DAKSHINA KANNADA
ಮಂಗಳೂರು: ಖಾಸಗಿ ಬಸ್ ಗಳ ಮೇಲೆ ಕಲ್ಲು ತೂರಾಟ, ಖಾಸಗಿ ಬಸ್ ಸಂಚಾರ ಸ್ಥಗಿತ

ಮಂಗಳೂರು, ಮೇ 02: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಬಂದ್ಗೆ ಕರೆ ನೀಡಿದೆ. ಶುಕ್ರವಾರ ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೂ ದಕ್ಷಿಣ ಕನ್ನಡ ಜಿಲ್ಲೆ ಬಂದ್ಗೆ ಕರೆ ನೀಡಲಾಗಿದ್ದು ಹೋಟೆಲ್, ಅಂಗಡಿ ಮುಂಗಟ್ಟುಗಳು ಬಂದ್ ಆಗಿದೆ. ಬೆಂಗಳೂರಿನಿಂದ ಬಂದ ನಾಲ್ಕು ಬಸ್‌ಗಳಿಗೆ ಕಿಡಿಗೇಡಿಗಳು ನಸುಕಿನಲ್ಲಿ ಕಲ್ಲೆಸೆದಿದ್ದಾರೆ. ಇದರ ಬೆನ್ನಲ್ಲೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಿದೆ.
ಪಂಪ್‌ವೆಲ್ ಬಳಿ ನಾಲ್ಕು ಬಸ್‌ಗಳಿಗೆ ಕಲ್ಲು ತೂರಾಟ ನಡೆಸಲಾಗಿದೆ. ಪ್ರಯಾಣಿಕರಿಗೆ ತೊಂದರೆಯಾಗಿಲ್ಲ, ಬಸ್‌ಗಳ ಗಾಜು ಒಡೆದಿವೆ. ಹಾಗಾಗಿ ಬಸ್ ಸಂಚಾರ ಸ್ಥಗಿತಗೊಳಿಸಿದ್ದೇವೆ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ವಿಭಾಗೀಯ ನಿಯಂತ್ರಕ ರಾಜೇಶ್ ಶೆಟ್ಟಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಶುಕ್ರವಾರ ನಗರದ ಯೂನಿವರ್ಸಿಟಿ ಕಾಲೇಜ್ ಬಳಿ ಖಾಸಗಿ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆದಿದೆ. ನಗರದ ಖಾಸಗಿ ಬಸ್ ಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ್ದು, ಮೂರು ಬಸ್ ಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಇಂದು ಮುಂಜಾನೆ ಚಲಿಸುತ್ತಿದ್ದ ಬಸ್ ಗೆ ದುಷ್ಕರ್ಮಿಗಳ ತಂಡ ಕಲ್ಲು ತೂರಿದ್ದು, ಈ ಹಿನ್ನೆಲೆ ನಗರದಲ್ಲಿ ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿದೆ.

ಉಡುಪಿಯಿಂದ ಹೊರಟಿದ್ದ ಎರಡು ಖಾಸಗಿ ಬಸ್ ಗಳಿಗೆ ಮಂಗಳೂರಿನಲ್ಲಿ ಕಲ್ಲು ತೂರಾಟ ನಡೆಸಿರುವ ಹಿನ್ನೆಲೆ ಉಡುಪಿಯಿಂದ ಮಂಗಳೂರು ಕಡೆಗೆ ಸಂಚರಿಸುವ ಸ್ಥಗಿತಗೊಳಿಸಲಾಗಿದೆ. ಏಕಾಏಕಿ ಬಸ್ ಸಂಚಾರ ಸ್ಥಗಿತಗೊಂಡ ಪರಿಣಾಮ ಸಾರ್ವಜನಿಕರು ಪರದಾಡುತ್ತಿರುವ ಸ್ಥಿತಿ ಕಂಡು ಬಂದಿದೆ.
ಪಿ.ಯು. ಗಣಿತ ಪರೀಕ್ಷೆ- 2 ಶುಕ್ರವಾರ ನಿಗದಿಯಾಗಿತ್ತು. ಪರೀಕ್ಷಾ ಕೇಂದ್ರಗಳಿಗೆ ತಲುಪಲು ಸಾಧ್ಯವಾಗದೇ ವಿದ್ಯಾರ್ಥಿಗಳು ಸಮಸ್ಯೆ ಎದುರಿಸಿದರು. ಬಹುತೇಕ ಅಂಗಡಿಗಳು ಮುಚ್ಚಿದ್ದು ನಗರದಲ್ಲಿ ಜನಸಂಚಾರ ವಿರಳವಾಗಿದೆ. ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿವೆ.