DAKSHINA KANNADA
ಮಂಗಳೂರು : ಮಂಗಳೂರು ನಗರ ಸೇರಿ ದಕ್ಷಿಣ ಕನ್ನಡದಲ್ಲಿ ಗುಡುಗು ಸಿಡಿಲಿನ ಮಳೆಯಬ್ಬರ..!

ಮಂಗಳೂರು : ಮಂಗಳೂರು ನಗರ ಸೇರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ 4 ರಿಂದ ಗುಡುಗು ಸಿಡಿಲಿನ ಸಹಿತ ಭಾರಿ ಮಳೆಯಾಗಿದೆ. ಹಿಂದೆ ಎಂದೂ ಕಂಡರಿಯದ ಬಿಸಿಲ ಬೇಗೆಯಿಂದ ಬಸವಳಿದಿದ್ದ ಜನತೆ ಏಕಾಏಕಿ ಸುರಿದ ಮಳೆಯಿಂದ ಕೊಂಚ ನೆಮ್ಮದಿಯ ಉಸಿರು ಬಿಟ್ಟಿದ್ದಾರೆ.
ಸಿಡಿಲಿನ ಅಬ್ಬರಕ್ಕೆ ಕೆಲ ಸಮಯ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತ್ತು. ಹವಾಮಾನ ಇಲಾಖೆ ಮಾಹಿತಿಯಂತೆ ಮುಂದಿನ ಮೂರು ದಿನ ದಕ್ಷಿಣ ಕನ್ನಡ ಮತ್ತು ಉಡುಪಿ ಸಹಿತ ಕರಾವಳಿ ಭಾಗದ ಕೆಲವು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಸುಳ್ಯ ಕಲ್ಮಡ್ಕ ಗ್ರಾಮದ ಮುಚ್ಚಿಲ ಕಜೆ ಅಬ್ಬಾಸ್ ಎಂಬವರ ಹಟ್ಟಿಯಲ್ಲಿದ್ದ ಕರು ಸಿಡಿಲಿನ ಹೊಡೆತಕ್ಕೆ ಬಲಿಯಾಗಿದೆ. ಅಲ್ಲದೆ ಮನೆಯ ವಯರಿಂಗ್, ಸ್ವಿಚ್ ಬೊರ್ಡ್ ಗಳು ಸಂಪೂರ್ಣ ಹೊತ್ತಿ ಹೋಗಿದೆ.ಮನೆಮಂದಿ ಅಪಾಯದಿಂದ ಪಾರಾಗಿದ್ದು ಸಿಡಿಲಿನ ಬಡಿತದಿಂದಾಗಿ ಅಪಾರ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಶುಕ್ರವಾರವಾರ ಜಿಲ್ಲೆಯ ಆನೇಕ ಭಾಗಗಗಳಲ್ಲಿ ಸಿಡಿಲು ಸಹಿತ ಉತ್ತಮ ಮಳೆಯಾಗಿತ್ತು. ಸುಳ್ಯ, ಕಡಬ, ಬೆಳ್ತಂಗಡಿ ಬಂಟ್ವಾಳ, ಪುತ್ತೂರು, ಸುರತ್ಕಲ್ ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ನಿಡಿಗಲ್-ಸೀಟು- ಸೋಮಂತಡ್ಕ ಪರಿಸರದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆಯನ್ನು ಸಂಪೂರ್ಣ ಅಗೆದು ಹಾಕಲಾಗಿದ್ದರಿಂದ, ಕೆಸರುಮಯ ರಸ್ತೆಯಲ್ಲೇ ಜನ ವಾಹನ ಓಡಾಡಬೇಕಾಯಿತು.ಶುಕ್ರವಾರ ಸಂಜೆ ಬೀಸಿದ ಗಾಳಿ ಮಳೆಗೆ ಕನಕಮಜಲಿನಲ್ಲಿ ರಸ್ತೆಗೆ ಮರ, ವಿದ್ಯುತ್ ಕಂಬ ಉರುಳಿ ಸಂಚಾರಕ್ಕೆ ತಡೆ ಉಂಟಾಯಿತು. ಮಂಗಳೂರು, ಉಳ್ಳಾಲ, ಮಲ್ಪೆ, ಗಂಗೊಳ್ಳಿ, ಭಟ್ಕಳ, ಹೊನ್ನಾವರ, ಕಾರವಾರ ಕಡಲ ತೀರದ ಪ್ರದೇಶಗಳಲ್ಲಿ ಅಲೆಗಳ ಅಬ್ಬರ ತುಸು ಜೋರಾಗಿಯೇ ಇದ್ದು ಕಡಲ ತೀರಕ್ಕೆ ಹೋಗುವ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಕೋರಲಾಗಿದೆ.
ಮಂಗಳೂರು ನಗರದಲ್ಲಿ ಉರುಳಿ ಬಿದ್ದ ಮರ:
ಮಂಗಳೂರಿನಲ್ಲಿ ಶನಿವಾರ ಮುಂಜಾನೆ ಧಾರಕಾರವಾಗಿ ಸುರಿದ ಮಳೆಯಿಂದಾಗಿ ನಗರದ ಹಂಪನಕಟ್ಟೆ ಬಳಿ ಭಾರಿ ಗಾತ್ರದ ಮರವೊಂದು ನೆಲಕ್ಕೆ ಉರುಳಿದ್ದರಿಂದ ರಸ್ತೆ ಬದಿ ಮರ ಕೆಳಗೆ ನಿಲುಗಡೆ ಗೊಳಿಸಿದ ಕಾರು ಹಾಗೂ ಬೈಕ್ ಜಖಂ ಗೊಂಡಿವೆ. ವಾಹನದಲ್ಲಿ ಯಾರು ಇಲ್ಲದೇ ಇರೋದರಿಂದ ಜನಸಾಮಾನ್ಯರಿಗೆ ಯಾವುದೇ ಅಪಾಯ ಸಂಭವಿಸಲಿಲ್ಲ…
ಸ್ಥಳಕ್ಕೆ ಪಾಂಡೇಶ್ವರ ಅಗ್ಬಿಶಾಮಕ ದಳದ ಅಧಿಕಾರಿ ಹಾಗೂ ಸಿಬ್ಬಂದಿ ಗಳು, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮರ ತೆರವು ಮಾಡಿ ವಾಹನಗಳಿಗೆ ಸಂಚರಿಸಲು ಅನುವು ಮಾಡಿ ಕೊಟ್ಟರು.