DAKSHINA KANNADA
ಮಂಗಳೂರಿನ ಕೋಟ್ಯಾಧಿಪತಿ ಉದ್ಯಮಿ ರಾಮದಾಸ್ ಕಾಮತ್ ಆತ್ಮಹತ್ಯೆಯ ಸೀಕ್ರೇಟ್ ರಿವೀಲ್ ..!
ಮಂಗಳೂರಿನ ಕೋಟ್ಯಾಧಿಪತಿ ಉದ್ಯಮಿ, ಕೊಡುಗೈದಾನಿ ರಾಮದಾಸ್ ಕಾಮತ್ ಅವರ ಅಸಹಜ ಸಾವಿನ ಸೀಕ್ರೇಟ್ ಕೊನೆಗೂ ಬಹಿರಂಗವಾಗಿದೆ.
ಮಂಗಳೂರು ಅಕ್ಟೋಬರ್ 13: ಮಂಗಳೂರಿನ ಕೋಟ್ಯಾಧಿಪತಿ ಉದ್ಯಮಿ, ಕೊಡುಗೈದಾನಿ ರಾಮದಾಸ್ ಕಾಮತ್ ಅವರ ಅಸಹಜ ಸಾವಿನ ಸೀಕ್ರೇಟ್ ಕೊನೆಗೂ ಬಹಿರಂಗವಾಗಿದೆ.
ಕಾಮತ್ ಅವರು ಹಠತ್ ಅಸಹಜ ಸಾವಿನ ಪ್ರಕರಣದ ಬಗ್ಗೆ ಉದ್ಯಮಿ ಬಿ.ಆರ್ ಶೆಟ್ಟಿ ಅವರು ಅನುಮಾನ ವ್ಯಕ್ತಪಡಿಸಿ ತನಿಖೆ ನಡೆಸುವಂತೆ ಪೊಲೀಸರಿಗೆ ಮನವಿ ಮಾಡಿದ್ದರು, ಈ ಬೆನ್ನಲ್ಲೇ ಇದೀಗ ತನಿಖೆ ಪ್ರಾರಂಭಿಸಿರುವ ಪೊಲೀಸರಿಗೆ ಹಲವು ಮಹತ್ವದ ಮಾಹಿತಿಗಳು ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.
ಕೊಡುಗೇ ದಾನಿಯಾಗಿರುವ ರಾಮದಾಸ್ ಕಾಮತ್ ಅವರ ಸಾವಿಗೆ ಅವರ ನಂಬಿಕಸ್ತರೇ ಮಾಡಿರುವ ವ್ಯವಹಾರದ ವಂಚನೆಯೇ ಕಾರಣ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಮಂಗಳೂರು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದಾರೆ. ಎಂ.ಆರ್ ಕಾಮತ್ ಅವರು ನೂರಾರು ಕೋಟಿ ಆಸ್ತಿಯ ಒಡೆಯರಾಗಿದ್ದು, ವಿದೇಶದಲ್ಲೂ ಉದ್ಯಮಗಳನ್ನು ಹೊಂದಿದ್ದರು. ಅದಲ್ಲದೇ ಮಂಗಳೂರಿನ ಹಲವೆಡೆ ಕೋಟಿಗಟ್ಟಲೆ ಹಣವನ್ನು ಹೂಡಿಕೆ ಮಾಡಿದ್ದರು. ಕೆಲ ವರ್ಷಗಳ ಹಿಂದೆ ನಗರಕ್ಕೆ ಮರಳಿದ್ದ ಅವರು ನಗರದ ರಥಬೀದಿಯ ಫ್ಲ್ಯಾಟ್‌ವೊಂದರಲ್ಲಿ ಪತ್ನಿ ಜೊತೆ ವಾಸವಾಗಿದ್ದರು. ಅವರ ಪುತ್ರರಿಬ್ಬರು ವಿದೇಶದಲ್ಲಿ ನೆಲೆಸಿದ್ದಾರೆ. ಕೆಲ ವಾರಗಳ ಹಿಂದೆ ಫ್ಲ್ಯಾಟ್‌ನಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು.
ಎಂ.ಆರ್ ಕಾಮತ್ ಅವರು ಹಲವು ರಿಯಲ್ ಎಸ್ಟೇಟ್ ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದರು, ಕೆಲವು ಕಟ್ಟಡಗಳನ್ನು ಖರೀದಿಸಿ ಅವುಗಳನ್ನು ನೋಡಿಕೊಳ್ಳಲು ಪರಿಚಯಸ್ಥರಿಗೆ ವಹಿಸಿದ್ದರು. ಅವರು ಪ್ರತಿ ತಿಂಗಳು ಬಾಡಿಗೆ ರೂಪದಲ್ಲಿ ಕಾಮತ್ ಅವರಿಗೆ ಹಣ ಸಂದಾಯ ಮಾಡಬೇಕಿತ್ತು. ಆದರೆ ಕೋವಿಡ್ ಕಾಲದಲ್ಲಿ ಎಲ್ಲ ವಿಧದ ವ್ಯವಹಾರಗಳಿಗೂ ಏಟು ಬಿದ್ದಿದ್ದರಿಂದ ಕಾಮತ್ ಅಷ್ಟಾಗಿ ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ವ್ಯವಹಾರಗಳು ಮೊದಲಿನ ಸ್ಥಿತಿಗೆ ಬಂದ ಬಳಿಕವೂ ಬಾಡಿಗೆ ಬಾರದಿರುವುದು ಕಾಮತ್ ಅವರನ್ನು ಚಿಂತೆಗೀಡು ಮಾಡಿತ್ತು. ಈ ಬಗ್ಗೆ ವ್ವಹಾರ ನೋಡಿಕೊಳ್ಳುತ್ತಿದ್ದವರಿಗೆ ಎಚ್ಚರಿಕೆ ನೀಡಿದ್ದ ಅವರು ಕಟ್ಟಡಗಳನ್ನು ತಾವೇ ಸ್ವಾಧೀನಕ್ಕೆ ಪಡೆಯಲು ಮುಂದಾಗಿದ್ದರು. ಬಾಡಿಗೆ ಹಣಕ್ಕೆ ಸಂಬಂಧಿಸಿದಂತೆ ಈ ನಡುವೆ ಸಿಎ ಒಬ್ಬರ ಮಧ್ಯಸ್ಥಿಕೆಯಲ್ಲಿ ರಾಜಿ ಪಂಚಾಯ್ತಿ ಕೂಡ ನಡೆದಿತ್ತು ಆದ್ರೂ ಅದೂ ವಿಫಲವಾಗಿತ್ತು, ಅಲ್ಲದೆ ಮತ್ತೆ ರಾಜಿ ಪಂಚಾಯ್ತಿ ವೇಳೆ ಸ್ವಲ್ಪ ಗಲಾಟೆ ನಡೆದಿತ್ತು ಎಂದು ಹೇಳಲಾಗಿದೆ.
ಬಳಿಕ ರಾಮದಾಸ್ ಕಾಮತ್ ಅವರಿಗೆ ನಿರಂತರ ಕೊಲೆ ಬೆದರಿಕೆ ಕರೆಗಳು ಬರುತ್ತಿದ್ದವು ಎಂದು ಹೇಳಲಾಗಿದ್ದು. ವಕೀಲರ ಮೂಲಕ ಕಾನೂನು ಹೋರಾಟಕ್ಕೆ ಎಂ.ಆರ್ ಕಾಮತ್ ಮುಂದಾಗಿದ್ದರು. ಕಾಮತ್ ಅವರು ಯಾರ ಜೊತೆಗೆಲ್ಲ ಹಣಕಾಸಿನ ವ್ಯವಹಾರ ನಡೆಸಿದ್ದರು ಎಂಬ ಮಾಹಿತಿಯನ್ನೂ ಕಲೆಹಾಕುತ್ತಿದ್ದೇವೆ. ಕೆಲವು ಉದ್ಯಮಗಳ ಹೆಸರೂ ಥಳಕು ಹಾಕಿಕೊಂಡಿದ್ದು, ಈ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದೇವೆ’ ಎಂದು ಮಂಗಳೂರು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ. ‘ಹಣಕಾಸಿನ ವಿಚಾರದಲ್ಲಿ ತಾವು ವಿಶ್ವಾಸ ಇಟ್ಟವರೇ ವಂಚನೆ ಮಾಡಿದರಲ್ಲಾ ಎಂಬ ಹತಾಶೆಯಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯೂ ಇದೆ. ಇತರರೂ ಅವರಿಗೆ ಕುಮ್ಮಕ್ಕು ನೀಡಿರುವ ಸಾಧ್ಯತೆಗಳೂ ಇವೆ. ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ’ ಎಂದ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಅಲ್ಲದೆ ರಾಮದಾಸ್ ಕಾಮತ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಮೊಬೈಲ್ ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಅಲ್ಲದೆ ರಾಮದಾಸ್ ಕಾಮತರ ಸಿಎ ಅವರ ವಿಚಾರಣೆಯನ್ನು ನಡೆಸಿದ್ದು, ಇನ್ನಷ್ಟು ಜನರ ತನಿಖೆ ನಡೆಯಬೇಕಿದೆ ಎಂದು ತನಿಖೆ ವಹಿಸಿಕೊಂಡಿರುವ ಎಸಿಪಿ ಮಹೇಶ್ ತಿಳಿಸಿದ್ದಾರೆ. ಒಟ್ಟಾರೆಯಾಗಿ ನೂರಾರು ಕೋಟಿಯ ಒಡೆಯ , ಅನಿವಾಸಿ ಉದ್ಯಮಿಯೋರ್ವರು ಅನಾಥವಾಗಿ ಮತ್ತು ಅಜ್ಞಾತ ಶವವಾಗಿ ಹೋದದ್ದು ಹಲವರು ಅನುಮಾನಗಳನ್ನು ಹುಟ್ಟುಹಾಕಿದ್ದು ಪೊಲೀಸರ ನಿಷ್ಪಕ್ಷ ತನಿಖೆಯಿಂದ ಮಾತ್ರ ಸ್ಪಷ್ಟ ಚಿತ್ರಣ ದೊರಕುವ ಸಾಧ್ಯತೆಗಳಿವೆ.