Connect with us

DAKSHINA KANNADA

ಮಂಗಳೂರು : ‘M Friends meals on Wheels’ಲಯನ್ಸ್ ಪ್ರಾಯೋಜಿತ ಕಾರುಣ್ಯ ಕಿಚನ್ ಲೋಕಾರ್ಪಣೆ

ಎಂಫ್ರೆಂಡ್ಸ್‌ನಿಂದ ಕರುಣೆಯ ಕೆಲಸ: ಅರುಣ್ ಓಸ್ವಾಲ್

ಮಂಗಳೂರು: ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಒಳರೋಗಿಗಳ ಸಹವರ್ತಿಗಳಿಗೆ ರಾತ್ರಿ ಊಟ ನೀಡುವ ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟಿನ ಕಾರುಣ್ಯ ಯೋಜನೆಗೆ ಲಯನ್ಸ್ ಜಿಲ್ಲೆ 317 ಡಿ ವತಿಯಿಂದ ಲಯನ್ಸ್ ಕ್ಲಬ್ಸ್ ಇಂಟರ್‌ನ್ಯಾಶನಲ್ ಫೌಂಡೇಶನ್ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ `ಮೀಲ್ಸ್ ಆನ್ ವ್ಹೀಲ್ಸ್’ ಫುಡ್ ಟ್ರಕ್ ಮತ್ತು ಸುಸಜ್ಜಿತ ಕಾರುಣ್ಯ ಅಡುಗೆ ಮನೆ ಉದ್ಘಾಟನೆ ಶನಿವಾರ ನಡೆಯಿತು.

ಜೆಪ್ಪು ವೆಲೆನ್ಸಿಯಾದ ಹೋಲಿ ರೊಸಾರಿಯೊ ಕಾನ್ವೆಂಟ್ ರಸ್ತೆಯಲ್ಲಿ ನಿರ್ಮಿಸಿದ ಅಡುಗೆ ಮನೆ, ಸ್ವಯಂಚಾಲಿತ ಚಪಾತಿ ಯಂತ್ರ, ಇಡ್ಲಿ ಸ್ಟೀಮರ್ ಮತ್ತಿತರ ಪರಿಕರಗಳನ್ನು ಲಯನ್ಸ್ ಕ್ಲಬ್ಸ್ ಇಂಟರ್‌ನ್ಯಾಷನಲ್ ಫೌಂಡೇಶನ್‌ನ ಮಾಜಿ ಟ್ರಸ್ಟಿ, ಪ್ರಸಿದ್ಧ ಮಹಿಳಾ ಉದ್ಯಮಿ ಅರುಣಾ ಓಸ್ವಾಲ್ ಉದ್ಘಾಟಿಸಿದರು. ಬಳಿಕ ವೆಲೆನ್ಸಿಯಾದ ಮರಿಯ ಜಯಂತಿ ಚರ್ಚ್ ಹಾಲ್ ಬಳಿ `ಮೀಲ್ಸ್ ಆನ್ ವ್ಹೀಲ್ಸ್’ ಫುಡ್ ಟ್ರಕ್‌ಗೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಚಾಲನೆ ನೀಡಿದರು.

“ಲಯನ್ಸ್ ಕ್ಲಬ್ ಜಗತ್ತಿನಾದ್ಯಂತ ಸೇವಾ ಕಾರ್ಯ ಮಾಡುತ್ತಿದ್ದರೆ, ಎಂಫ್ರೆಂಡ್ಸ್ ಕರುಣೆ ಮತ್ತು ದಯೆಯ ಕೆಲಸ ಮಾಡುತ್ತಿದೆ. ಇದು ನೆರವು ನೀಡಲು ಪ್ರೇರಣೆ ನೀಡಿದೆ. ಸರಕಾರಿ ಶಾಲೆ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡುವ ಯೋಜನೆ ದೇಶಕ್ಕೆ ಮಾದರಿ. ನಾವು ಸತ್ತ ನಂತರ ಸ್ವರ್ಗ ಪಡೆಯುವ ಬದಲು ಭೂಮಿಯಲ್ಲೇ ಸ್ವರ್ಗ ನಿರ್ಮಿಸುವ ಕೆಲಸ ಎಂಫ್ರೆಂಡ್ಸ್ ಮಾಡುತ್ತಿದೆ” ಎಂದು `ಐರನ್ ಲೇಡಿ’ ಖ್ಯಾತಿಯ ಅರುಣಾ ಓಸ್ವಾಲ್ ಹೇಳಿದರು.

ಮೇಯರ್ ಸುಧೀರ್ ಶೆಟ್ಟಿ ಮಾತನಾಡಿ, ವಿಶ್ವದ 84 ಲಕ್ಷ ಜೀವರಾಶಿಗಳಲ್ಲಿ ಮನುಷ್ಯನ ಜನನ- ಮರಣದ ನಡುವಿನ ಜೀವನ ಶ್ರೇಷ್ಠವಾದುದು. ಯಾವುದೇ ಜೀವಿ ಹಸಿವಿನಿಂದ ಸಾಯುವುದಿಲ್ಲ, ಮನುಷ್ಯ ಎಷ್ಟೇ ದುಡಿದರೂ ಕೆಲವೊಮ್ಮೆ ಹಸಿವು ಕಾಡುತ್ತದೆ. ನಾವು ಶ್ರೀಮಂತರನ್ನು ನೋಡುವ ಬದಲು ಸಿಂಹದಂತೆ ಬಂದ ಹೆಜ್ಜೆ ತಿರುಗಿ ನೋಡಬೇಕು. ಜಾತಿ, ಧರ್ಮದ ಭೇದವಿಲ್ಲದೆ ಏಳು ವರ್ಷಗಳಿಂದ ವೆನ್ಲಾಕ್‌ನಲ್ಲಿ ಆಹಾರ ಕೊಡುವ ಎಂಫ್ರೆಂಡ್ಸ್ ಸೇವೆ ಮಾನವೀಯ ಅಂತಃಕರಣದ ಭಾಗ. ನಮ್ಮ ಆತ್ಮ ಪರಮಾತ್ಮನಲ್ಲಿ ಲೀನವಾದರೂ, ಮಾಡಿದ ಪುಣ್ಯದ ಕೆಲಸ ಹಾಗೆಯೇ ಉಳಿದು ಮುಂದಿನ ಪೀಳಿಗೆಗೆ ಪ್ರೇರಣೆ ನೀಡುತ್ತದೆ ಎಂದರು.

ಎಂಫ್ರೆಂಡ್ಸ್ ಟ್ರಸ್ಟ್ ಚೈರ್‌ಮ್ಯಾನ್ ಝಕರಿಯಾ ಜೋಕಟ್ಟೆ ಅಧ್ಯಕ್ಷತೆ ವಹಿಸಿ, ತಾನು ತಳಮಟ್ಟದಿಂದ ಬಹಳಷ್ಟು ಪರಿಶ್ರಮದಿಂದ ಈ ಹಂತಕ್ಕೆ ಬಂದಿದ್ದೇನೆ. ದಾನ, ಧರ್ಮಗಳು ಎಲ್ಲೂ ಹೋಗುವುದಿಲ್ಲ. ಭಾರತ ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದು, ನಾವೆಲ್ಲ ಸೇರಿ ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿದರೆ, ದೇಶ ಸೂಪರ್ ಪವರ್ ಆಗಲಿದೆ ಎಂದರು.

ಯೋಜನೆ ಅನುಷ್ಠಾನಕ್ಕೆ ಕೊಡುಗೆ ನೀಡಿದ ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ವಸಂತ ಕುಮಾರ್ ಶೆಟ್ಟಿ ಮತ್ತು ಅತಿಥಿ ಅರುಣಾ ಓಸ್ವಾಲ್ ಅವರನ್ನು ಸನ್ಮಾನಿಸಲಾಯಿತು.

ಎಲ್‌ಸಿಐಎಫ್ ವಲಯ ನಾಯಕ ವಂಶೀಧರ್ ಬಾಬು, ಲಯನ್ಸ್ ಜಿಲ್ಲಾ ಗವರ್ನರ್ ಬಿ.ಎಂ.ಭಾರತಿ, ಮಾಜಿ ಗವರ್ನರ್ ವಸಂತ ಕುಮಾರ್ ಶೆಟ್ಟಿ, ಮಲ್ಟಿಪಲ್ ಡಿಸ್ಟ್ರಿಕ್ಟ್ ಗವರ್ನರ್ ಡಾ.ಕೃಷ್ಣೇಗೌಡ, ಎಲ್‌ಸಿಐಎಫ್ ಕೋ-ಆರ್ಡಿನೇಟರ್ ಸಂಜೀತ್ ಶೆಟ್ಟಿ, ಉದ್ಯಮಿ ರೊನಾಲ್ಡ್ ಮಾರ್ಟಿಸ್ ದುಬೈ ಶುಭ ಹಾರೈಸಿದರು.

ಕಾರುಣ್ಯ ಯೋಜನೆಯ ಮುಖ್ಯಸ್ಥ ಮೊಹಮ್ಮದ್ ಹನೀಫ್ ಗೋಳ್ತಮಜಲು, ಎಂಫ್ರೆಂಡ್ಸ್ ಕೋಶಾಧಿಕಾರಿ ಝುಬೇರ್ ಬುಳೆರಿಕಟ್ಟೆ, ಸದಸ್ಯರಾದ ಅಬ್ದುಲ್ಲಾ ಮೋನು ಕತಾರ್, ತುಫೈಲ್ ಅಹ್ಮದ್ ಉಪಸ್ಥಿತರಿದ್ದರು.

ಎಂಫ್ರೆಂಡ್ಸ್‌ ಕಾರ್ಯಾಧ್ಯಕ್ಷ ಸುಜಾಹ್ ಮೊಹಮ್ಮದ್ ಸ್ವಾಗತಿಸಿದರು. ಕಂಪ್ಯೂಟರ್ ಆನ್ ವ್ಹೀಲ್ ಮುಖ್ಯಸ್ಥ ರಶೀದ್ ವಿಟ್ಲ ಮತ್ತು ಸದಸ್ಯ ಬಿ.ಎ.ಮೊಹಮ್ಮದಾಲಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆರಿಫ್ ಪಡುಬಿದ್ರಿ ವಂದಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *