Connect with us

    DAKSHINA KANNADA

    ಮಂಗಳೂರು : ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಮಾಲೋಚನಾ ಸಭೆ, ನಂತೂರು-ಸುರತ್ಕಲ್ ಹೆದ್ದಾರಿ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ನ. 26 ರಂದು ಸಾಮೂಹಿಕ ಧರಣಿಗೆ ನಿರ್ಧಾರ

    ಮಂಗಳೂರು : ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಮಾಲೋಚನಾ ಸಭೆ ಮಂಗಳೂರಿನಲ್ಲಿ   ನಡೆಯಿತು, ನಂತೂರು-ಸುರತ್ಕಲ್ ಹೆದ್ದಾರಿ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ನ. 26 ರಂದು ಸಾಮೂಹಿಕ ಧರಣಿಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

    ಹದಗೆಟ್ಟಿರುವ ನಂತೂರು – ಸುರತ್ಕಲ್ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಕುರಿತು ಚರ್ಚಿಸಲು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್ ಇದರ ವತಿಯಿಂದ ಕುಳಾಯಿ ಮಹಿಳಾ ಮಂಡಲದ ಸಭಾಂಗಣದಲ್ಲಿ ಸಮಾಲೋಚನಾ ಸಭೆ ನಡೆಯಿತು. ಕಳೆದ ಐದಾರು ವರ್ಷಗಳಿಂದ ಡಾಮರೀಕರಣ, ನಿರ್ವಹಣೆ ಇಲ್ಲದೆ ಪೂರ್ತಿ ಹದಗೆಟ್ಟಿರುವ ಹೆದ್ದಾರಿಯ ಹಲವು ಸಮಸ್ಯೆಗಳ ಕುರಿತು ಹಲವರು ಬೆಳಕು ಚೆಲ್ಲಿದರು. ಸಮಸ್ಯೆ ಬಗೆಹರಿಸಲು ಸ್ಥಳೀಯ ಜನಪ್ರತಿನಿಧಿಗಳ ನಿರಾಸಕ್ತಿಯ ಕುರಿತು ಆಕ್ಷೇಪಗಳು ವ್ಯಕ್ತವಾದವು. ಹೆದ್ದಾರಿಯ ದುಸ್ಥಿತಿಯಿಂದ ಅಪಘಾತಗಳು ಸರಣಿಯಾಗಿ ನಡೆಯುತ್ತಿದ್ದು, ಸವಾರರು ಪ್ರಾಣಕಳೆದುಕೊಳ್ಳುತ್ತಿದ್ದರೂ ಸಂಬಂಧಪಟ್ಟವರು ಗಮನ ಹರಿಸದಿರುವುದು ಚರ್ಚೆಗೆ ಒಳಪಟ್ಟಿತು.

    ಚರ್ಚೆ, ಅಭಿಪ್ರಾಯಗಳ ತರುವಾಯ ಹೆದ್ದಾರಿಯ ಪ್ರಮುಖ ಸಮಸ್ಯೆಗಳನ್ನು ಗುರುತಿಸಲಾಯಿತು. ಪ್ರಧಾನವಾಗಿ, ಹದಗೆಟ್ಟಿರುವ ಸುರತ್ಕಲ್ – ನಂತೂರು ಹೆದ್ದಾರಿಯನ್ನು ಪೂರ್ಣ ಪ್ರಮಾಣದಲ್ಲಿ ದುರಸ್ತಿ ಪಡಿಸಬೇಕು, ಕೂಳೂರು ಹೊಸ ಸೇತುವೆ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸಬೇಕು, ನಂತೂರು ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಕಾಲಮಿತಿ ನಿಗದಿಪಡಿಸಬೇಕು, ಸರ್ವಿಸ್ ರಸ್ತೆಗಳನ್ನು ಹೆದ್ದಾರಿಯ ಉದ್ದಕ್ಕೂ ನಿರ್ಮಿಸಬೇಕು, ಬೀದಿದೀಪಗಳ ಅಳವಡಿಕೆ, ನಿರ್ವಹಣೆ ಸರಿಪಡಿಸಬೇಕು, ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ನಿರ್ಮಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ಹೋರಾಟ ನಡೆಸಲು ತೀರ್ಮಾನಿಸಲಾಯಿತು. ಪ್ರಥಮ ಹಂತದಲ್ಲಿ ನವಂಬರ್ 26, 2024 ರಂದು ಕೂಳೂರು ಸೇತುವೆ ಬಳಿ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಸಾಮೂಹಿಕ ಧರಣಿ ನಡೆಸಲು ನಿರ್ಧರಿಸಲಾಯಿತು.

    ಸಮಾಲೋಚನಾ ಸಭೆಯ ಅಧ್ಯಕ್ಷತೆಯನ್ನು ಹಿರಿಯ ಮುಂದಾಳು ಎಮ್ ಜಿ ಹೆಗ್ಡೆ ವಹಿಸಿದ್ದರು. ಹೋರಾಟ ಸಮಿತಿಯ ಸಂಚಾಲಕರಾದ ಮುನೀರ್ ಕಾಟಿಪಳ್ಳ ವಿಷಯ ಮಂಡಿಸಿದರು. ಶ್ರೀನಾಥ್ ಕುಲಾಲ್ ಸ್ವಾಗತಿಸಿದರು. ಮಾಜಿ ಉಪಮೇಯರ್ ಗಳಾದ ಮುಹಮ್ಮದ್ ಕುಂಜತ್ತಬೈಲ್, ಪುರುಷೋತ್ತಮ ಚಿತ್ರಾಪುರ, ದಲಿತ ನಾಯಕರಾದ ಎಂ ದೇವದಾಸ್, ಹೋರಾಟ ಸಮಿತಿಯ ಸಹ ಸಂಚಾಲಕರಾದ ವೈ ರಾಘವೇಂದ್ರ ರಾವ್, ಬಿ ಕೆ ಇಮ್ತಿಯಾಜ್, ಮೂಸಬ್ಬ ಪಕ್ಷಿಕೆರೆ, ರಮೇಶ್ ಟಿ ಎನ್, ಸದಾಶಿವ ಶೆಟ್ಟಿ, ರಾಜೇಶ್ ಕುಳಾಯಿ, ದಲಿತ ಸಂಘಟನೆಗಳ ಸುಧಾಕರ ಪಡುಬಿದ್ರೆ, ರಘು ಎಕ್ಕಾರು, ಕೃಷ್ಣ ತಣ್ಣೀರುಬಾವಿ, ಮುಸ್ಲಿಂ ಐಕ್ಯತಾ ವೇದಿಕೆಯ ಆಶ್ರಫ್ ಬದ್ರಿಯ, ಅದ್ದು ಕೃಷ್ಣಾಪುರ, ಮಾಜಿ ಕಾರ್ಪೊರೇಟರ್ ಅಯಾಝ್ ಕೃಷ್ಣಾಪುರ, ಡಿವೈಎಫ್ಐ ನ ಮಕ್ಸೂದ್ ಬಿ ಕೆ, ಪ್ರಮೀಳಾ ಕೆ, ಮಹಿಳಾ ಕಾಂಗ್ರೆಸ್ ನ ಶಶಿಕಲಾ, ಹೋರಾಟ ಸಮಿತಿಯ ಪ್ರಮುಖರಾದ ಆನಂದ ಅಮೀನ್, ಹರೀಶ್ ಪೇಜಾವರ, ಅಬೂಬಕ್ಕರ್ ಬಾವ, ಆಶಾ ಬೋಳೂರು, ಗಂಗಾಧರ ಬಂಜನ್ ಶಮೀರ್ ಕಾಟಿಪಳ್ಳ, ಸಲೀಂ ಶ್ಯಾಡೋ ಸೇರಿದಂತೆ ಹಲವು ಸಂಘಟನೆಗಳ ಪ್ರಮುಖರು ಹಾಜರಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply