DAKSHINA KANNADA
ಮಂಗಳೂರು: ಮದುವೆ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ

ಮಂಗಳೂರು ಮೇ 23: ಹೆಂಡತಿ ತವರು ಮನೆಗೆ ತೆರಳಿದ್ದಾಳೆ ಎಂದು ಮದುವೆ ಬ್ರೋಕರನ್ನು ಚೂರಿ ಇರಿದು ಕೊಲೆ ಮಾಡಿದ ಘಟನೆ ಗುರುವಾರ ರಾತ್ರಿ ನಗರದ ಹೊರವಲಯದ ವಳಚ್ಚಿಲ್ ಪದವು ಎಂಬಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ವಾಮಂಜೂರು ನಿವಾಸಿ ಅಹ್ಮದ್ ಭಾವ ಅವರ ಪುತ್ರ ಸುಲೇಮಾನ್ (50) ಎಂದು ಗುರುತಿಸಲಾಗಿದ್ದು, ಅವರ ಇಬ್ಬರು ಪುತ್ರರಾದ ರಿಯಾಬ್ ಮತ್ತು ಸಿಯಾಬ್ ಗಾಯಗೊಂಡಿದ್ದಾರೆ.
ಕೊಲೆ ಮಾಡಿದ ಆರೋಪಿಯನ್ನು ಮುಸ್ತಫಾ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಕೊಲೆಯಾದ ಸುಲೇಮಾನ್ ಸುಮಾರು ಎಂಟು ತಿಂಗಳ ಹಿಂದೆ ಸಂಬಂಧಿಕರಾಗಿದ್ದ ಆರೋಪಿ ಮುಸ್ತಫಾ (30) ಗೆ ಶಾಹೀನಾಜ್ ಎಂಬ ಮಹಿಳೆಯೊಂದಿಗೆ ಮದುವೆ ಮಾಡಿಕೊಟ್ಟಿದ್ದ. ನಂತರದ ವೈವಾಹಿಕ ಕಲಹದಿಂದಾಗಿ ಮುಸ್ತಫಾ ಹೆಂಡತಿ ಶಾಹೀನಾಜ್ ತನ್ನ ಹೆತ್ತವರ ಮನೆಗೆ ತೆರಳಿದ್ದಾಳೆ. ಈ ವಿಚಾರವಾಗಿ ಮದುವೆ ಬ್ರೋಕರ್ ಸುಲೇಮಾನ್ ಮತ್ತು ಮುಸ್ತಫಾ ನಡುವೆ ಗಲಾಟೆಗೆ ಕಾರಣವಾಗಿತ್ತು.

ಘಟನೆಯ ರಾತ್ರಿ, ಮುಸ್ತಫಾ ಸುಲೇಮಾನ್ ಗೆ ಕರೆ ಮಾಡಿ ಗಲಾಟೆ ಮಾಡಿದ್ದಾನೆ. ಈ ಹಿನ್ನಲೆ ಸುಲೇಮಾನ್, ತನ್ನ ಪುತ್ರರಾದ ರಿಯಾಬ್ ಮತ್ತು ಸಿಯಾಬ್ ಅವರೊಂದಿಗೆ ಮುಸ್ತಫಾ ಜೊತೆ ಮಾತುಕತೆಗಾಗಿ ವಳಚ್ಚಿಲದಲ್ಲಿರುವ ಮುಸ್ತಫಾ ಮನೆಗೆ ತೆರಳಿದ್ದಾರೆ. ಈ ವೇಳೆ ಸುಲೇಮಾನ್ ಮುಸ್ತಫಾ ಜೊತೆ ಮನೆಯೊಳಗೆ ಮಾತುಕತೆ ನಡೆಸಿದ್ದರು. ಆದರೆ ಮಾತುಕತೆ ಗಲಾಟೆಯಲ್ಲಿ ಕೊನೆಗೊಂಡ ಕಾರಣ ಸುಲೇಮಾನ್ ಮನೆಯಿಂದ ಹೊರ ಬಂದು ತನ್ಮ ಪುತ್ತರ ಜೊತೆ ಹೊರಡಲು ತಯಾರಾಗಿದ್ದರು. ಆದರೆ ಈ ವೇಳೆ ಮುಸ್ತಫಾ ತನ್ನ ಮನೆಯಿಂದ ಚಾಕುವೊಂದನ್ನು ಹಿಡಿದುಕೊಂಡು ಬಂದು ಸುಲೆಮಾನ್ ಮೇಲೆ ಇರಿದಿದ್ದಾನೆ. ಅಲ್ಲದೆ ಅವರ ಇಬ್ಬರು ಪುತ್ತರಿಗೂ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ.
ಗಂಭೀರ ಏಟಿಗೊಳಗಾದ ಸುಲೇಮಾನ್ ಸ್ಥಳದಲ್ಲೇ ಕುಸಿದು ಬಿದ್ದರೆ, ತಡೆಯಲು ಬಂದ ಮಕ್ಕಳಾದ ಸಿಯಾಬ್ ಮತ್ತು ರಿಯಾಬ್ ಮೇಲೂ ಆರೋಪಿ ತಲವಾರು ಬೀಸಿದ್ದಾನೆ. ಸಿಯಾಬ್ ಎದೆಗೆ ಗಾಯವಾಗಿದ್ದರೆ, ರಿಯಾಬ್ ಬಲಗೈಯ ಅಂಗೈಗೆ ಏಟು ಬಿದ್ದಿದೆ. ಸ್ಥಳೀಯರು ಕೂಡಲೇ ಇವರನ್ನು ಅಡ್ಯಾರ್ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದು ಅಷ್ಟರಲ್ಲಿ ಸುಲೇಮಾನ್ ಸಾವನ್ನಪ್ಪಿದ್ದಾರೆ. ಆರೋಪಿ ಮುಸ್ತಫಾನನ್ನು ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.