Connect with us

    DAKSHINA KANNADA

    ಮಂಗಳೂರು: ಪೊಲೀಸ್ ಕಾನ್‌ಸ್ಟೇಬಲ್ ಕೊಲೆಯತ್ನ ಪ್ರಕರಣ, ಇಬ್ಬರು ಅಪರಾಧಿಗಳಿಗೆ 10 ವರ್ಷ ಜೈಲು..!!

    ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಉಳ್ಳಾಲ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್‌  ಒಬ್ಬರನ್ನು ಕೊಲೆಗೆ ಯತ್ನಿಸಿದ್ದ ಇಬ್ಬರು ಅಪರಾಧಿಗಳಿಗೆ  6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 10 ವರ್ಷ ಜೈಲು ಶಿಕ್ಷೆ ಮತ್ತು ತಲಾ 16 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

    ಉಳ್ಳಾಲದ ನಿವಾಸಿಗಳಾದ ಒಂದನೇ ಆರೋಪಿ ಮುಸ್ತಾಕ್ (32) ಮತ್ತು ನಾಲ್ಕನೇ ಆರೋಪಿ ಜಾಕೀರ್ (36) ಶಿಕ್ಷೆಗೊಳಗಾದವರು. 2ನೇ ಆರೋಪಿ ಯಾಸೀನ್ ಮತ್ತು 3ನೇ ಆರೋಪಿ ಅಶ್ರಫ್ (50) ತಲೆ ಮರೆಸಿಕೊಂಡಿದ್ದಾರೆ.

    2015ರ ಡಿಸೆಂಬರ್ 17ರಂದು ರಾತ್ರಿ ನಾಲ್ಕು ಮಂದಿ ಆರೋಪಿಗಳು ಉಳ್ಳಾಲದ ಸಾರ್ವಜನಿಕ ಸ್ಥಳದಲ್ಲಿ ಬಾಟಲಿಗಳನ್ನು ಎಸೆದು ಗಲಾಟೆ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಉಳ್ಳಾಲ ಠಾಣೆಯ ಆಗಿನ ಹೆಡ್ ಕಾನ್‌ಸ್ಟೇಬಲ್ ಉಮೇಶ್ ಮತ್ತು ಕಾನ್‌ಸ್ಟೇಬಲ್ ರವೀಂದ್ರ ಸ್ಥಳಕ್ಕೆ ತೆರಳಿ ಗಲಾಟೆ ಮಾಡುತ್ತಿದ್ದ ಬಗ್ಗೆ ಪ್ರಶ್ನಿಸಿದ್ದರು. ಆಗ ಕುಪಿತಗೊಂಡ ದುಷ್ಕರ್ಮಿಗಳು ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ಬೈದಿದ್ದರು ಎಂದು ಆರೋಪಿಸಲಾಗಿತ್ತು.

    ಈ ಸಂದರ್ಭ ಮೊದಲ ಆರೋಪಿ ಮುಸ್ತಾಕ್ ನಿಮ್ಮಲ್ಲಿ ಒಬ್ಬರನ್ನು ಕೊಲೆ ಮಾಡಿದರೆ ಬುದ್ದಿ ಬರುತ್ತದೆ ಎನ್ನುತ್ತಾ ತನ್ನ ಕೈಯಲ್ಲಿದ್ದ ಚಾಕುವಿನಿಂದ ರವೀಂದ್ರರನ್ನು ಕೊಲೆಗೆ ಯತ್ನಿಸಿದ್ದ. ಈ ವೇಳೆ ಉಮೇಶ್ ತಡೆದಿದ್ದರು. ಒಂದನೇ ಆರೋಪಿ ಮತ್ತು ಇತರರು ರವೀಂದ್ರರ ಕೈಗಳನ್ನು ಹಿಡಿದು ಬಲವಾಗಿ ತಿರುಗಿಸಿದ್ದರು. ಮುಸ್ತಾಕ್ ಚೂರಿಯಿಂದ ರವೀಂದ್ರ ಅವರ ಎಡಕೈಗೆ ರಕ್ತಬರುವಂತೆ ತಿರುವಿದ್ದ. ಉಮೇಶ್‌ರಿಗೂ ಹೊಡೆದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಎಂದು ಪ್ರಕರಣ ದಾಖಲಿಸಲಾಗಿತ್ತು.

    ಈ ಬಗ್ಗೆ ಆಗಿನ ಉಳ್ಳಾಲ ಠಾಣೆಯ ಎಸ್ಸೈ ಗುರಪ್ಪ ಕಾಂತಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಎಸ್.ವಿ. ಆರೋಪ ಸಾಬೀತಾಗಿದೆ ಎಂದು ಘೋಷಿಸಿದರಲ್ಲದೆ, ಒಂದನೆ ಮತ್ತು ನಾಲ್ಕನೇ ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದಾರೆ.

    ಐಪಿಸಿ ಕಲಂ 504ರಡಿ 2 ವರ್ಷ ಕಾರಾಗೃಹ ವಾಸ ಮತ್ತು 2 ಸಾವಿರ ರೂ. ದಂಡ, 506 ರಡಿ 7 ವರ್ಷ ಜೈಲು ಮತ್ತು 5 ಸಾವಿರ ರೂ. ದಂಡ, 353ರಡಿ 2 ವರ್ಷ ಜೈಲು 2 ಸಾವಿರ ರೂ. ದಂಡ, 332ರಡಿ 2 ವರ್ಷ ಜೈಲು 2 ಸಾವಿರ ರೂ. ದಂಡ, 307ರಡಿ 10 ವರ್ಷ ಜೈಲು ಮತ್ತು 5 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ. ಸರಕಾರದ ಪರವಾಗಿ ಅಭಿಯೋಜಕರಾದ ಬಿ.ಶೇಖರ್ ಮತ್ತು ಚೌಧರಿ ಮೋತಿಲಾಲ್ ವಾದಿಸಿದ್ದರು.

     

    Share Information
    Advertisement
    Click to comment

    You must be logged in to post a comment Login

    Leave a Reply