DAKSHINA KANNADA
ಮಂಗಳೂರು: ರಿವಾಲ್ವರ್‌ನೊಂದಿಗೆ ವ್ಯಕ್ತಿ ವಶ, ಮುಂದುವರಿದ ವಿಚಾರಣೆ..!
ಮಂಗಳೂರು, ಎಪ್ರಿಲ್ 04: ರಾಜ್ಯದಲ್ಲಿ ಚುನಾವಣಾ ನಿಂತಿಸಂಹಿತೆ ಜಾರಿಯಲ್ಲಿರುವ ವೇಳೆ ಮಂಗಳೂರಿನ ಹೃದಯಭಾಗದಲ್ಲಿ ವ್ಯಕ್ತಿಯೋರ್ವನನ್ನು ಪಿಸ್ತೂಲ್‌ನೊಂದಿಗೆ ಬಂಧಿಸಿದ್ದು, ಪಿಸ್ತೂಲ್ ಜೊತೆಗೆ ಸಜೀವ ಗುಂಡುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಗಳೂರು ನಗರದ ಕದ್ರಿ ಮಲ್ಲಿಕಟ್ಟೆಯಲ್ಲಿ ವ್ಯಕ್ತಿಯೊಬ್ಬ ಅಕ್ರಮ ಪಿಸ್ತೂಲ್ ಜೊತೆ ಓಡಾಡಿಕೊಂಡಿರುವ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪಿಸ್ತೂಲ್‌ನಲ್ಲಿ ಒಂದು ಜೀವಂತ ಬುಲೆಟ್ ಪತ್ತೆಯಾಗಿದೆ.
ಘಟನೆ ವಿವರ: ಕದ್ರಿ ಮಲ್ಲಿಕಟ್ಟೆಯಲ್ಲಿರುವ ಜಾರ್ಜ್ ಮಾರ್ಟೀಸ್ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ವೊಂದರಲ್ಲಿ ಬಾಡಿಗೆಗೆ ವಾಸವಾಗಿರುವ ಶಿಶಿರ ಎಂಬುವವನ ಬಳಿ ಈ ಅಕ್ರಮ ಪಿಸ್ತೂಲ್ ಪತ್ತೆಯಾಗಿದೆ. ಈ ಬಗ್ಗೆ ಶಿಶಿರನನ್ನು ತನಿಖೆಗೊಳಪಡಿಸಿದಾಗ ಆ್ಯಂಡ್ರೂ ರೊಡ್ರಿಗಸ್ ಎಂಬಾತ ಈ ಪಿಸ್ತೂಲನ್ನು ತನಗೆ ನೀಡಿದ್ದಾಗಿ ತಿಳಿಸಿದ್ದಾನೆ.
ಆ್ಯಂಡ್ರೂ ರೊಡ್ರಿಗಸ್ 2014ರಲ್ಲಿ ನಗರದ ಹಂಪನಕಟ್ಟೆಯಲ್ಲಿ ನಡೆದ ಕುಮಾರ್ ಎಂಬಾತನ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ. ಅಂದಿನಿಂದ ಕೊಲೆ ಆರೋಪಿ ಆ್ಯಂಡ್ರೂ ರೊಡ್ರಿಗಸ್ ತಲೆಮರೆಸಿಕೊಂಡಿದ್ದ, ಈ ಹಿನ್ನೆಲೆ ಲುಕ್‌ಔಟ್ ನೊಟೀಸ್ ಜಾರಿಮಾಡಲಾಗಿತ್ತು.
ಈ ವೇಳೆ ಆತನನ್ನು ಗೋವಾ ವಿಮಾನ ನಿಲ್ದಾಣದಲ್ಲಿ ಪತ್ತೆ ಹಚ್ಚಿದ ಅಲ್ಲಿನ ಪೊಲೀಸರು ಅವನನ್ನು ಬಂಧಿಸಿ ಬಳಿಕ ಮಂಗಳೂರು ಪೊಲೀಸರಿಗೆ ಹಸ್ತಾಂತರಿಸಿದ್ದರು. ಈತ ನ್ಯಾಯಾಲಯದಿಂದ ಜಾಮೀನು ಪಡೆದು ಮತ್ತೆ ತಲೆಮರೆಸಿಕೊಂಡಿದ್ದಾನೆ.
ಸದ್ಯ ಪೊಲೀಸ್ ವಶದಲ್ಲಿರುವ ಶಿಶಿರನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಇದೇ ವೇಳೆ ಪಿಸ್ತೂಲ್‌ನಲ್ಲಿ ಒಂದು ಜೀವಂತ ಬುಲೆಟ್ ಪತ್ತೆಯಾಗಿದೆ. ಈತನ ಉದ್ದೇಶ ಏನಿತ್ತು.? ಎಂಬುವುದು ತನಿಖೆಯಿಂದ ತಿಳಿದು ಬರಬೇಕಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.