LATEST NEWS
ಮಂಗಳೂರು ಜೈಲಿನಲ್ಲಿ ಖೈದಿಗೆ ಹಲ್ಲೆ ನಡೆಸಿ ಹಣ ವಸೂಲಿ – ನಾಲ್ವರು ಸಹ ಖೈದಿಗಳ ಮೇಲೆ ಕೆ ಕೋಕಾ ಪ್ರಕರಣ ದಾಖಲು

ಮಂಗಳೂರು: ಮಂಗಳೂರು ಜೈಲಿನಲ್ಲಿ ವಿಚಾರಣಾಧೀನ ಕೈದಿಗೆ ಹಲ್ಲೆ ನಡೆಸಿ ಹಣ ವಸೂಲಿ ಮಾಡಿದ ನಾಲ್ವರು ಕೈದಿಗಳ ಮೇಲೆ ಕೆ-ಕೋಕಾ (ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಸ್ಡ್ ಆ್ಯಕ್ಟ್) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಧನುಷ್ ಭಂಡಾರಿ ಅಲಿಯಾಸ್ ಧನು, ದಿಲೇಶ್ ಬಂಗೇರಾ ಅಲಿಯಾಸ್ ದಿಲ್ಲು, ಲಾಯಿ ವೇಗಾಸ್ ಅಲಿಯಾಸ್ ಲಾಯಿ ಮತ್ತು ಸಚಿನ್ ತಲಪಾಡಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 308(4) ಮತ್ತು 3(5) ರ ಅಡಿಯಲ್ಲಿ ಪ್ರಕರಣ ಸಂಖ್ಯೆ 76/2025 ದಾಖಲಾಗಿದೆ.

ಉಳ್ಳಾಲ ಠಾಣಾ ವ್ಯಾಪ್ತಿಗೆ ಸಂಬಂಧಿಸಿದ ಪ್ರಕರಣದ ಆರೋಪಿ ಮಿಥುನ್ ಎಂಬಾತನಿಗೆ ಸಹ ಕೈದಿಗಳಾದ ಧನು ಯಾನೆ ಧನುಷ್ ಭಂಡಾರಿ, ಸಚಿನ್ ತಲಪಾಡಿ, ದಿಲೇಶ್ ಬಂಗೇರ ಯಾನೆ ದಿಲ್ಲು, ಲಾಯಿ ವೇಗಸ್ ಎಂಬವರು ಜುಲೈ 9ರಂದು ಜೈಲಿನೊಳಗೆ ಸಿಬ್ಬಂದಿ ಕಣ್ಣು ತಪ್ಪಿಸಿ ಹಲ್ಲೆ ನಡೆಸಿ 50 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅಲ್ಲದೆ ಈ ವಿಷಯ ಜೈಲು ಅಧಿಕಾರಿಗಳಿಗೆ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಕೂಡ ಹಾಕಿದ್ದರು. ಹೀಗಾಗಿ ಮಿಥುನ್ ಪ್ರಾಣ ಭಯದಿಂದ ದೂರು ನೀಡದೆ ಹಲ್ಲೆ ನಡೆಸಿದ್ದ ಕೈದಿ ಸಚಿನ್ ಎಂಬಾತ ಕೊಟ್ಟ ಎರಡು ಮೊಬೈಲ್ ಸಂಖ್ಯೆಗೆ ಪತ್ನಿಯ ಮೂಲಕ 20 ಸಾವಿರ ರೂ. ಫೋನ್ ಪೇ ಮಾಡಿಸಿದ್ದ.
ಜುಲೈ 12 ರಂದು ಮಂಗಳೂರು ಕೇಂದ್ರ ಸಹಾಯಕ ಪೊಲೀಸ್ ಆಯಕ್ತರು ಹಾಗೂ ಬರ್ಕೆ ಪೊಲೀಸ್ ಠಾಣೆಯ ನಿರೀಕ್ಷಕರು ಕಾರಾಗೃಹದ ತಪಾಸಣೆ ಮಾಡಲು ತೆರಳಿದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿತ್ತು. ಹಾಗೇ ಜಿಲ್ಲಾ ಕಾರಾಗೃಹದ ಅಧೀಕ್ಷ ಶರಣಬಸಪ್ಪ ಬರ್ಕೆ ಠಾಣೆಗೆ ದೂರು ನೀಡಿದ್ದರು. ಇದೀಗ ಕೈದಿಗೆ ಜೈಲಿನಲ್ಲೇ ಹಲ್ಲೆ ನಡೆಸಿದ್ದ ಸಹಕೈದಿಗಳ ವಿರುದ್ಧ ಕೆ-ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಈಗಾಗಲೆ ಆರೋಪಿಗಳು ಒಂದಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಇದೀಗ ಕೆ-ಕೋಕಾ ಕಾಯ್ದೆಯಡಿ ದಾಖಲಿಸಲಾದ ಪ್ರಕರಣಕ್ಕೆ ಸಂಬಂಧಿಸಿ 5 ವರ್ಷದ ಶಿಕ್ಷೆ ವಿಧಿಸಬಹುದಾಗಿದ್ದು, ಅದನ್ನು ಜೀವಾವಧಿ ಶಿಕ್ಷೆಯವರಿಗೆ ವಿಸ್ತರಿಸಬಹುದಾಗಿದೆ. ಆರೋಪಿಗಳ ಕೃತ್ಯದಿಂದ ಸಾವು ಸಂಭವಿಸಿದರೆ ಜೀವಾವಧಿ ಅಥವಾ ಮರಣದಂಡನೆ ಶಿಕ್ಷೆ ವಿಧಿಸಬಹುದಾಗಿದೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.