LATEST NEWS
ಆಟೋ ಡ್ರೈವರ್ ಮೊಹಮ್ಮದ್ ಷರೀಫ್ ಹತ್ಯೆಗೆ ಕಾರಣವಾದ ರಸ್ತೆ ಬದಿಯ ಸಣ್ಣ ಜಗಳ

ಮಂಗಳೂರು ಎಪ್ರಿಲ್ 15: ಮೂಲ್ಕಿ ಕೊಳ್ಳಾಡು ನಿವಾಸಿ ಮೊಹಮ್ಮದ್ ಷರೀಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಮಂಜೇಶ್ವರ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಬಂಧಿತನನ್ನು ಮಂಗಳೂರಿನ ಹೊರವಲಯದ ಸುರತ್ಕಲ್ ಮೂಲದ ಅಭಿಷೇಕ್ ಶೆಟ್ಟಿ ಎಂದು ಗುರುತಿಸಲಾಗಿದೆ. ರಸ್ತೆಯಲ್ಲಿ ನಡೆದ ಹಳೆಯ ಗಲಾಟೆಯೇ ಈ ಕೊಲೆಗೆ ಕಾರಣ ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಆಟೋಚಾಲಕರಾಗಿದ್ದ ಮಹಮ್ಮದ್ ಷರೀಫ್ ಅವರು ನಿತ್ಯವೂ ಮಂಗಳೂರಿನ ಕೊಟ್ಟಾರದ ಆಟೊ ನಿಲ್ದಾಣದಲ್ಲಿ ಬಾಡಿಗೆ ನಡೆಸುತ್ತಿದ್ದರು. ಬುಧವಾರ ಮನೆಯಿಮದ ಹೊರಟಿದ್ದ ಅವರು ರಾತ್ರಿಯಾದರೂ ಮನೆಗೆ ಮರಳಿರಲಿಲ್ಲ. ಈ ಬಗ್ಗೆ ಕುಟುಂಬದವರು ಮೂಲ್ಕಿ ಠಾಣೆಗೆ ದೂರು ನೀಡಿದ್ದರು.
ಷರೀಫ್ ಅವರ ಮೃತದೇಹ ಕುಂಜತ್ತೂರು ಅಡ್ಕ ಪಳ್ಳ ಎಂಬಲ್ಲಿನ ಪಾಳುಬಿದ್ದ ಬಾವಿಯಲ್ಲಿ ಎಪ್ರಿಲ್ 10 ರಂದು ಪತ್ತೆಯಾಗಿತ್ತು. ಶವದ ಮೈಮೇಲೆ ಮಾರಕಾಯುಧದಿಂದ ಥಳಿಸಿದ ಗಾಯಗಳು ಪತ್ತೆಯಾಗಿದ್ದುವು. ಬಾವಿಯ ಸಮೀಪದಲ್ಲೇ ಇವರ ಆಟೊರಿಕ್ಷಾ ಕೂಡ ಸಿಕ್ಕಿತ್ತು. ಪ್ರಕರಣ ದಾಖಲಿಸಿಕೊಂಡ ಮಂಜೇಶ್ವರ ಪೊಲೀಸರು ಆರೋಪಿ ಅಭಿಷೇಕ್ ಶೆಟ್ಟಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ಅಭಿಷೇಕ್ ಮಂಗಳೂರಿನಲ್ಲಿ ಖಾಸಗಿ ಶಾಲಾ ಬಸ್ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದ, ಅಲ್ಲದೆ ಮಾದಕ ವಸ್ತುಗಳ ದಾಸನಾಗಿದ್ದ ಎಂದು ಕಾಸರಗೋಡು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿ ಬಾಲಕೃಷ್ಣನ್ ನಾಯರ್ ತಿಳಿಸಿದ್ದಾರೆ. ಆರೋಪಿ ವಿಚಾರಣೆ ವೇಳೆ ಕೊಲೆ ಕಾರಣ ತಿಳಿಸಿದ್ದು, ಆರೋಪಿ ಅಭಿಷೇಕ್ ಶೆಟ್ಟಿ ಖಾಸಗಿ ಶಾಲೆಯ ಬಸ್ ಚಲಾಯಿಸುತ್ತಿರುವ ಸಂದರ್ಭ ಮಂಗಳೂರಿನ ರಸ್ತೆಯಲ್ಲಿ ಜಾಗದ ಬಿಡದ ಕಾರಣಕ್ಕೆ ಆಟೋ ಚಾಲಕ ಮಹಮ್ಮದ್ ಷರೀಫ್ ಜೊತೆ ಸಣ್ಣ ಗಲಾಟೆ ನಡೆದಿದೆ.
ಈ ಗಲಾಟೆ ನಡೆದ ಬಳಿಕ ಆರೋಪಿ ಅಭಿಷೇಕ್ ಚಲಾಯಿಸುತ್ತಿದ್ದ ಬಸ್ ಗೆ ಷರೀಫ್ ಪರಿಚಯದ ಆಟೋ ಚಾಲಕರು ರಿಕ್ಷಾವನ್ನು ಅಡ್ಡಗಟ್ಟಿ ತೊಂದರೆ ಕೊಟ್ಟಿದ್ದಾರೆ. ಇದು ಷರೀಪ್ ಹೇಳಿಯೆ ಮಾಡಿಸಿದ್ದು ಎಂದು ಆರೋಪಿ ಅಭಿಷೇಕ್ ನಂಬಿದ್ದ, ಅಲ್ಲದೆ ಷರೀಫ್ ತನ್ನ ವಿರುದ್ದ ಕೆಲಸ ಮಾಡುತ್ತಿದ್ದ ಖಾಸಗಿ ಶಾಲೆಗೆ ದೂರು ಸಲ್ಲಿಸಿದ್ದಾನೆ ಇದರಿಂದಾಗಿ ತನ್ನ ಕೆಲಸ ಹೋಗಿತ್ತು ಎಂದು ಅಭಿಷೇಕ್ ನಂಬಿದ್ದ, ಶಾಲೆಯಲ್ಲಿ ಕೆಲಸ ಕಳೆದುಕೊಂಡ ಬಳಿಕ ಅಭಿಷೇಕ್ ಮನೆಯಲ್ಲಿ ತನ್ನ ಪತ್ನಿಯೊಂದಿಗೆ ಜಗಳವಾಡುತ್ತಿದ್ದು, ಸಂಸಾರದಲ್ಲಿ ಸಮಸ್ಯೆ ಪ್ರಾರಂಭವಾಗಿತ್ತು, ಹೀಗಾಗಿ ಈ ಎಲ್ಲಾ ಕಾರಣಕ್ಕೆ ಮಹಮ್ಮದ್ ಷರೀಫ್ ಕಾರಣ ಎಂದು ನಂಬಿದ್ದ ಅಭಿಷೇಕ ಷರೀಪ್ ಮೇಲೆ ಹಗೆ ತೀರಿಸಿಕೊಳ್ಳಲು ಯೋಚಿಸಿದ್ದ.
ಅದರಂತೆ ಏಪ್ರಿಲ್ 9 ರ ರಾತ್ರಿ ಅಭಿಷೇಕ್ ಬೈಕಂಪಾಡಿಯಿಂದ ಶರೀಫ್‌ನ ಆಟೋದಲ್ಲಿ ಪ್ರಯಾಣ ಬೆಳೆಸಿದ್ದ, ಅಭಿಷೇಕ್ ಹಾಗೂ ಷರೀಫ್ ನಡುವೆ ಗಲಾಟೆ ನಡೆದ ಸಂದರ್ಭ ಅಭಿಷೇಕ್ ಉದ್ದ ತಲೆಗೂದಲನ್ನು ಬಿಟ್ಟಿದ್ದ, ಇದೀಗ ಕೂದಲನ್ನು ಚಿಕ್ಕದಾಗಿ ಕತ್ತರಿಸಿದ ಪರಿಣಾಮ ಶರೀಫ್ ಅವನನ್ನು ಗುರುತಿಸಲು ಸಾಧ್ಯವಾಗಿಲ್ಲ. ಅಭಿಷೇಕ ಆಟೋರಿಕ್ಷಾವನ್ನು ಮಂಜೇಶ್ವರದ ಕುಂಜತ್ತೂರು ಪಡುವು ಎಂಬ ಪ್ರದೇಶಕ್ಕೆ ತೆರಳುವಂತೆ ಹೇಳಿದ್ದಾನೆ. ಈ ಪ್ರದೇಶದಲ್ಲಿ ಅಭಿಷೇಕ ಮಾದಕ ವಸ್ತುಗಳನ್ನು ಸೇವೆನೆ ಆಗಾಗ್ಗೆ ಹೋಗುತ್ತಿರುವ ಸ್ಥಳವಾಗಿತ್ತು. ನಿರ್ಜನ ಪ್ರದೇಶವಾದ ಹಿನ್ನಲೆ ಆರೋಪಿ ಅಭಿಷೇಕ್ ಶರಿಫ್ ನನ್ನು ಕುತ್ತಿಗೆಗೆ ಇರಿದು ಕೊಲೆ ಮಾಡಿ ಬಳಿಕ ದೇಹವನ್ನು ಅಲ್ಲೆ ಪಾಳು ಬಿದ್ದ ಬಾವಿಗೆ ಹಾಕಿದ್ದಾನೆ.
ಬಳಿಕ ದಾರಿಯಲ್ಲಿ ಸಿಕ್ಕ ಸ್ಕೂಟರ್ ನಲ್ಲಿ ಡ್ರಾಪ್ ತೆಗೆದುಕೊಂಡು ತನ್ನ ಸಂಬಂಧಿಕರ ಮನೆಗೆ ತೆರಳಿದ್ದಾನೆ. ಕಾಸರಗೋಡು ಎಎಸ್ಪಿ ಬಾಲಕೃಷ್ಣನ್ ನಾಯರ್ ಮತ್ತು ಡಿವೈಎಸ್ಪಿ ಸಿಕೆ ಸುನಿಲ್ ಕುಮಾರ್ ನೇತೃತ್ವದಲ್ಲಿ ಮಂಜೇಶ್ವರ ಎಸ್‌ಎಚ್‌ಒ ಇನ್ಸ್‌ಪೆಕ್ಟರ್ ಇ ಅನೂಬ್ ಕುಮಾರ್ ನೇತೃತ್ವದಲ್ಲಿ ರಚಿಸಲಾದ ವಿಶೇಷ ತನಿಖಾ ತಂಡ 208 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿತು ಮತ್ತು ಆಟೋರಿಕ್ಷಾ ಚಾಲಕರು ಮತ್ತು ಸೈಬರ್ ಪೊಲೀಸರಿಂದ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸಿತು. ಮಂಗಳೂರು ಪೊಲೀಸರ ತಾಂತ್ರಿಕ ನೆರವಿನೊಂದಿಗೆ ಆರೋಪಿ ಅಭಿಷೇಕ್ ಶೆಟ್ಟಿಯನ್ನು ಗುರುತಿಸಿ ಮೂರು ದಿನಗಳಲ್ಲಿ ಬಂಧಿಸಿದ್ದಾರೆ.
ಆರಂಭದಲ್ಲಿ ಮೂವರು ಈ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕಿಸಲಾಗಿತ್ತು, ಆದರೆ ತನಿಖೆಯಲ್ಲಿ ಓರ್ವನೇ ಕೊಲೆ ಮಾಡಿದ್ದು ಸಾಭೀತಾಗಿದೆ. ರಸ್ತೆಬದಿಯ ಸಣ್ಣ ಜಗಳ ಓರ್ವನ ಜೀವ ತೆಗೆಯುವ ಹಂತಕ್ಕೆ ಹೋಗಿದ್ದು ಮಾತ್ರ ವಿಷಾಧನೀಯ.