DAKSHINA KANNADA
ಮಂಗಳೂರು: ಎಸ್‌ಡಿಪಿಐ, ಪಿಎಫ್‌ಐ ಕಚೇರಿಗಳ ಮೇಲೆ ಎನ್‌ಐಎ ದಾಳಿ, ಗೋ ಬ್ಯಾಕ್ ಎನ್‌ಐಎ ಘೋಷಣೆ ಕೂಗಿದ ಕಾರ್ಯಕರ್ತರು
ಮಂಗಳೂರು, ಸೆಪ್ಟೆಂಬರ್ 22: ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ನೆಟ್ಟಾರು ಹತ್ಯೆ ಸಂಬಂಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಮಂಗಳೂರಿನ ಪಿಎಫ್‌ಐ ಮತ್ತು ಎಸ್‌ಡಿಪಿಐ ಕಚೇರಿ ಮೇಲೆ ಗುರುವಾರ ಬೆಳಗಿನ ಜಾವ ದಾಳಿ ಮಾಡಿ ತನಿಖೆ ಆರಂಭಿಸಿದ್ದಾರೆ.
ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿ ಇರುವ ಕಚೇರಿಗಳಿಗೆ ಮುಂಜಾನೆ 3.30ರ ಸುಮಾರಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ಆರಂಭಿಸಿದ್ದಾರೆ. ಪಿಎಫ್‌ಐ, ಎಸ್ ಡಿಪಿಐ ಮುಖಂಡರ ಮನೆ ಮೇಲೆ ದಾಳಿ ಮಾಡಲಾಗಿದೆ. ಒಟ್ಟಾರೆ ಎಂಟು ಕಡೆಗಳಲ್ಲಿ ಎನ್‌ಐಎ ದಾಳಿ ನೆಡೆದಿದೆ ಎಂದು ತಿಳಿದು ಬಂದಿದೆ.
ಈ ಮಧ್ಯೆ ಪಿಎಫ್‌ಐ ಮತ್ತು ಎಸ್‌ಡಿಪಿಐ ಕಚೇರಿಗಳು ಮತ್ತು ಮುಖಂಡ ಮನೆ ಮೇಲೆ ಎನ್‌ಐಎ ದಾಳಿ ಖಂಡಿಸಿ ಆ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂಬಂಧ ಪೊಲೀಸರು ನೆಲ್ಲಿಕಾಯಿ ರಸ್ತೆಯನ್ನು ಬಂದ್ ಮಾಡಿದ್ದು, ಕಟ್ಟೆಚ್ಚರ ವಹಿಸಿದ್ದಾರೆ. ಅಲ್ಲದೆ, ಅರೆಮೀಸಲು ಪಡೆಯಿಂದಲೂ ಭಾರಿ ಕಟ್ಟೆಚ್ಚರ ವಹಿಸಲಾಗಿದೆ.
ಎಸ್‌ಡಿಪಿಐ ಮತ್ತು ಪಿಎಫ್‌ಐ ಕಚೇರಿಗಳ ಮೇಲೆ ಎನ್‌ಐಎ ದಾಳಿ ಮಾಡಿದ ವಿಷಯ ತಿಳಿಯುತ್ತಿದ್ದಂತೆ ನೂರಾರು ಕಾರ್ಯಕರ್ತರು ಜಮಾಯಿಸಿ ಪ್ರತಿಭಟನೆ ಆರಂಭಿಸಿದರು. ಗೋಬ್ಯಾಕ್ ಎನ್‌ಐಎ, ಗೋ ಬ್ಯಾಕ್ ಎನ್‌ಐಎ ಎಂಬ ಘೋಷಣೆಗಳನ್ನು ಕೂಗಿದರು. ಎನ್‌ಐಎ ದಾಳಿಯನ್ನು ಖಂಡಿಸಿದರು. ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಪೊಲೀಸರು ಕೆಲ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡರು.