DAKSHINA KANNADA
ಮಂಗಳೂರು: ಅಕಾಲಿಕ ಮಳೆಗೆ ಹಲವೆಡೆ ಹಾನಿ
ಮಂಗಳೂರು, ಮಾರ್ಚ್ 30: ನಗರದಲ್ಲಿ ನಿನ್ನೆ ರಾತ್ರಿ ಸುರಿದ ಅಕಾಲಿಕ ಮಳೆಗೆ ಹಲವೆಡೆ ಹಾನಿ ಉಂಟಾಗಿದೆ. ಸುಮಾರು 9.30ಯಿಂದ ಅರ್ಧ ಗಂಟೆಗಳ ಕಾಲ ಸುರಿದ ಗಾಳಿ, ಗುಡುಗು-ಸಿಡಿಲು ಸಹಿತ ಸುರಿದ ಮಳೆಗೆ ಹಲವೆಡೆ ಹಾನಿಯಾಗಿದೆ.
ನಗರದ ಮಂಗಳಾದೇವಿ ಸಮೀಪದ ಮುಳಿಹಿತ್ಲು ಎಂಬಲ್ಲಿ ವಿದ್ಯುತ್ ಕಂಬ ನಿಂತಿರುವ ಎರಡು ಕಾರುಗಳ ಮೇಲೆಯೇ ಬಿದ್ದ ಪರಿಣಾಮ ಕಾರುಗಳು ಜಖಂಗೊಂಡಿವೆ.
ಬೊಂಡಂತಿಲ ಗ್ರಾಮದ ವಿಜಯಕುಮಾರ್ ಆಳ್ವ ಅವರ ದನದ ಕೊಟ್ಟಿಗೆಯ ಮೇಲೆ ತೆಂಗಿನ ಮರ ಬಿದ್ದು, ಹಟ್ಟಿ ಜಖಂಗೊಂಡಿದೆ. ಅಲ್ಲದೆ ನಗರದ ಕೋಡಿಕಲ್ನಲ್ಲಿಯೂ ಮನೆಯ ಮೇಲೆ ತೆಂಗಿನ ಮರ ಬಿದ್ದು ಒಂದು ಭಾಗ ಸಂಪೂರ್ಣ ಹಾನಿಯಾಗಿದೆ.
ಕೇವಲ ಅರ್ಧ ಗಂಟೆ ಧಾರಾಕಾರವಾಗಿ ಸುರಿದ ಮಳೆಯು ಜನರನ್ನು ಬೆಚ್ಚಿ ಬೀಳಿಸಿದ್ದು, ಸುಮಾರಷ್ಟು ಹಾನಿ ಆಗಿದೆ. ಅಲ್ಲದೆ ವಿದ್ಯುತ್ ಕೂಡ ಕೈಕೊಟ್ಟಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ಕರಾವಳಿ ಜಿಲ್ಲೆಗಳನ್ನು ಸೇರಿದಂತೆ ರಾಜ್ಯದ ಕೆಲವು ಭಾಗಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.