DAKSHINA KANNADA
ಆರ್ಥಿಕ ಸಂಕಷ್ಟದಲ್ಲಿ ನಲುಗುತ್ತಿದೆ ಮಂಗಳೂರು ವಿಶ್ವವಿದ್ಯಾಲಯ, ಬೇಕಿದೆ ಸರ್ಕಾರದ ನೆರವಿನ ಹಸ್ತ..!
ಮಂಗಳೂರು: ರಾಷ್ಟ್ರ ಮಟ್ಟದಲ್ಲಿ ಹೆಸರು ಪಡೆದಿದ್ದ ಮಂಗಳೂರು ವಿಶ್ವವಿದ್ಯಾಲಯವು ಆರ್ಥಿಕ ಸಮಸ್ಯೆಯಿಂದ ನಲುಗುತ್ತಿದೆ. ಉಪನ್ಯಾಸಕರ, ಸಿಬ್ಬಂದಿಯ ವೇತನ, ನಿರ್ವಹಣೆಯೇ ವಿವಿಗೆ ದೊಡ್ಡ ಸಮಸ್ಯೆಯಾಗಿದ್ದು ಇಲ್ಲಿ ಉನ್ನತ ವ್ಯಾಸಾಂಗ ಮಾಡಲು ಬಂದಿದ್ದ ನೂರಾರು ವಿದ್ಯಾರ್ಥಿಗಳ ಭವಿಷ್ಯವೂ ಅಡಕೆಕತ್ತರಿಯಲ್ಲಿದೆ.
ಉಪನ್ಯಾಸಕರು, ಸಿಬ್ಬಂದಿಗೆ ಮೂರು ನಾಲ್ಕು ತಿಂಗಳಿಗೊಮ್ಮೆ ವೇತನ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೊರೊನಾ ಬಳಿಕ ಸರ್ಕಾರದಿಂದಬರುತ್ತಿದ್ದ ಅನುದಾನ ಸ್ಥಗಿತಗೊಂಡಿದೆ. ಮಂಗಳೂರು ವಿವಿಗೊಳಪಟ್ಟಿದ್ದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದ ಪ್ರಮುಖ ಶಿಕ್ಷಣ ಸಂಸ್ಥೆಗಳು ಅಟೋನೋಮಸ್ ಆಗಿರುವುದರಿಂದ,ವಿದ್ಯಾರ್ಥಿಗಳ ಶುಲ್ಕದಿಂದ ಬರುವ ಆದಾಯವು ಬಾರದಂತಾಗಿದೆ. ಮಂಗಳೂರು ವಿಶ್ವವಿದ್ಯಾಲಯವು ತನ್ನ ಆಂತರಿಕ ಸಂಪತ್ತಿನ ಕ್ರೋಢೀಕರಣ ಶಕ್ತಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ. ಮಂಗಳೂರು ವಿವಿಯಲ್ಲೇ ಉನ್ನತ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಇದರ ಬಿಸಿ ತಟ್ಟಿದೆ. ಅಲ್ಲಿನ ವಿಜ್ಞಾನ ವಿಭಾಗದ ಲ್ಯಾಬೋರೆಟರಿಗಳಲ್ಲಿ ಪ್ರಯೋಗ ನಡೆಸಲು ಬೇಕಾದ ಸಂಪನ್ಮೂಲ ಪದಾರ್ಥಗಳೆ ಇಲ್ಲದಾಗಿದೆ. ಇದ್ದರೂ ಯಾವುದೋ ಹಳೇ ಕಾಲದ ಔಟ್ ಡೇಟಡ್ ರಾಸಾಯನಿಕ, ದ್ರಾವಣಗಳಿಂದ ಪ್ರಯೋಗಗಳನ್ನು ಮಾಡಬೇಕಾದ ಅನಿವಾರ್ರಯೆ ಉಂಟಾಗಿದ್ದು, ಈ ಬಗ್ಗೆ ಮನವಿ ಸಲ್ಲಿಸಿದ್ದರೂ ವಿವಿ ಆಡಳಿತ ಸ್ಪಂದಿಸುತ್ತಿಲ್ಲ, ಮಂಗಳೂರು ವಿವಿಗೆ ಬಂದು ನಾವು ತಪ್ಪು ಮಾಡಿದೆವು ಎಂದು ದೂರದಿಂದ ದುಬಾರಿ ಫೀಸು ನೀಡಿ ಬಂದ ವಿದ್ಯಾರ್ಥಿಗಳು ಅಲವತ್ತು ತೋಡಿಕೊಂಡಿದ್ದಾರೆ. ಮಂಗಳೂರು ವಿವಿಯಲ್ಲಿದ್ದ ಕೊಡಗಿನ ಕಾಲೇಜುಗಳು ಕೊಡಗು ವಿಶ್ವವಿದ್ಯಾನಿಲಯ ಸ್ಥಾಪನೆಯಾದ ಬಳಿಕ ಅಲ್ಲಿಗೆ ಹೋಗಿವೆ. ಜಿಲ್ಲೆಯಲ್ಲಿ ಪ್ರಮುಖವಾಗಿದ್ದ ಮೂಡಬಿದ್ರೆಯ ಆಳ್ವಾಸ್, ಪುತ್ತೂರಿನ ಫಿಲೋಮಿನಾ, ವಿವೇಕಾನಂದ ಕಾಲೇಜುಗಳು ಸ್ವಾಯತ್ತ ಕಾಲೇಜುಗಳಾಗಿರುವುದರಿಂದ ಅವುಗಳಿಂದ ಬರುತ್ತಿದ್ದ ಶುಲ್ಕ ಇಲ್ಲವಾಗಿದೆ. ಈ ಎಲ್ಲಾ ಸಮಸ್ಯೆಗಳಿಂದ ಮಂಗಳೂರು ವಿಶ್ವವಿದ್ಯಾನಿಲಯದ ಗತ ವೈಭವ ಮರೆಯಾಗಿದ್ದು, ಖರ್ಚಿಗೆ ದುಡ್ಡಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ವಿವಿಗೆ ಆದಾಯ ನೀಡುತ್ತಿದ್ದ ದೂರ ಶಿಕ್ಷಣ ಕೇಂದ್ರವನ್ನು ಸರ್ಕಾರದ ಆದೇಶದ ಮೇರೆಗೆ ಮುಚ್ಚಲಾಗಿದೆ. ಮಂಗಳೂರು ವಿವಿಯ ಆಂತರಿಕ ಸಂಪನ್ಮೂಲ ಕಾಲೇಜುಗಳ ಶುಲ್ಕ, ವಿವಿಧ ಸರ್ಟಿಫಿಕೇಟ್ಗಳಿಂದ ಬರುವ ಮೊತ್ತಕ್ಕೆ ಸೀಮಿತಗೊಂಡಿದೆ. ಯುಜಿಸಿ ಪ್ರಾಜೆಕ್ಟ್ಗಳು, ಕೈಗಾರಿಕೆಗಳಿಂದ ದೊರೆಯುತ್ತಿದ್ದ ಆದಾಯವೂ ಕಡಿಮೆ ಆಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಅನುದಾನ ಒದಗಿಸ ಬೇಕಾದ ಅಗತ್ಯವಿದೆ. ಇಲ್ಲದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಮಂಗಳೂರು ವಿವಿ ಕೂಡ ಇಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ವಿಲೀನಗೊಂಡಂತೆ ವಿಲೀನಗೊಳ್ಳಬಹುದು ಅಥವಾ ಶಾಶ್ವತವಾಗಿ ಬಾಗಿಲು ಹಾಕಬೇಕಾಗಬಹುದು. .
ಈ ಬಗ್ಗೆ ಪ್ರತಿಕ್ರೀಯಿಸಿರುವ ವಿವಿ ಕುಲಪತಿ ಪ್ರೊ. ಪಿ . ಎಲ್ . ಧರ್ಮ ಅವರು ಈ ಎಲ್ಲಾ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ ಎಂದಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಗೊಳಪಡುವ ಐದು ಘಟಕ ಕಾಲೇಜುಗಳು ಕಾರ್ಯ ನಿರ್ವಹಿಸಲು ಕಳೆದ ನಾಲ್ಕು ವರ್ಷಗಳಿಂದ ಅನುಮತಿ ದೊರಕಿಲ್ಲ. ಜತೆಗೆ ಆರ್ಥಿಕ ಸಮಸ್ಯೆಯನ್ನೂ ಎದುರಿಸುತ್ತಿರುವುದರಿಂದ ಅವುಗಳ ನಿರ್ವಹಣೆ ಕಷ್ಟ ಸಾಧ್ಯವಾಗಿದೆ. ಈ ಬಗ್ಗೆ ಉನ್ನತ ಶಿಕ್ಷಣ ಸಚಿವರು, ಸ್ಥಳೀಯ ಶಾಸಕರೂ , ಸ್ಪೀಕರ್ ಆಗಿರುವ ಯು ಟಿ. ಖಾದರ್ ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ರಾಜ್ಯಪಾಲರಿಗೂ ಪತ್ರದ ಮೂಲಕ ತಿಳಿಸಲಾಗಿದೆ ಎಂದಿದ್ದಾರೆ.