Connect with us

    DAKSHINA KANNADA

    ಮಂಗಳೂರು : ಬೇರೆ ವ್ಯಕ್ತಿ ಜೊತೆ ಮದುವೆಗೆ ಮುಂದಾಗಿದ್ದ ಪ್ರೇಯಸಿಯನ್ನು ಹತ್ಯೆ ಮಾಡಿದ ಪ್ರಿಯತಮನಿಗೆ ಜೀವಾವಧಿ ಶಿಕ್ಷೆ..!

    ಮಂಗಳೂರು : ಬೇರೊಬ್ಬರನ್ನು ಮದುವೆಯಾಗಲು ಮುಂದಾಗಿದ್ದ ಪ್ರೇಯಸಿಯ ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆ ನೀಡಿ ಮಂಗಳೂರು ನ್ಯಾಯಾಲಯ ತೀರ್ಪು ನೀಡಿದೆ.

    ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೆನಕೊಟ್ಟಿ ತಾಂಡಾದ ಸಂದೀಪ್ ರಾಥೋಡ್ (23)  ಶಿಕ್ಷೆಗೊಳಗಾದ ಅಪರಾಧಿಯಾಗಿದ್ದು ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು  ಶಿಕ್ಷೆಯ ಜೊತೆ ಮತ್ತು 25 ಸಾವಿರ ರೂ ದಂಡ ವಿಧಿಸಿದೆ.ಪ್ರಕರಣದಲ್ಲಿ ಒಟ್ಟು 45 ಸಾಕ್ಷಿದಾರರನ್ನು ವಿಚಾರಿಸಲಾಗಿತ್ತು. ಒಟ್ಟು 100 ದಾಖಲೆಗಳನ್ನು ಗುರುತಿಸಲಾಗಿದೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ರವೀಂದ್ರ ಎಮ್ ಜೋಶಿ ಯವರು ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 25,000/- ರೂಪಾಯಿ ದಂಡ, ದಂಡ ಕಟ್ಟಲು ತಪ್ಪಿದ್ದಲ್ಲಿ 3 ತಿಂಗಳ ಸಾದಾ ಸಜೆ ಮತ್ತು ಭಾ.ದಂ.ಸಂ ಕಲಂ 380 ಅಪರಾದದಲ್ಲಿ 3 ತಿಂಗಳ ಸಜೆ ಮತ್ತು 1,000/- ರೂಪಾಯಿ ದಂಡ ದಂಡ ತೆರಲು ತಪ್ಪಿದ್ದಲ್ಲಿ 15 ದಿನಗಳ ಸಾದಾ ಸಜೆ, ಭಾ.ದಂ.ಸಂ ಕಲಂ 403 ಅಪರಾಧಕ್ಕೆ 3 ತಿಂಗಳ ಸಜೆ ಮತ್ತು 500/- ರೂಪಾಯಿ ದಂಡ. ದಂಡ ಕಟ್ಟಲು ತಪ್ಪಿದಲ್ಲಿ 15 ದಿನಗಳ ಸಾದಾ ಸಜೆ ಹಾಗೂ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಸಂತ್ರಸ್ತರ ಪರಿಹಾರ ಯೋಜನೆ ಅಡಿಯಲ್ಲಿ ಮೃತಳ ಮನೆಯವರಿಗೆ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ.

    ಆರೋಪಿ ಸಂದೀಪ್ ರಾಥೋಡ್ ಮತ್ತು ಮೃತ ಅಂಜನಾ ವಸಿಷ್ಠ ಅವರು 2018ನೇ ಇಸವಿಯ ಜುಲೈ ತಿಂಗಳಿನಲ್ಲಿ ಫೇಸ್‌ಬುಕ್ ಮೂಲಕ ಪರಿಚಯವಾಗಿ, ನಂತರ ಪರಸ್ಪರ ಪ್ರೀತಿಸುತ್ತಿದ್ದರು. ಉದ್ಯೋಗ ಪಡೆದ ಬಳಿಕ ಮದುವೆಯಾದರೆ ಜೀವನ ಸಾಗಿಸಲು ಹಣಕಾಸಿನ ತೊಂದರೆ ಇರುವುದಿಲ್ಲ ಮತ್ತು ಮನೆಯವರನ್ನು ಕೂಡ ಒಪ್ಪಿಸಿ ಮದುವೆಯಾಗಬಹುದು ಎಂದು ಅವರಿಬ್ಬರು ಮಾತನಾಡಿಕೊಂಡಿದ್ದರು.ಅದರಂತೆಯೇ ಆರೋಪಿ ಸಂದೀಪ್ ರಾಥೋಡ್ ಪೊಲೀಸ್ ಸಬ್​ ಇನ್ಸ್​ಪೆಕ್ಟರ್​ ಹುದ್ದೆಗೆ ಆಯ್ಕೆಯಾಗಲು ಲಿಖಿತ ಪರೀಕ್ಷೆಯ ಪೂರ್ವ ತಯಾರಿಗಾಗಿ ಮಂಗಳೂರಿನ ಹಂಪನಕಟ್ಟೆಯ ರಾಯಲ್ ಅಕಾಡೆಮಿ ಕೋಚಿಂಗ್ ಸೆಂಟರ್​ಗೆ ಬಂದಿದ್ದನು. ತರಬೇತಿಗೆ ಹಾಜರಾಗಲು ಮಂಗಳೂರಿನಲ್ಲಿ ಉಳಿದುಕೊಳ್ಳುವ ಸಲುವಾಗಿ ತಾವಿಬ್ಬರು ಗಂಡ ಹೆಂಡತಿ ಎಂದು ಹಾಗೂ ಆರೋಪಿ ತಾನು ಕಾನ್ಸ್​ಟೇಬಲ್​​ ಆಗಿದ್ದು, ಪಿಎಸ್​ಐ ಹುದ್ದೆಯ ತರಬೇತಿಗಾಗಿ ಮಂಗಳೂರಿಗೆ ಬಂದಿರುವುದಾಗಿ ಹೇಳಿ ರೂಂ ಪಡೆದುಕೊಂಡಿದ್ದನು.ಅಂಜನಾ ವಸಿಷ್ಠಳು ತನ್ನ ಊರಿಗೆ ಹೋಗಿದ್ದ ಅವಧಿಯಲ್ಲಿ, ಆಕೆಗೆ ವಿವಾಹ ಮಾಡಲು ಆಕೆಯ ತಂದೆ ತಾಯಿ ನಿರ್ಧರಿಸಿ ಹುಡುಗನನ್ನು ತೋರಿಸಿ, ಮಾತುಕತೆ ನಡೆಸಿದ್ದರು. ಅಂಜನಾ ವಸಿಷ್ಠ ತಂದೆ ತಾಯಿಯ ಆಸೆಯಂತ ಮದುವೆಗೆ ಒಪ್ಪಿಕೊಂಡು, ಆ ವಿಚಾರವನ್ನು ಆರೋಪಿ ಸಂದೀನ್ ರಾಥೋಡ್​ಗೆ ತಿಳಿಸಿದ್ದಳು. ತನ್ನನ್ನು ಮರೆತುಬಿಡುವಂತೆ ಆಕೆ ವಿನಂತಿಸಿದ್ದಳು.ಇದರಿಂದ ಕೋಪಗೊಂಡ ಸಂದೀಪ್ ಆಕೆಯನ್ನು ಪುಸಲಾಯಿಸಿ, ಆತ ಉಳಿದುಕೊಂಡಿದ್ದ ಮಂಗಳೂರಿಗೆ ಕರೆಸಿಕೊಂಡಿದ್ದ. ಅಂಜನಾ ವಸಿಷ್ಠ ತನ್ನನ್ನು ಬಿಟ್ಟು ತನ್ನ ಪ್ರೀತಿಯನ್ನು ಧಿಕ್ಕರಿಸಿ ಬೇರೆಯವರನ್ನು ಮದುವೆಯಾಗಲು ಹೋಗುತ್ತಿದ್ದಾಳೆ ಎಂದು ಕೋಪದಿಂದ ಆಕೆಯ ಜೊತೆ ಜಗಳ ತೆಗೆದು ಕೊಲೆ ಮಾಡುವ ಉದ್ದೇಶದಿಂದ ಹಿಡಿದು ಎಳೆದು ಬೆಡ್ಡಿನ ಮೇಲೆ ದೂಡಿ ಹಾಕಿ ತಲೆಯನ್ನು ರೂಮಿನಲ್ಲಿದ್ದ ಕಬ್ಬಿಣದ ಮಂಚದ ಸರಳಿನ ಸಂದಿಗೆ ತುರುಕಿಸಿ, ಅಲ್ಲಿಯೇ ಪಕ್ಕದಲ್ಲಿ ಗೋಡೆಗೆ ಅಳವಡಿಸಿದ ಟಿ.ವಿ ಕೇಬಲ್‌ನಿಂದ ಕುತ್ತಿಗೆಗೆ ಸುತ್ತ ಬಿಗಿದು ಕೊಲೆ ಮಾಡಿ ಮೃತಳ ಮೃತ ದೇಹದ ಫೋಟೋವನ್ನು ನೆನಪಿಗಾಗಿ ವಿಡಿಯೋ ರೆಕಾರ್ಡ್ ಮಾಡಿಕೊಂಡು, ಮೃತಳ ಎಟಿಎಂ ಕಾರ್ಡ್ ಹಾಗೂ ಮೊಬೈಲ್ ಫೋನ್​ನನ್ನು ತೆಗೆದುಕೊಂಡು ಪರಾರಿಯಾಗಿದ್ದ.ಆ ಬಳಿಕ ನಗರದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದ ಬಳಿಯಿರುವ ಕಾರ್ಪೊರೇಷನ್​ ಬ್ಯಾಂಕ್‌ ಎಟಿಎಂ ಬಳಸಿ 15,000/- ರೂಪಾಯಿ ಹಣವನ್ನು ಡ್ರಾ ಮಾಡಿದ್ದನು. ಕೊಲೆ ಪ್ರಕರಣದ ತನಿಖಾಧಿಕಾರಿ ದೂರುದಾರರು ನೀಡಿದ ದೂರನ್ನು ಸ್ವೀಕರಿಸಿ, ಪ್ರಕರಣ ದಾಖಲಿಸಿ, ನಂತರ ಆರೋಪಿಯನ್ನು ಬಂಧನ ಮಾಡಿ ಆತನ ವಶದಿಂದ ಮೃತಳ ಮೊಬೈಲ್ ಮತ್ತು ಎಟಿಎಂ ಕಾರ್ಡ್ ಮತ್ತು ಆತ ತನ್ನ ಮೊಬೈಲ್‌ನಲ್ಲಿ ಮಾಡಿದ ಮೃತಳ ಮೃತ ದೇಹದ ವಿಡಿಯೋ ಇರುವ ಮೊಬೈಲ್, ಮೃತಳ ಎಟಿಎಂ ಕಾರ್ಡ್ ನಿಂದ ಕಾರ್ಪೋರೇಷನ್ ಬ್ಯಾಂಕಿನ ಎಟಿಎಂನಲ್ಲಿ ಹಣ ಡ್ರಾ ಮಾಡಿ ಉಳಿದ 12.300 ರೂಪಾಯಿ ಹಣವನ್ನು ಹಾಗೂ ಇತರೆ ಸೊತ್ತುಗಳನ್ನು ಆರೋಪಿಯಿಂದ ವಶಪಡಿಸಿಕೊಂಡಿದ್ದರು.ಮೃತದೇಹದ ಮಹಜರು ಸಮಯದಲ್ಲಿ ಮೃತಳ ಮೈಮೇಲೆ ದೊರತ ಹಾಗೂ ವೈದ್ಯರು ಆರೋಪಿ ದೇಹದಿಂದ ಸಂಗ್ರಹಿಸಿದ ಸಾಕ್ಷ್ಯಗಳನ್ನು ಮಂಗಳೂರು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಹಾಗೂ ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದ ಡಿಎನ್​ಎ ವಿಭಾಗಕ್ಕೆ ತಜ್ಞರ ಪರಿಶೀಲನೆಗೆ ಕಳುಹಿಸಿರುತ್ತಾರೆ. ಆರೋಪಿಯಿಂದ ವಶಪಡಿಸಿದ್ದ ಮೊಬೈಲ್‌ಗಳನ್ನು, ಎಟಿಎಂನ ಸಿಸಿಟಿವಿ ಸಾಕ್ಷ್ಯವನ್ನು ಬೆಂಗಳೂರು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ವರದಿಗಳನ್ನು ಸಂಗ್ರಹಿಸಿರುತ್ತಾರೆ. ಆರೋಪಿ ಮತ್ತು ಮೃತಳ ಕರೆ ವಿವರಗಳನ್ನು ಕಲೆ ಹಾಕಿ ತನಿಖೆ ನಡೆಸಿದ್ದರು. ಸರ್ಕಾರದ ಪರವಾಗಿ ನಿವೃತ್ತ ಸರ್ಕಾರಿ ಅಭಿಯೋಜಕ ಬಿ. ಶೇಖರ್ ಶೆಟ್ಟಿ ಸಾಕ್ಷಿ ವಿಚಾರಣೆ ಮಾಡಿದ್ದು, ಜುಡಿತ್ ಒಲ್ಗ ಮಾರ್ಗರೆಟ್ ಕ್ರಾಸ್ತಾ ಹೆಚ್ಚುವರಿ ಸಾಕ್ಷಿ ವಿಚಾರಣೆ ಮಾಡಿ ವಾದ ಮಂಡಿಸಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply