LATEST NEWS
ಇಂದಿನಿಂದ ಕಾರವಾರ ಮಂಗಳೂರು- ಬೆಂಗಳೂರು ರೈಲು ಸಂಚಾರ ಆರಂಭ
ಮಂಗಳೂರು : ಕೊರೊನಾ ಹಿನ್ನಲೆ ಸಂಚಾರ ನಿಲ್ಲಿಸಲಾಗಿದ್ದ ಕಾರವಾರ- ಬೆಂಗಳೂರು ಹಾಗೂ ಮಂಗಳೂರು- ಬೆಂಗಳೂರು ನಡುವಿನ ರೈಲುಗಳ ಸಂಚಾರವು ಇಂದಿನಿಂದ ಆರಂಭವಾಗಲಿದೆ.
ರೈಲು ನಂ.06585 ಯಶವಂತಪುರ- ಕಾರವಾರ ಹಾಗೂ 06586 ಕಾರವಾರ-ಯಶವಂತಪುರ ರೈಲು ಸೆಪ್ಟೆಂಬರ್ 5 ರಿಂದ ಕಾರ್ಯಾರಂಭಿಸಲಿದೆ. ಹಿಂದೆ ಸಂಚರಿಸುತ್ತಿದ್ದ ನಂಬರ್ 16595/16596 ರೈಲುಗಳದ್ದೇ ವೇಳಾಪಟ್ಟಿಯಲ್ಲೇ ಸಂಚರಿಸಲಿವೆ. ಇಂದು ಸಂಜೆ 6.45ಕ್ಕೆ ಯಶವಂತಪುರದಿಂದ ಹೊರಡುವ ರೈಲು ಕಾರವಾರಕ್ಕೆ ಮರುದಿನ ಬೆಳಗ್ಗೆ 8.25ಕ್ಕೆ ತಲುಪಲಿದೆ. ಸೆಪ್ಟೆಂಬರ್ 5 ರಂದು ಸಂಜೆ 6ಕ್ಕೆ ಕಾರವಾರದಿಂದ ರೈಲು ಹೊರಡಲಿದೆ ಎಂದು ಕೊಂಕಣ ರೈಲ್ವೇ ಪ್ರಕಟಣೆ ತಿಳಿಸಿದೆ. ಈ ರೈಲುಗಳಲ್ಲಿ 7 ಸ್ಲೀಪರ್, ಒಂದು 3 ಟೈರ್ ಎ.ಸಿ, ಒಂದು 2 ಟೈರ್ ಎ.ಸಿ, 4 ಸಾಮಾನ್ಯ ಸಹಿತ 15 ಬೋಗಿಗಳು ಇರಲಿವೆ. ರೈಲುಗಳಿಗೆ ಸ್ಟೇಷನ್‌ನಲ್ಲಿ ಟಿಕೆಟ್ ನೀಡಲಾಗುವುದಿಲ್ಲ. ಪೂರ್ವ ಕಾಯ್ದಿರಿಸಿದ ಟಿಕೆಟ್‌ನಲ್ಲೇ ಪ್ರಯಾಣಿಸಬೇಕಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಬೆಂಗಳೂರು-ಮಂಗಳೂರು ರೈಲು
ನಂಬರ್ 06515 ಬೆಂಗಳೂರು ಸಿಟಿ ಮಂಗಳೂರು (ವಾರದಲ್ಲಿ ನಾಲ್ಕುದಿನ) ರೈಲು ಸೆ.4ರಿಂದ ಮುಂದಿನ ಸೂಚನೆವರೆಗೆ ಹಾಗೂ ನಂಬರ್ 06516 ಮಂಗಳೂರು-ಬೆಂಗಳೂರು ಸಿಟಿ (ವಾರದಲ್ಲಿ ನಾಲ್ಕುದಿನ) ರೈಲು ಸೆ.6ರಿಂದ ಮುಂದಿನ ಸೂಚನೆ ವರೆಗೂ ಸಂಚರಿಸಲಿವೆ. ಇವುಗಳಿಗೆ ನಂ.16511/16512 ರೈಲುಗಳ ನಿಲುಗಡೆ ಅನ್ವಯವಾಗಲಿದೆ.
ನಂ.06517 ಬೆಂಗಳೂರು-ಮಂಗಳೂರು (ವಾರದಲ್ಲಿ ಮೂರುದಿನ) ರೈಲು ಸೆ.6ರಿಂದ ಹಾಗೂ ನಂ.06518 ಮಂಗಳೂರು-ಬೆಂಗಳೂರು (ವಾರದಲ್ಲಿ ಮೂರುದಿನ) ಸೆ.5ರಂದು ಸಂಚಾರ ಆರಂಭಿಸಲಿದೆ. ಈ ರೈಲುಗಳಿಗೆ ನಂ.16517/16518ರ ನಿಲುಗಡೆಯೇ ಅನ್ವಯವಾಗಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.