Connect with us

DAKSHINA KANNADA

ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರ ಕನಸು ನನಸು : ದಶಕಗಳ ಬಳಿಕ ಸಿಕ್ತು ಸ್ವಂತ ಕಟ್ಟಡ..!

ಮಂಗಳೂರು : ದಶಕಗಳ ಬಳಿಕ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರ ಕನಸು ನನಸಾಗುತ್ತಿದೆ. ಇದುವರೆಗೆ ಬಾಡಿಗೆ ಕಟ್ಟಡಗಳಲ್ಲೇ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸ್ ಠಾಣೆ ಇದೀಗ ಸ್ವಂತ ಕಟ್ಟಡಕ್ಕೆ ಸ್ಥಳಾಂತರವಾಗುತ್ತಿದೆ.

ಮಂಗಳೂರು ಹೊರವಲಯದ ವಾಮಾಂಜೂರಿನಲ್ಲಿ ಸುಸಜ್ಜಿತ ಸ್ವಂತ ಕಟ್ಟಡ ನಿರ್ಮಾಣಗೊಂಡಿದ್ದು. ಇದೇ ಅಕ್ಟೋಬರ್ 29 ರಂದು ಭಾನುವಾರದಂದು ನೂತನ ಪೊಲೀಸ್ ಠಾಣಾ ಕಟ್ಟಡ ಲೋಕಾರ್ಪಣೆಗೊಳ್ಳಲಿದೆ, ರಾಜ್ಯ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್, ಜಿಲ್ಲಾ ಉಸ್ತುವರಿ ಸಚಿವರಾದ ದಿನೇಶ್ ಗುಂಡೂರಾವ್, ವಿಧಾನ ಸಭಾ ಸಭಾಪತಿ ಯು ಟಿ ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಡಾ,ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವೇದವ್ಯಾಸ್ ಕಾಮತ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ಡಾ. ಅಲೋಕ್ ಮೋಹನ್, ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಪಶ್ಚಿಮ ವಲಯ ಐಜಿಪಿ ಡಾ, ಚಂದ್ರಗುಪ್ತಾ ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ , ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗ್ರವಾಲ್ ಸಹಿತ ಅನೇಕ ಹಿರಿಯ ಕಿರಿಯ ಅಧಿಕಾರಿ ವರ್ಗ ಸೇರಿದಂತೆ ಗಣ್ಯಾತಿ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ನಾಲ್ಕು ದಶಕಗಳ ಹಿಂದೆ ನಗರದ ಕಂಕನಾಡಿ ಪ್ರದೇಶದಲ್ಲಿ ಕಂಕನಾಡಿ ಠಾಣೆ ಎಂದೇ ಜನಜನಿತವಾಗಿದ್ದ ಪೊಲೀಸ್ ಠಾಣೆ ಬಾಡಿಗೆ ಕಟ್ಟಡಲ್ಲೇ ಇದ್ದು ಬಳಿಕ ಮಂಗಳೂರು ಗ್ರಾಮಾಂತರ ಠಾಣೆಯಾಗಿ ಕುಲಶೇಖರ ಕೈಕಂಬದ ಬಳಿಯ ಸ್ವಂತ ಕಟ್ಟಡಕ್ಕೆ 1986 ರಲ್ಲಿ ಶಿಫ್ಟ್ ಆಯಿತು. ಬಳಿಕ ಹೆದ್ದಾರಿ ಚತುಷ್ಪತ ಕಾಮಗಾರಿಗಾಗಿ ಆ ಕಟ್ಟಡವನ್ನು ಕೆಡವಲಾಯಿತು. ಅಲ್ಲಿಯೇ ಸಮೀಪದ ಮರೋಳಿ ಅಕ್ಕಿ ಗಿರಾಣಿ ಮಿಲ್‌ನಲ್ಲಿ 2011 ರಲ್ಲಿ ತಾತ್ಕಾಲಿಕವಾಗಿ ಠಾಣೆ ಸ್ಥಳಾಂತರ ಮಾಡಲಾಯಿತಾದ್ರೂ ಸೋರುತ್ತಿರುವ, ಭದ್ರತೆಯೇ ಇಲ್ಲದ ತೀರಾ ನಾದುರಸ್ಥಿಯಲ್ಲಿದ್ದ ಆ ಕಟ್ಟಡ ಬಗ್ಗೆ ಅನೇಕ ಟೀಕೆಗಳು ಸಹಜವಾಗಿಯೇ ಬಂದುವು. ಈ ಮಧ್ಯೆ ಅಲ್ಲಿ ಸನಿಹದಲ್ಲೇ ಹೊಸ ಕಟ್ಟಡ ನಿರ್ಮಾಣ ಮಾಡಲು ಕಾಮಗಾರಿ ಆರಂಭಿಸಿದ್ದರೂ ಸ್ಥಳದ ಕೊರತೆಯಿಂದ ಅದನ್ನು ಅರ್ಧದಲ್ಲೇ ಬಿಟ್ಟು ಮತ್ತೆ ವಾಮಾಂಜೂರಿನ ಬಾಡಿಗೆ ಕಟ್ಟಡಕ್ಕೆ 2017ರಲ್ಲಿ ಠಾಣೆ ಸ್ಥಳಾಂತರವಾಯಿತು, ಈ ಸಂದರ್ಭ ಜನಸಂಖ್ಯೆ ವಿಸ್ತೀರ್ಣ ಮತ್ತು ಅಪರಾಧ ಹೆಚ್ಚಳದಿಂದ ನಿರ್ವಹಣೆ ಕಷ್ಟವಾದ ಕಾರಣಕ್ಕೆ ಅತೀ ದೊಡ್ಡ ಮಂಗಳೂರು ಗ್ರಾಮಾಂತರ ಠಾಣೆಯನ್ನು ವಿಭಜಿಸಿ ಅಳಪೆ, ಮರೋಳಿ, ಕಂಕನಾಡಿ, ಜೆಪ್ಪಿನಮೊಗರು, ಬಜಾಲ್, ಕಣ್ಣೂರು, ಆಡಂಕುದ್ರೂರು, ಆಡಂಕುದ್ರು ಒಳಗೊಂಡ ಕಂಕನಾಡಿ ನಗರ ಠಾಣೆಯನ್ನಾಗಿ ಮಾಡಿದ್ರೆ ಪಚ್ಚನಾಡಿ, ಉಳಾಯಿಬೆಟ್ಟು, ಮಲ್ಲೂರು, ಬೊಂಡಂತಿಲ, ನೀರುಮಾರ್ಗ, ಅಡ್ಯಾರ್, ಅರ್ಕುಳ, ಕುಡುಪು ಮತ್ತು ತಿರುವೈಲ್ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲೇ ಉಳಿಸಿಕೊಂಡರು. ಇದೀಗ ವಾಮಂಜೂರು ಪಿಲಿಕುಳ ಸಮೀಪ ನೂತನ ಸುಸಜ್ಜಿತ ಭವ್ಯವಾದ ಸ್ವಂತ ಕಟ್ಟಡ ತಲೆ ಎತ್ತಿ ನಿಂತಿದೆ. ದಶಕಗಳ ಬಳಿಕ ಮಂಗಳೂರು ಗ್ರಾಮಾಂತರ ಠಾಣೆ ಸ್ವಂತ ಕಾಲಲ್ಲಿ ನಿಂತಿದೆ. ಆದ್ದರಿಂದ ಹೊಸ ಸ್ವಂತ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ ಸಿಬಂದಿ ವರ್ಗ ಯಾರ ಹಂಗು, ಮುಲಾಜಿಲ್ಲದೇ ನಿಸ್ಸಂಕೋಚದಿಂದ ಕರ್ತವ್ಯ ನಿರ್ವಹಿಸಬಹುದಾಗಿದೆ.

Share Information
Advertisement
Click to comment

You must be logged in to post a comment Login

Leave a Reply