LATEST NEWS
ಮಂಗಳೂರು – ಮೂರು ತಿಂಗಳಿಗೆ ನೀರಿನ ಸಮಸ್ಯೆ ಇಲ್ಲ – ಮೇಯರ್ ಸುಧೀರ್‌ಶೆಟ್ಟಿ ಕಣ್ಣೂರು
ಮಂಗಳೂರು ಫೆಬ್ರವರಿ 29: ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ಅಣೆಕಟ್ಟಿನಲ್ಲಿ 6 ಮೀ. ನೀರಿನ ಸಂಗ್ರಹವಿದ್ದು, ನೀರಿನ ಕೊರತೆ ಇಲ್ಲ ಎಂದು ಮೇಯರ್ ಸುಧೀರ್‌ಶೆಟ್ಟಿ ಕಣ್ಣೂರು ತಿಳಿಸಿದ್ದಾರೆ.
ಪ್ರಸ್ತುತ ತುಂಬೆ ವೆಂಟೆಡ್ ಡ್ಯಾಂನಲ್ಲಿ ಮೂರು ತಿಂಗಳಿಗೆ ಸಾಕಾಗುವಷ್ಟು ನೀರಿದೆ. ಡ್ಯಾಂಗೆ ಸ್ವಲ್ಪ ಪ್ರಮಾಣದ ಒಳಹರಿವು ಇನ್ನೂ ಇದೆ. 6 ಮೀಟರ್ ಎತ್ತರದಲ್ಲಿ ನೀರಿನ ಮಟ್ಟವನ್ನು ಕಾಯ್ದುಕೊಳ್ಳಲಾಗುವುದು. ಅದಕ್ಕಾಗಿ ಅಣೆಕಟ್ಟಿನ ಕೆಳಭಾಗದ ನದಿಯಲ್ಲಿ ಲಭ್ಯವಿರುವ ನೀರನ್ನು ತುಂಬೆ ಡ್ಯಾಂಗೆ ಪಂಪ್ ಮಾಡಲು ಅಣೆಕಟ್ಟಿನ ಇನ್ನೊಂದು ಬದಿಯಲ್ಲಿ ಎರಡು ಪಂಪ್ ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ಸುಧೀರ್‌ಶೆಟ್ಟಿ ತಿಳಿಸಿದ್ದಾರೆ.
ನಗರದ ಹೊರವಲಯದಲ್ಲಿರುವ ಬೃಹತ್ ಕೈಗಾರಿಕೆಗಳಿಗೆ ಎಎಂಆರ್ ಡ್ಯಾಂನಿಂದ ನೀರು ಪೂರೈಕೆ ಆಗುತ್ತಿದ್ದು, ಕುಡಿಯುವ ನೀರಿಗೆ ಆದ್ಯತೆಯ ಹಿನ್ನೆಲೆಯಲ್ಲಿ ಕೈಗಾರಿಕೆಗಳಿಗೆ ರೇಶನಿಂಗ್ ವ್ಯವಸ್ಥೆ ಇನ್ನು ಕೆಲವು ದಿನಗಳಲ್ಲಿ ಆರಂಭಿಸುವ ಸಾಧ್ಯತೆಗಳಿವೆ. ಈ ಬಗ್ಗೆ ಇನ್ನೂ ಯಾವುದೇ ಆದೇಶ ಮಾಡಲಾಗಿಲ್ಲ ಎಂದರು.