LATEST NEWS
ಮಂಗಳೂರಿನಲ್ಲೂ ಗಲಭೆಗೆ ಯತ್ನಿಸಿದ್ದ ಕಿಡಿಗೇಡಿಗಳು – ಮೂಡಬಿದ್ರೆ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಸಮಯಪ್ರಜ್ಞೆಯಿಂದ ತಪ್ಪಿದ್ದ ಅನಾಹುತ
ಮಂಗಳೂರು ಅಕ್ಟೋಬರ್ 06:ಶಿವಮೊಗ್ಗದಲ್ಲಿ ಈದ ಮಿಲಾದ್ ದಿನ ನಡೆದ ಗಲಭೆ ಇನ್ನೂ ಸುದ್ದಿಯಲ್ಲಿರುವಂತೆ ಇದೀಗ ಮಂಗಳೂರಿನಲ್ಲೂ ಅದೇ ರೀತಿಯ ಗಲಭೆ ಮಾಡಲು ಕಿಡಿಗೇಡಿಗಳು ಪ್ರಯತ್ನ ಪಟ್ಟಿರುವ ವಿಚಾರ ಬೆಳಕಿಗೆ ಬಂದಿದ್ದು, ಇದೀಗ ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಪುಚ್ಚೆಮೊಗೇರು ಎಂಬಲ್ಲಿ ಸೆಪ್ಟೆಂಬರ್ 30 ರಂದು ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಅಲ್ಲಿಯ ಗಣಪತಿ ಕಟ್ಟೆಯಲ್ಲಿ ಈದ್ ಮಿಲಾದ್ ದಿನವೇ ಹಸಿರು ಬಾವುಟವನ್ನು ಕಿಡಿಗೇಡಿಗಳು ಇಟ್ಟಿದ್ದರು. ಈ ಬಗ್ಗೆ ಸ್ಥಳೀಯ ಪಿಡಿಓಗೆ ಮಾಹಿತಿ ಕೊಟ್ಟಿದ್ದರೂ ಆತ ಯಾವುದೇ ರೀತಿಯ ಕ್ರಮಕೈಗೊಳ್ಳಲಿಲ್ಲ ಎಂದು ಆರೋಪಿಸಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಮೂಡಬಿದ್ರೆ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಹೊಸಬೆಟ್ಟು ಪಿಡಿಓ ಶೇಖರ್ ಅವರ ವರ್ತನೆಗೆ ಕೆಂಡಾಮಂಡಲರಾಗಿದ್ದು, ಸರಿಯಾಗೇ ಕ್ಲಾಸ್ ತೆಗೆದುಕೊಂಡಿದ್ದಾರೆ.
ಗಣಪತಿ ಕಟ್ಟೆ ಮೇಲೆ ಮೇಲೆ ಬಾವುಟ ಹಾಕಲಿಕ್ಕೆ ಪರ್ಮಿಶನ್ ತೆಗೊಂಡಿದಾರಾ?’ಎಂದು ಪಿಡಿಓ ಗೆ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಕೇಳಿದ್ದು, ‘ನಿನ್ನ ಕೆಲಸ ಏನೂ ಅಂತ ನಿನಗೆ ಗೊತ್ತಿಲ್ಲ, ಏನ್ ಮಾಡ್ತಾ ಇದೀಯಾ’ ‘ಅವರು ಪರ್ಮಿಷನ್ ತೆಗೊಂಡಿಲ್ಲ ಅಂದ್ರೆ ಪೊಲೀಸ್ ಕಂಪ್ಲೆಟ್ ಕೊಡಬೇಕು’ ‘ಮೊದಲು ಇವನನ್ನೇ ಆರೋಪಿ ಮಾಡಬೇಕು, ‘ನಿನ್ನ ಅಧಿಕಾರ ಏನು ಅಂತ ನಿನಗೇ ಗೊತ್ತಿಲ್ಲ’ ‘ಸಂಬಂಧ ಇಲ್ಲ ಅಂತ ಹೇಳೋ ನೀನ್ಯಾಕೆ ಪಿಡಿಓ ಆಗಿದ್ದಿ’ ಅಂತ ಇನ್ಸ್‌ಪೆಕ್ಟರ್ ಗರಂ ಆಗಿದ್ದಾರೆ.
ಬಳಿಕ ಪೊಲೀಸ್ ಸಿಬ್ಬಂದಿ ಮೂಲಕ ಕಟ್ಟೆ ಮೇಲೆ ಇಟ್ಟಿದ್ದ ಬಾವುಟವನ್ನು ತೆರವು ಮಾಡಲಾಗಿದ್ದು, ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಅವರ ಸಮಯಪ್ರಜ್ಞೆ ಶಿವಮೊಗ್ಗದ ರೀತಿಯ ಗಲಭೆ ಆಗುವುದನ್ನು ತಪ್ಪಿಸಿದ್ದಾರೆ. ಹಲವು ದಿನಗಳ ಬಳಿಕ ಸಾಮಾಜಿಕ ತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.