DAKSHINA KANNADA
ಮಂಗಳೂರು : ಸರಕಾರದ ಆದೇಶ ಪಾಲಿಸದ MRPL ವಿರುದ್ದ ಜಿಲ್ಲಾ ಉಸ್ತುವಾರಿ ಸಚಿವರಿಗೆ ನಾಗರಿಕ ಹೋರಾಟ ಸಮಿತಿಯಿಂದ ದೂರು..!
ಮಂಗಳೂರು : ಹಸಿರು ವಲಯ ನಿರ್ಮಿಸುವ, ಸ್ಥಳೀಯ ಗ್ರಾಮಸ್ಥರನ್ನು ಕಂಪೆನಿಯ ಮಾಲಿನ್ಯದಿಂದ ರಕ್ಷಿಸುವ ಸರಕಾರದ ಆದೇಶ ಪಾಲಿಸದ MRPL ವಿರುದ್ದ ನಾಗರಿಕ ಹೋರಾಟ ಸಮಿತಿ ಜೋಕಟ್ಟೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಲಿಖಿತ ದೂರು ನೀಡಿದೆ.
2013, 14 ರಲ್ಲಿ mrpl ಕೋಕ್ ಸಲ್ಪರ್ ಘಟಕದ ಮಾಲಿನ್ಯದ ವಿರುದ್ದ ಗ್ರಾಮಸ್ಥರು ನಡೆಸಿದ ಹೋರಾಟದ ಪರಿಣಾಮ ಅಂದಿನ ರಾಜ್ಯ ಸರಕಾರ ಕಂಪೆನಿ ಹಾಗೂ ಜನವಸತಿ ನಡುವೆ ನಿರ್ಮಿಸಲು ಆದೇಶಿಸಿದ 27 ಎಕರೆ ಹಸಿರು ವಲಯ ನಿರ್ಮಾಣಕ್ಕೆ ಕಂಪೆನಿ ಹಿಂದೇಟು ಹಾಕುತ್ತಿರುವುದಾಗಿ ಆರೋಪಿಸಿ, ಆದೇಶ ಜಾರಿಗೆ ಕಂಪೆನಿಗೆ ನಿರ್ದೇಶಿಸಲು ಒತ್ತಾಯಿಸಿ ನಾಗರಿಕ ಹೋರಾಟ ಸಮಿತಿ, ಜೋಕಟ್ಟೆ ಇದರ ನೇತೃತ್ವದಲ್ಲಿ ಗ್ರಾಮಸ್ಥರು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿದರು. ಸಚಿವರ ಮುಂದಿನ ಜಿಲ್ಲಾ ಭೇಟಿಯ ಸಂದರ್ಭ ಈ ಕುರಿತು ಅಧಿಕೃತ ಸಭೆ ಕರೆಯಲು ಜಿಲ್ಲಾಧಿಕಾರಿಗೆ ಸೂಚಿಸುವುದಾಗಿ ಸಚಿವರು ಭರವಸೆ ನೀಡಿದರು. ಮುನೀರ್ ಕಾಟಿಪಳ್ಳ, ಅಭಯ ಚಂದ್ರ ಜೈನ್, ಐವಾನ್ ಡಿ ಸೋಜ, ಮಿಥುನ್ ರೈ, ಅಬೂಬಕ್ಕರ್ ಬಾವ, ಬಶೀರ್ ಬಿ ಎಸ್, ಸೀತಾರಾಮ ಆಚಾರ್ಯ, ಸಂಸುದ್ದೀನ್ ಮತ್ತಿತರರು ಉಪಸ್ಥಿತರಿದ್ದರು
ಸಮಿತಿ ಸಚಿವರಿಗೆ ನೀಡಿದ ದೂರಿನ ವಿವರ ಹೀಗಿದೆ..
MRPL ಕಂಪೆನಿಯ ಮೂರನೇ ಹಂತದ ಕೋಕ್ ಸಲ್ಫರ್ ಘಟಕ 2013 ರಲ್ಲಿ ಕಾರ್ಯಾರಂಭ ಮಾಡಿದಾಗ ಸುತ್ತಲ ಜೋಕಟ್ಟೆ, ತೋಕೂರು, ಕೆಂಜಾರು, ಕಳವಾರು ಗ್ರಾಮಗಳಲ್ಲಿ ಘಟಕದ ಪೆಟ್ ಕೋಕ್, ಸಲ್ಪರ್ ಮಾಲಿನ್ಯದಿಂದ ಅಸಹನೀಯ ಪರಿಸ್ಥಿತಿ ಉಂಟಾಯ್ತು. ಊರಿನ ಜನವಸತಿ ಪ್ರದೇಶದಲ್ಲಿ ಪೆಟ್ ಕೋಕ್ ಸಲ್ಪರ್ ಪುಡಿಗಳು ಹಾರಿ ಸುರಿಯತೊಡಗಿದವು. ಇದರಿಂದ ಜನರ ಆರೋಗ್ಯ, ಪರಿಸರ ಕೆಟ್ಟು ಬದುಕು ದುಸ್ತರ ಆಗಿತ್ತು. ಆ ಸಂದರ್ಭ ಗ್ರಾಮಸ್ಥರು ನಾಗರಿಕ ಹೋರಾಟ ಸಮಿತಿ ರಚಿಸಿ ಕಂಪೆನಿ ಉಂಟು ಮಾಡಿರುವ ಮಾಲಿನ್ಯದ ವಿರುದ್ದ ವರ್ಷಗಳ ಕಾಲ ಹೋರಾಟ ನಡೆಸಿದರು. ಇದರ ಭಾಗವಾಗಿ ಆಗಿನ ಸಿದ್ದರಾಮಯ್ಯ ಸರಕಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿ ಅದರ ಮೂಲಕ ಸಮಸ್ಯೆಗಳನ್ನು ಅಭ್ಯಾಸ ಮಾಡಿ ಕಂಪೆನಿ ಹಾಗೂ ಗ್ರಾಮಸ್ಥರ ಸಹಮತದೊಂದಿಗೆ ಆರು ಅಂಶಗಳ ಪರಿಹಾರ ಕ್ರಮಗಳನ್ನು ಕಾಲಮಿತಿಯಲ್ಲಿ ಕೈಗೊಳ್ಳಲು ಎಮ್ ಆರ್ ಪಿ ಎಲ್ ಗೆ ಆದೇಶಿಸಿ 2015 ಎಪ್ರಿಲ್ ನಲ್ಲಿ ಗಜೆಟ್ ನೋಟಿಫಿಕೇಷನ್ ಹೊರಡಿಸಿತು. ಅದರಲ್ಲಿ 5 ಅಂಶಗಳನ್ನು ಕಂಪೆನಿಯು ಅರೆಬರೆಯಾಗಿ ಜಾರಿಗೊಳಿಸಿದೆ. ಬಹಳ ಪ್ರಧಾನವಾದ, ಅಂದರೆ ಕಂಪೆನಿ ಹಾಗೂ ಗ್ರಾಮದ ಜನವಸತಿ ಪ್ರದೇಶಗಳ ನಡುವೆ 27 ಎಕರೆ ಜಮೀನು ಸ್ವಾಧೀನ ಪಡಿಸಿ ಹಸಿರು ವಲಯ ನಿರ್ಮಿಸುವ ಆದೇಶವನ್ನು ಕಂಪೆನಿ ಜಾರಿಗೊಳಿಸದೆ ಗ್ರಾಮಸ್ಥರ ಬದುಕಿನ ಜೊತೆಗೆ ಚೆಲ್ಲಾಟವಾಡುತ್ತಿದೆ. ಇದರಿಂದ ಈ ಭಾಗದಲ್ಲಿ ಕೈಗಾರಿಕಾ ಮಾಲಿನ್ಯದಿಂದ ಜನರ ಬದುಕೇ ದುಸ್ತರವಾಗಿದೆ. ನೆಮ್ಮದಿ ಕಳೆದುಕೊಂಡಿದೆ. 27 ಎಕರೆ ಹಸಿರು ವಲಯ ನಿರ್ಮಿಸುವ ಸರಕಾರದ ಆದೇಶ ಕಂಪೆನಿಯು ಪರಿಸರ ನಿಯಮ ಪ್ರಕಾರ ನಿರ್ಮಿಸಬೇಕಾದ ಕಡ್ಡಾಯ 33 ಶೇಕಡಾ ಹಸಿರು ವಲಯ ನಿರ್ಮಾಣದ ಕೊರತೆಯ ಭಾಗವೂ ಆಗಿದ್ದು, ಇದು ಹೆಚ್ಚುವರಿ ಹಸಿರು ವಲಯ ಆಗಿರುವುದಿಲ್ಲ. ಕೊರತೆ ಹಸಿರು ವಲಯ ಭರ್ತಿ ಮಾಡದೆ ಕಂಪೆನಿಯ ಕಾರ್ಯಾಚರಣೆಗೆ ಪರಿಸರ ನಿಯಮಗಳು ಅನುಮತಿಸುವುದಿಲ್ಲ ಎಂಬುದು ಗಮನಾರ್ಹ ಅಂಶ.ಆದರೂ, ಕಂಪೆನಿಯು ಕುಂಟು ನೆಪಗಳನ್ನು ಮುಂದಿಟ್ಟು ಕಾಲಹರಣ ಮಾಡುತ್ತಿದೆ. ಜನಪರ ಆಲೋಚನೆಗಳುಲ್ಲ ತಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಗ್ರಾಮಸ್ಥರನ್ನು ಮಾರಕ ಕೈಗಾರಿಕಾ ಮಾಲಿನ್ಯದಿಂದ ಕಾಪಾಡಬೇಕು ಎಂದು ವಿನಂತಿಸುತ್ತಿದ್ದೇವೆ. ಈ ಕುರಿತು ಸರಕಾರ ರಚಿಸಿರುವ ಸಮಿತಿಯು ಕಾರ್ಯಪ್ರವೃತ್ತವಾಗಿ 27 ಎಕರೆ ಹಸಿರು ವಲಯ ತಕ್ಷಣ ನಿರ್ಮಿಸುವಂತೆ, ಅದಕ್ಕಾಗಿ ಈಗಾಗಲೆ ಗುರುತಿಸಲಾಗಿರುವ ಜಮೀನು ಸ್ವಾಧೀನಕ್ಕೆ KIADB ಮೂಲಕ ಪ್ರಕ್ರಿಯೆ ನಡೆಸುವಂತೆ ತಾವು ನಿರ್ದೇಶೀಸಬೇಕು ಎಂದು ಆಗ್ರಹಿಸುತ್ತೇವೆ. ಈ ಸಮಿತಿಯ ಸಭೆಯನ್ನು ತಾವು ಖುದ್ದು ಹಾಜರಿದ್ದು ನಡೆಸುವಂತೆಯೂ ತಮ್ಮಲ್ಲಿ ವಿನಮ್ರವಾಗಿ ಮನವಿ ಮಾಡುತ್ತಿದ್ದೇವೆ.