ಮಂಗಳೂರು ಅಗಸ್ಟ್ 09- ಮಳೆಗಾಲ ಆರಂಭವಾದರೆ ಸಾಕು ಪಶ್ಚಿಮ ಕರಾವಳಿಯಲ್ಲಿರುವ ಅರಬ್ಬಿ ಸಮುದ್ರ ಆರ್ಭಟಿಸಲು ಪ್ರಾರಂಭಿಸುತ್ತದೆ. ಕಡಲು ತನ್ನ ಒಡಲಿನಲ್ಲಿರುವ ರೋಷವನ್ನೆಲ್ಲಾ ಹೊರಗೆ ಹಾಕುವಂತೆ ತೀರಕ್ಕೆ ಅಪ್ಪಳಿಸುತ್ತಿರುತ್ತದೆ.

ಇಂತಹ ರೌದ್ರಾವತಾರ ತಾಳಿರುವ ಸಮುದ್ರ ರಾಜನನ್ನು ಮಣಿಸುವುದು ಸುಲಭದ ಮಾತಲ್ಲ. ಇದೇ ಕಡಲನ್ನು ನಂಬಿ ಬದುಕುವ ಲಕ್ಷಾಂತರ ಮಂದಿ ಕರಾವಳಿ ಮೀನುಗಾರರು ಸಮುದ್ರಕ್ಕೆ ನಮನ ಸಲ್ಲಿಸುತ್ತಾರೆ.
ಎರಡು ತಿಂಗಳ ಮೀನುಗಾರಿಕೆ (Fishing) ನಿಷೇಧದ ಬಳಿಕ ಮತ್ತೆ ಸಮುದ್ರಕ್ಕೆ (Sea) ಇಳಿಯಲು ಕಡಲ ಮಕ್ಕಳು ಸನ್ನದ್ಧರಾಗಿದ್ದಾರೆ. ಪ್ರತಿಕ್ಷಣವು ಕಡಲಿನ ಅಲೆಯ ನಡುವೆ ಗುದ್ದಾಡಿ ಮೀನುಗಾರಿಕೆ ನಡೆಸುವ ಮೀನುಗಾರರು ಯಾವುದೇ ಅಪಾಯ ಎದುರಾಗದಿರಲಿ ಎಂದು ಸಮುದ್ರ ರಾಜನಿಗೆ ಶನಿವಾರ ಪೂಜೆ ಸಲ್ಲಿಸಿದರು. ಕಡಲ ಮಕ್ಕಳು ಅಪ್ರತಿಮ ಸಾಹಸಿಗಳು, ಬೋಟ್ಗಳಲ್ಲಿ ಬಲೆಗಳನ್ನು ತುಂಬಿಕೊಂಡು ಕಡಲಿಗೆ ಇಳಿದರೆ 15 ದಿನ ಸಮುದ್ರ ಬಿಟ್ಟು ದಡಕ್ಕೆ ಬರುವುದಿಲ್ಲ.

ಮಳೆಗಾಲ ದಲ್ಲಿ ರೌದ್ರಾವತಾರ ತಾಳುವ ಸಮುದ್ರ ರಾಜನನ್ನು ತಣಿಸಲು ಸಾವೀರಾರು ಕುಟುಂಬಗಳು ಇಂದಿನ ದಿನ ಸಮುದ್ರ ರಾಜನ ಒಡಲನ್ನು ತಣಿಸಲು ಹಾಲು,ತೆಂಗಿನ ಕಾಯಿಯನ್ನು ಅರ್ಪಿಸುತ್ತಾರೆ. ಮೀನುಗಾರಿಕಾ ಋತು ಆರಂಭವಾಗುವ ಮೊದವು ಸಮುದ್ರರಾಜನಿಗೆ ಸಲ್ಲಿಸುವ ಈ ಪೂಜೆಯಲ್ಲಿ ಕಡಲಲ್ಲಿ ಮತ್ಸ್ಯ ಸಂಪತನ್ನು ಹೆಚ್ಚಿಸು ಎಂದು ಪ್ರಾರ್ಥಿಸುತ್ತಾರೆ.

ಸಮುದ್ರಕ್ಕೆ ಮಳೆಗಾಲದಲ್ಲಿ ರೋಷ ಉಕ್ಕೇರುತ್ತದೆ. ಅನೇಕ ಸಲ ಮೀನುಗಾರರನ್ನು ಬಲಿತೆಗೆದುಕೊಳ್ಳುವುದು ಇದೆ. ಮತ್ತು ಮತ್ಸ್ಯಕ್ಷಾಮ ಉಂಟು ಮಾಡಿ ಸಾವಿರಾರು ಕುಟುಂಬಗಳಲ್ಲಿ ಕಣ್ಣಿರು ಹಾಕುವಂತೆ ಮಾಡುತ್ತದೆ. ಈ ಎಲ್ಲಾ ಕಾರಣಗಳಿಗಾಗಿ ಸಮುದ್ರದ ಒಡಲು ತಂಪಾಗಿರಲಿ ಎಂದು ವಿಶೇಷ ಪೂಜೆ, ಹವನಗಳನ್ನು ಸಮುದ್ರ ತೀರದಲ್ಲಿ ಮಾಡಿ ಊರಿನ ಸಮಸ್ತರೊಂದಿಗೆ ಕಡಲಿಗೆ ಹಾಲಿನ ಅಭಿಷೇಕವನ್ನು ಮಾಡುತ್ತಾರೆ. ಎಳನೀರಿನ ಧಾರೆ ಎರೆಯಲಾಗುತ್ತದೆ ಮತ್ತು ಸಾವಿರಾರು ತೆಂಗಿನ ಕಾಯಿಗಳನ್ನು ಕಡಲಿನ ಒಡಲಿಗೆ ತುಂಬಿ ಮೀನುಗಾರಿಕೆಗೆ ಸಮುದ್ರಕ್ಕೆ ತೆರಳುವ ತಮ್ಮ ಕುಟು0ಬದ ಸದಸ್ಯರ ರಕ್ಷಣೆ ಹಾಗೂ ಅಗಾಧ ಪ್ರಮಾಣದಲ್ಲಿ ಮತ್ಸ್ಯ ಸಂಪತ್ತು ನೀಡಬೇಕೆಂದು ಪ್ರಾರ್ಥಿಸುತ್ತಾರೆ.
ಕಡಲಿನಲ್ಲಿ ಮೀನುಗಾರಿಕೆ ವೇಳೆ ನೂರೆಂಟು ಅಪಾಯಗಳು ಎದರುಗಾತ್ತವೆ. ಯಾವುದೇ ಅನಾಹುತ ಆಗದೆ ಉತ್ತಮ ಮೀನುಗಾರಿಕೆ ಆಗಲಿ ಅಂತ ಸಮುದ್ರ ರಾಜನಲ್ಲಿ ಪ್ರಾರ್ಥಿಸಲಾಯಿತು. ಇಂದಿನಿಂದ ಕಡಲು ಮಕ್ಕಳು ಆಳಸಮುದ್ರದಲ್ಲಿ ಮತ್ಸ್ಯ ಬೇಟೆಗೆ ಇಳಿದಿದ್ದಾರೆ.