. ಕೋಟ್ಯಾನ್, ಎಂ. ವಾದಿರಾಜ ಶೆಟ್ಟಿ,
ಎಸ್. ರಾಜು ಪೂಜಾರಿ, ಶಶಿಕುಮಾರ್ ರೈ ಬಿ., ಎಸ್. ಬಿ. ಜಯರಾಮ ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಕೆ. ಹರಿಶ್ಚಂದ್ರ, ಎಂ. ಮಹೇಶ್ ಹೆಗ್ಡೆ, ಕೆ. ಜೈರಾಜ್ ಬಿ. ರೈ, ಬಿ. ಅಶೋಕ್ ಕುಮಾರ್ ಶೆಟ್ಟಿ, ರಾಜೇಶ್ ರಾವ್, ಸದಾಶಿವ ಉಳ್ಳಾಲ್, ರಮೇಶ್ ಹೆಚ್.ಎನ್., ಶಾಖಾ ವ್ಯವಸ್ಥಾಪಕ ಸುದರ್ಶನ ಕುಮಾರ್ ಯು.ಕೆ. ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಗ್ರಾಹಕರಿಗೆ ಠೇವಣಿ ಪತ್ರ, ಸೇಫ್ ಲಾಕರ್ ಕೀ ಸಾಂಕೇತಿಕವಾಗಿ ವಿತರಿಸಲಾಯಿತು. ನೂತನ ಸ್ವಸಹಾಯ ಸಂಘಗಳ ಉದ್ಘಾಟನೆ ವೇದಿಕೆಯಲ್ಲಿ ನೆರವೇರಿತು.