Connect with us

LATEST NEWS

ಪ್ರತೀಕಾರದ ದಾಳಿ ನಡೆಯುವ ಆತಂಕ – ಮಂಗಳೂರಿನಲ್ಲಿ ಭಯದ ಕರಿಛಾಯೆ

ಪ್ರತೀಕಾರದ ದಾಳಿ ನಡೆಯುವ ಆತಂಕ – ಮಂಗಳೂರಿನಲ್ಲಿ ಭಯದ ಕರಿಛಾಯೆ

ಮಂಗಳೂರು ಜನವರಿ 9: ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಅಮಾಯಕರ ಹತ್ಯೆಯ ಪ್ರಕರಣ ಮಂಗಳೂರನ್ನು ನಡುಗಿಸಿದೆ. ಸಂಜೆಯಾಗುತ್ತಿದ್ದಂತೆ ಇಡೀ ಮಂಗಳೂರು ಸಂಪೂರ್ಣ ಸ್ತ ಬ್ದ. ಸಾರ್ವಜನಿಕರು ಮನೆಯಿಂದ ಹೊರಬರಲು ಹೆದರುತ್ತಿದ್ದು, ಎಲ್ಲಿ ಯಾವಾಗ ದಾಳಿ ನಡೆಯುತ್ತದೆ ಎಂಬ ಹೆದರಿಕೆಯಲ್ಲಿ ಮಂಗಳೂರಿನ ಜನರು ಜೀವನ ಸಾಗಿಸುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಅಮಾಯಕರಿಬ್ಬರು ದುಷ್ಕರ್ಮಿಗಳ ದಾಳಿಗೆ ಬಲಿಯಾದ ಬಳಿಕ ಮತ್ತೆ ನಗರದಲ್ಲಿ ಪ್ರತಿಕಾರದ ಪ್ರತಿದಾಳಿಗಳು ನಡೆಯುವ ಭೀತಿ ಆವರಿಸುತ್ತಿದೆ.

ಮೊಬೈಲ್ ಕರೆನ್ಸಿ ಮತ್ತು ಸಿಮ್ ಕಾರ್ಡ್ ಮಾರಾಟ ಮಾಡಿಕೊಂಡಿದ್ದ ದೀಪಕ್ ರಾವ್ ಜನವರಿ 3 ರಂದು ದುಷ್ಕರ್ಮಿಗಳ ದಾಳಿಗೆ ಹತ್ಯೆಯಾಗಿದ್ದರು. ಅಂದೇ ಈ ಕೊಲೆಗೆ ಸಂಬಂಧವಿಲ್ಲದ ಇಬ್ಬರು ಅಮಾಯಕರು ದುಷ್ಕರ್ಮಿಗಳ ದಾಳಿಗೆ ಒಳಗಾಗಬೇಕಾಯಿತು. ಜನವರಿ 3 ರಂದು ರಾತ್ರಿ ಸುರತ್ಕಲ್ ನಲ್ಲಿ ಮುದಸ್ಸಿರ್ ಹಾಗು ಕೊಟ್ಟಾರ ಚೌಕಿಯಲ್ಲಿ ಅಬ್ದುಲ್ ಬಶೀರ್ ಎಂಬವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದರು.

ಈ ಪ್ರತಿಕಾರದ ದಾಳಿಗೆ ದುಷ್ಕರ್ಮಿಗಳು ಗುರಿಯಾಗಿಸಿದ್ದು ಅಮಾಯಕರನ್ನು. ಒಬ್ಬ ಕೂಲಿ ಕಾರ್ಮಿಕ ಇನ್ನೋರ್ವ ಫಾಸ್ಟ್‌ ಫುಡ್ ಅಂಗಡಿಯ ಮಾಲಿಕ . ಇಬ್ಬರೂ ದಿನದ ಕೆಲಸ ಮುಗಿಸಿ ಮನೆಗೆ ತೆರಳುವ ಹೊತ್ತಿಗೆ ದುಷ್ಕರ್ಮಿಗಳ ದಾಳಿಗೆ ಒಳಗಾಗಿದ್ದಾರೆ. ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮುದಸ್ಸಿರ್ ಹಾಗು ಅಬ್ದುಲ್ ಬಶೀರ್ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ ಮುದಸ್ಸಿರ್ ಚೇತರಿಸಿಕೊಂಡು ಮನೆಗೆ ತೆರಳಿದರೆ, ಅಬ್ದುಲ್ ಬಶೀರ್ ಚಿಕೆತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು.

ಈ ಎಲ್ಲಾ ಪ್ರಕರಣಗಳಲ್ಲಿ ದಾಳಿ ನಡೆಸಿದ ದುಷ್ಕರ್ಮಿಗಳನ್ನು ಪೊಲೀಸರು ಬಂದಿಸಿದ್ದಾರೆ. ಆದರೆ ಈ ಹತ್ಯೆ ಹಾಗು ಹಲ್ಲೆ ಗಳಿಗೆ ಪ್ರತಿಕಾರದ ದಾಳಿಗಳು ನಡೆಯುವ ಆತಂಕ ಮಂಗಳೂರಿಗರನ್ನು ಕಾಡುತ್ತಿದೆ.

ಭಯಭೀತರಾದ ಸಂಘಟನೆಗಳ ಮುಖಂಡರು

ಹಿಂದೂ ಮತ್ತು ಮುಸ್ಲಿಂ ಸಂಘಟನೆಯ ಮುಖಂಡರು ಒಬ್ಬಂಟಿಯಾಗಿ ತಿರುಗಾಡಲು ಭಯಪಡುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದಕ್ಕೆ ಪುಷ್ಠಿ ನೀಡುವಂತೆ ನಿನ್ನೆ ನಡೆದ ಘಟನೆ, ಹಿಂದೂ ಜಾಗರಣ ವೇದಿಕೆಯ ಮುಖಂಡ ಭರತ್ ದುಷ್ಕರ್ಮಿಗಳು ದಾಳಿ ಯತ್ನಿಸಿದ್ದರು ಎಂದು ಸುದ್ದಿಯಾಗಿತ್ತು, ಆದರೆ ಅದರ ಸತ್ಯಾಸತ್ಯತೆ ಬೇರೆನೆ ಇದೆ.

ಭರತ್ ನಿನ್ನೆ ರಾತ್ರಿ ಅರಗನೇಲು ಎಂಬಲ್ಲಿ ಇರುವ ತಮ್ಮ ಮನೆಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ವಿದ್ಯುತ್ ದೀಪ ಇರದ ದಾರಿಯಲ್ಲಿ ಸಾಗಿದಾಗ ಪೊದೆಗಳಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ನಾಲ್ವರು ಮೇಲೆ ಎದ್ದು ನೋಡಿದ್ದಾರೆ. ಇದನ್ನೆ ತಪ್ಪಾಗಿ ಅರ್ಥೈಸಿದ ಭರತ್ ಬೈಕ್ ನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಭರತ್ ಓಡುವುದನ್ನು ಗಮನಿಸಿದ ಗಾಂಜಾ ಸೇವನೆ ಮಾಡುತ್ತಿದ್ದ ನಾಲ್ವರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಭರತ್ ನೇರವಾಗಿ ಸುರತ್ಕಲ್ ಠಾಣೆಗೆ ತೆರಳಿ ತನ್ನ ಮೇಲೆ ದಾಳಿಗೆ ವಿಫಲ ಯತ್ನ ನಡೆದಿದೆ ಎಂದು ದೂರು ದಾಖಲಿಸಿದ್ದಾರೆ. ವಿಚಾರಣ ಸಂದರ್ಭದಲ್ಲಿ ಘಟನೆ ನಡೆದ ಪ್ರಸಂಗಕ್ಕೂ ಭರತ್ ಅವರ ಹೇಳಿಕೆಗೂ ತಾಳೆ ಬರುತ್ತಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸದ್ಯ ಮಂಗಳೂರಿನಲ್ಲಿ ಈ ರೀತಿ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಂಜೆ ಯಾಗುತ್ತಿದ್ದಂತೆ ಗಿಜಿಗುಡುತ್ತಿದ್ದ ಮಂಗಳೂರು ನಗರದ ರಸ್ತೆಗಳಲ್ಲಿ ಚಟುವಟಿಕೆ ಸ್ಥಬ್ದಗೊಳ್ಳುತ್ತಿವೆ.

ಅಮಾಯಕ ಜನರು ದುಷ್ಕರ್ಮಿಗಳ ಪ್ರತಿದಾಳಿಗೆ ಭಯದಿಂದ ಮನೆ ಸೇರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಸಂಜೆಯ ವ್ಯಾಪಾರ ವಹಿವಾಟಿಗೆ ಭಾರಿ ಹೊಡೆತ ಬೀಳುತ್ತಿದೆ. ಸಂಜೆ ಯಾಗುತ್ತಿದ್ದಂತೆ ನಗರದ ಮಾಲ್ ಗಳಲ್ಲಿ ಜನರ ಶಾಪಿಂಗ್ ಕಡಿಮೆಯಾಗಿದೆ. ಸಿಟಿ ಬಸ್ ಗಳಲ್ಲಿ ಜನರ ಸಂಚಾರ ಕಡಿಮೆಯಾಗಿದೆ. ರಾತ್ರಿ 11 ಗಂಟೆಯ ವರೆಗೂ ವ್ಯಾಪಾರ ವಹಿವಾಟು ನಡೆಯುತ್ತಿದ್ದ ಬಂದರು ಪ್ರದೇಶದಲ್ಲಿ ಜನಸಂಚಾರ ವಿರಳವಾಗಿದೆ.

ರಾತ್ರಿ ಹೊತ್ತು ಒಂಟಿಯಾಗಿ ಜನರು ಮನೆಯಿಂದ ಹೊರಬಂದು ತಿರುಗಾಡಲು ಅಂಜುತ್ತಿದ್ದಾರೆ. ನಗರದ ಸುರತ್ಕಲ್, ಕಷ್ಣಾಪುರ, ಕಾಟಿಪಳ್ಳ, ಕುಳಾಯಿ, ಕೊಟ್ಟಾರ, ಹೊಯಿಗೆ ಬಜಾರ್, ಬಂದರು ಪ್ರದೇಶ ಸೇರಿದಂತೆ ನಗರದ ಹಲವಾರು ಜನ ನಿಭಿಡ ಪ್ರದೆಶಗಳಲ್ಲಿ ರಾತ್ರಿಯಾಗುತ್ತಿದ್ದಂತೆ ಭಯದ ಕರಿಛಾಯೆ ಜನಸಾಮಾನ್ಯರನ್ನು ಆವರಿಸುತ್ತಿದೆ. ಈ ಹಿನ್ನಲೆಯಲ್ಲಿ ಜನರ ಮನಸ್ಸಿನಲ್ಲಿರುವ ಆತಂಕವನ್ನು ದೂರ ಮಾಡುವ ದೃಷ್ಟಿಯಿಂದ ಪೊಲೀಸ್ ಇಲಾಖೆ ಕ್ರಮಕೈಗೊಳ್ಳಬೇಕಾದ ಅನಿವಾರ್ಯವಾಗಿದೆ. ಜನರ ಭಯ ನಿವಾರಣೆಗೆ ಪೊಲೀಸ್ ಗಸ್ತು ಹಚ್ಚಿಸುವ ಅವಶ್ಯಕತೆ ಇದೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *