Connect with us

DAKSHINA KANNADA

ಮಂಗಳೂರು : ಸಣ್ಣ ಗುಳ್ಳೆ ತೆಗೆಯಲು ಬಂದವನ ಜೀವ ತೆಗೆದ ವೈದ್ಯರು, ಕರಾವಳಿಯ ಮೆಡಿಕಲ್ ಮಾಫಿಯಾಕ್ಕೆ ಕೊನೆ ಎಂದು..।?

ಮಂಗಳೂರು : ಬುದ್ದಿವಂತರ ನಾಡು, ಮೆಡಿಕಲ್ ಹಬ್ ಅಂತ ಹೇಳುವ ಮಂಗಳೂರು ನಗರದಲ್ಲಿ ಖಾಸಾಗಿ ಆಸ್ಪತ್ರೆಗಳು ರೋಗಿಗಳೊಂದಿಗೆ ಚೆಲ್ಲಾಟವಾಡುವ, ಅವರ ಜೀವ ತೆಗೆಯುವ ಕಾರ್ಯಗಳು ಹೆಚ್ಚಾಗುತ್ತಿದ್ದು ಜನ ಆಸ್ಪತ್ರೆ ಮೆಟ್ಟಲು ಹತ್ತುವಾಗ, ಅಥವಾ ರೋಗಿ ಸಂಬಂಧಿಕರು ರೋಗಿಯನ್ನು ಆಸ್ಪತ್ರೆಯ  ದಾಖಲು ಮಾಡುವಾಗ ಹತ್ತು ಭಾರಿ ಆಲೋಚಿಸಬೇಕಾಗಿದೆ.


ಎದೆಯ ಭಾಗದಲ್ಲಿ ಸಣ್ಣ ಗುಳ್ಳೆ ಇದೆಯೆಂದು ಕಾಸ್ಮೆಟಿಕ್ ಸರ್ಜರಿ ಮಾಡಲು ಹೋಗಿದ್ದ ಯುವಕನೊಬ್ಬ ವೈದ್ಯರ ಎಡವಟ್ಟಿನಿಂದ ದುರಂತ ಸಾವನ್ನಪ್ಪಿದ ಘಟನೆ ಮಂಗಳೂರು ನಗರದಲ್ಲೇ ನಡೆದಿದೆ.
ಉಳ್ಳಾಲದ ಅಕ್ಕರಕೆರೆ ನಿವಾಸಿ ಮೊಹ್ಮದ್ ಮಾಝಿನ್(32) ಮೃತರು. ಮೊಹ್ಮದ್ ಮಾಝಿನ್ ತನ್ನ‌ ಎದೆಯ ಎಡಭಾಗದಲ್ಲಿದ್ದ ಸಣ್ಣ ಗುಳ್ಳೆಯನ್ನು ತೆಗೆಸಲು ಕಂಕನಾಡಿ ಬೆಂದೂರ್ ವೆಲ್​ನಲ್ಲಿರುವ ಫ್ಲೋಂಟ್ ಕಾಸ್ಮೆಟಿಕ್ ಸರ್ಜರಿ ಮತ್ತು ಹೇರ್ ಟ್ರಾನ್ಸ್ ಪ್ಲಾಂಟ್ ಕ್ಲಿನಿಕ್​ಗೆ ಬಂದಿದ್ದ. ಸಣ್ಣ ಶಸ್ತ್ರಚಿಕಿತ್ಸೆ ಮಾಡಬೇಕಿತ್ತು. ಸರ್ಜರಿಗೆ ಮುಂದಾದ ವೈದ್ಯರು ಮಾಝಿನ್ ಅವರನ್ನು ಕ್ಲಿನಿಕ್ ನಲ್ಲಿ ದಾಖಲು ಮಾಡಿಕೊಂಡಿದ್ದರು. ಬೆಳಗ್ಗೆ ಬಂದವರು ಸಂಜೆಯಾದರೂ ಸರ್ಜರಿ ಮುಗಿದಿರಲಿಲ್ಲ. ಹೊರಗೆ ನಿಂತಿದ್ದ ತಾಯಿ ಮತ್ತು ಪತ್ನಿ ಸಂಶಯಗೊಂಡು ವಿಚಾರಿಸಿದ್ದಾರೆ. ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆಗಿದೆ ಎಂದು ಮಾಹಿತಿ ನೀಡಿದ್ದರು. ಕೂಡಲೇ ಮಾಝೀನ್ ನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಅಷ್ಟರಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಸರ್ಜರಿಯ ವೇಳೆ ವೈದ್ಯರು ಎಡವಟ್ಟು ಮಾಡಿಕೊಂಡಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದು, ಕದ್ರಿ‌ ಠಾಣೆಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸರ್ಜರಿ ಸಂದರ್ಭದಲ್ಲಿ ಅನಸ್ತೇಶಿಯಾ ಕೊಟ್ಟದ್ದು ಓವರ್ ಡೋಸ್ ಆಗಿದೆ ಎನ್ನಲಾಗುತ್ತಿದ್ದು ಅದೇ ಕಾರಣದಿಂದ ಶಸ್ತ್ರಚಿಕಿತ್ಸೆ ಬಳಿಕ ದೇಹ ಸ್ಥಿರತೆಗೆ ಬಂದಿರಲಿಲ್ಲ ಎನ್ನಲಾಗಿದೆ, ಮಾಝಿನ್ ಎರಡು ವರ್ಷದ ಹಿಂದೆ ಮದುವೆಯಾಗಿದ್ದು ಮಕ್ಕಳಾಗಿರಲಿಲ್ಲ. ಈತನ ಅಣ್ಣನೂ ನಾಲ್ಕು ವರ್ಷಗಳ ಹಿಂದೆ ಅಕಾಲಿಕ ಸಾವು ಕಂಡಿದ್ದರು. ಇವರ ಹೆತ್ತವರಿಗೆ ಇಬ್ಬರೇ ಪುತ್ರರಾಗಿದ್ದು ಇಬ್ಬರೂ ದುರಂತ ಸಾವು ಕಂಡಿದ್ದು ಕುಟುಂಬಸ್ಥರನ್ನು ತೀವ್ರ ಶೋಕಕ್ಕೀಡು ಮಾಡಿದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಅರೋಗ್ಯ ಇಲಾಖೆ ಸ್ವಯಂ ಪ್ರೇರಿತ ದೂರು ದಾಖಲು ಮಾಡಿ, ತನಿಖೆಗೆ ತಂಡ ರಚನೆ ಮಾಡಿದ್ದಾರೆ. ಆದ್ರೆ ಪ್ರಾಣ ಕಳಕೊಂಡ ಯುವಕನ ಮನೆಗೆ ಆದ ನಷ್ಟವನ್ನು ಸರಿದೂಗಿಸುವವರು ಯಾರು ? ಈಗಾಗಲೇ ಮಾಝಿನ್  ಸಾವಿಗೆ ನ್ಯಾಯ ದೊರಕಿಸಿಕೊಡುಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಂದೋಲನ ಆರಂಭವಾಗಿದೆ. ಕರಾವಳಿಯ ಬಹು ವರ್ಷಗಳ ಬೇಡಿಕೆ ದಕ್ಷಿಣ ಕನ್ನಡದಲ್ಲಿ ಸುಸಜ್ಜಿತ ಸರ್ಕಾರಿ ಮೆಡಿಕಲ್ ಕಾಲೇಜ್ ಗಾಗಿ ಜನಾಂದೋಲನ ಈಗಾಗಲೇ ಆರಂಭವಾಗಿದೆ. ಇಲ್ಲಿನ ಮೆಡಿಕಲ್ ಮಾಫಿಯಾವನ್ನು ಈ ಕಾಲೇಜು ಆರಂಭವಾದಲ್ಲಿ ಸ್ವಲ್ಪ ಮಟ್ಟಕ್ಕೆ ನಿಯಂತ್ರಿಸಬಹುದಾಗಿದೆ. ಆದ್ರೆ   ಕರಾವಳಿಯಲ್ಲಿ ಕಳೆದ ಒಂದು ದಶಕದಿಂದ ಮೆಡಿಕಲ್ ಮಾಫಿಯಾ ಆಳವಾಗಿ ಬೇರೂರಿದೆ.  ಮಂಗಳೂರು ನಗರ ಸೇರಿದಂತೆ ಜಿಲ್ಲೆಯ ಅಲ್ಲಲ್ಲಿ ಅಣಬೆಗಳಂತೆ ಸಣ್ಣ, ದೊಡ್ಡ ಆಸ್ಪತ್ರೆ, ಕ್ಲಿನಿಕ್ ಗಳು ತಲೆ ಎತ್ತುತ್ತಿವೆ.   ಸರ್ಕಾರಗಳನ್ನೇ ನಿಯಂತ್ರಿಸುವಷ್ಟು ಈ ಮಾಫಿಯಾ ಬೆಳೆದಿದೆ. ಆದ್ದರಿಂದ ಭವಿಷ್ಯದಲ್ಲಿ ಇದನ್ನು ಮಟ್ಟ ಹಾಕುವವರು ಯಾರು ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *