Connect with us

LATEST NEWS

ಮಂಗಳೂರು ಗುಂಪು ಹತ್ಯೆ ಪ್ರಕರಣ ಕಮೀಷನರ್ ಹೇಳಿಕೆ ಹಲವು ಅನುಮಾನಗಳನ್ನು ಹುಟ್ಟಿಸುತ್ತಿವೆ – ತನಿಖೆಗೆ ವಿಶೇಷ ತಂಡ ನೇಮಿಸಲು ರಾಜ್ಯ ಸರಕಾರಕ್ಕೆ ಸಿಪಿಐಎಂ ಆಗ್ರಹ

ಮಂಗಳೂರು ಎಪ್ರಿಲ್ 29: ಮಂಗಳೂರು ಕುಡುಪು ಬಳಿ ಹೊರ ರಾಜ್ಯದ ಅಪರಿಚಿತ ವ್ಯಕ್ತಿಯನ್ನು ಧರ್ಮದ ಗುರುತಿನ ಕಾರಣಕ್ಕಾಗಿ ಸಂಘಪರಿವಾರ ಬೆಂಬಲಿಗರ ಗುಂಪೊಂದು ಹೊಡೆದು ಸಾಯಿಸಿದ ಪ್ರಕರಣವನ್ನು ಮಾಬ್ ಲಿಂಚಿಂಗ್, ಕೊಲೆ ಪ್ರಕರಣ ಎಂದು ಮಂಗಳೂರು ಪೊಲೀಸ್ ಕಮೀಷನರ್ ಎರಡು ದಿನಗಳ ತರುವಾಯ ಪತ್ರಿಕಾಗೋಷ್ಟಿಯಲ್ಲಿ ಒಪ್ಪಿಕೊಂಡಿದ್ದಾರೆ. ಕುಡುಪು ಮಾಬ್ ಲಿಂಚಿಂಗ್ ಪ್ರಕರಣದ ಕುರಿತು ಕಮೀಷನರ್ ಅಗ್ರವಾಲ್ ಮಾಧ್ಯಮಗಳಿಗೆ ನೀಡಿರುವ ಒಟ್ಟು ಹೇಳಿಕೆ ಪೊಲೀಸ್ ಇಲಾಖೆ ಈ ಪ್ರಕರಣದಲ್ಲಿ ನ್ಯಾಯಯುತವಾಗಿ ನಡೆದುಕೊಂಡಿಲ್ಲ, ಬದಲಿಗೆ ಹತ್ಯೆಕೋರರನ್ನು ರಕ್ಷಿಸುವ ಅನುಮಾನಾಸ್ಪದ ನಡೆಗಳಾಗಿ ಕಾಣುತ್ತಿದೆ‌.

ಕುಡುಪು ಸಾಮ್ರಾಟ್ ಮೈದಾನದಲ್ಲಿ ಭಾನುವಾರ ಮಧ್ಯಾಹ್ನ ಸುಮಾರು ಮೂರು ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ಸ್ಥಳೀಯ ಪೊಲೀಸರು ಸಂಜೆ ಐದೂವರೆ ಗಂಟೆಗೆ ಮೃತ ದೇಹವನ್ನು ಪತ್ತೆ ಹಚ್ಚಿದ್ದಾರೆ. ಆದರೆ, ಅಸಹಜ ಸಾವು, ಅಪರಿಚಿತ ಮೃತ ದೇಹ ಪತ್ತೆ ಎಂದು ಯುಡಿಆರ್ ದಾಖಲಿಸಿ ಮೃತನ ಗುರುತು ತಿಳಿಸುವಂತೆ ಲುಕ್ ಔಟ್ ಪ್ರಕಟನೆ ಹೊರಡಿಸಿದ್ದಾರೆ. ಲುಕ್ ಔಟ್ ಪ್ರಕಟಣೆಯಲ್ಲಿ “ನಶೆಯಿಂದ ಬಿದ್ದು ಗಾಯಗಳು ಆಗಿ ಸತ್ತಿರಬಹುದು, ಅಥವಾ ಯಾರೊಂದಿಗೊ ಜಗಳವಾಡಿ ಬಿದ್ದು ಹೊರಳಾಟದಿಂದ ಗಾಯಗಳು ಆಗಿರುಬಹುದು” ಎಂದು ಉಲ್ಲೇಖಿಸಲಾಗಿದೆ. ಪೊಲೀಸ್ ಕಮೀಷನರ್ ಹೇಳಿಕೆಯಲ್ಲಿಯೂ ‘ಮೃತ ದೇಹದ ಮೇಲೆ ಗಂಭೀರ ಸ್ವರೂಪದ ಗಾಯಗಳು ಇರಲಿಲ್ಲ. ತರುಚಿದ ಗಾಯಗಳು ಮಾತ್ರ ಇದ್ದವು. ಅದರಿಂದ ಇದೊಂದು ಕೊಲೆ ಎಂದು ನಾವು ತೀರ್ಮಾನಕ್ಕೆ ಬರುವಂತಿರಲಿಲ್ಲ. ಮರು ದಿವಸ ಸೋಮವಾರ ಮಧ್ಯಾಹ್ನದ ತರುವಾಯ ಗುಂಪು ಹಲ್ಲೆ ನಡೆದಿರುವ ಕುರಿತು ಮಾತುಗಳು ಕೇಳಿಬಂದ ತರುವಾಯ ನಾವು ಆ ನಿಟ್ಟಿನಲ್ಲಿ ತನಿಖೆ ಆರಂಭಿಸಿದೆವು, ಸೋಮವಾರ ಮುಸ್ಸಂಜೆಯ ನಂತರ ಪೋಸ್ಟ್ ಮಾರ್ಟಂ ನಡೆದು ಅದರ ವರದಿಯ ಪ್ರಕಾರ ಹತ್ಯೆ ಎಂದು ಖಾತರಿ ಪಡಿಸಿ ಕೊಲೆ ಪ್ರಕರಣ ದಾಖಲಿಸಿದ್ದೇವೆ. ಹದಿನೈದು ಜನರನ್ನು ಬಂಧಿಸಿದ್ದೇವೆ. ಸುಮಾರು 30 ರಷ್ಟು ಜನರು ಇದರಲ್ಲಿ ಭಾಗಿಯಾಗಿರುವ ಮಾಹಿತಿ ಇದ್ದು ತನಿಖೆ ಪ್ರಗತಿಯಲ್ಲಿದೆ. ಕ್ರಿಕೆಟ್ ಆಟದ ಮೈದಾಮದಲ್ಲಿ ವಲಸೆ ಕಾರ್ಮಿಕ ಹಾಗು ಸಚಿನ್ ಎಂಬ ಆರೋಪಿಯ ನಡುವೆ ಮಾತುಕತೆ ನಡೆದ ತರುವಾಯ ಗುಂಪು ದೊಣ್ಣೆ, ಕಲ್ಲುಗಳಿಂದ ಹೊಡೆದು, ಕಾಲಿನಿಂದ ತುಳಿದು ಹತ್ಯೆ ನಡೆಸಿದೆ ಎಂದು ತಿಳಿಸಿದ್ದಾರೆ.

 

ಕಮೀಷನರ್ ಅಗ್ರವಾಲ್ ಹೇಳಿಕೆಗಳು ಈ ಪ್ರಕರಣವನ್ನು ಹತ್ತಿರದಿಂದ ಗಮನಿಸುತ್ತಾ ಬಂದವರಿಗೆ ಸಮಾಧಾನ ತರುವಂತಿಲ್ಲ, ಬದಲಿಗೆ ಅಪನಂಬಿಕೆ ಮೂಡಿಸುವಂತಿದೆ. ಪ್ರಕರಣ ನಡೆದ ಮೈದಾನದಲ್ಲಿ ಅಂದು ಕ್ರಿಕೆಟ್ ಪಂದ್ಯಾಟದಲ್ಲಿ ಭಾಗಿಯಾಗಲು ನೂರಕ್ಕೂ ಹೆಚ್ಚು ಜನ ಸೇರಿದ್ದರು. ಎಲ್ಲರ ಎದುರು ನಡೆದ ಈ ಮಾಬ್ ಲಿಂಚಿಂಗ್, ಹೊರ ರಾಜ್ಯದ ಅಪರಿಚಿತನ ಹತ್ಯೆಯ ಸುದ್ದಿ ತಕ್ಷಣವೇ ಊರಿನ ಒಳಗಡೆ ಹಬ್ಬಿದೆ. ಅದು ಪೊಲೀಸರಿಗೆ ತಲುಪಲು ಹೆಚ್ಚು ಸಮಯ ಹಿಡಿಯಲಿಲ್ಲ. ಆ ಪ್ರಕಾರವೆ ಐದು ಗಂಟೆಯ ಸುಮಾರಿಗೆ ಪೊಲೀಸರು ಮೃತದೇಹ ಇದ್ದ ಸ್ಥಳಕ್ಕೆ ತಲುಪಿದ್ದಾರೆ. ಅಷ್ಟು ಹೊತ್ತಿಗೆ ಘಟನೆ ಹೇಗಾಗಿದೆ ಎಂಬುದು ಖಂಡಿತಾ ಪೊಲೀಸರಿಗೆ ತಿಳಿದಿರುತ್ತದೆ. ಅಂದೇ ರಾತ್ರಿಯ ಹೊತ್ತು ಹಲವು ಸಾಮಾಜಿಕ ಕಾರ್ಯಕರ್ತರಿಗೆ ಸ್ಥಳೀಯರು ವಿಷಯ ತಲುಪಿಸಿದ್ದಾರೆ. ಪೊಲೀಸರ ನಿರ್ಲಕ್ಷ್ಯದ ಕುರಿತೂ ದೂರಿಕೊಂಡಿದ್ದಾರೆ. ಇಷ್ಟೆಲ್ಲಾ ಮಾಹಿತಿ ಇದ್ದರೂ, ನೂರಾರು ಜನರ ನಡುವೆ ನಡೆದ ಮಾಬ್ ಲಿಂಚಿಂಗ್, ಹತ್ಯೆ ಪ್ರಕರಣವನ್ನು ಪೊಲೀಸರು “ಯಾವುದೋ ನಶೆಯಲ್ಲಿ ಉರುಳಿ ಬಿದ್ದು ಸಾವನ್ನಪ್ಪಿರಬಹುದು” ಎಂಬ ವಾಕ್ಯ ಸೇರಿಸಿ ಲುಕ್ ಔಟ್ ಪ್ರಕಟನೆ ಕೊಡುವ ಉದ್ದೇಶ ಏನಿತ್ತು ?

ಹಾಗೆಯೆ, ಕ್ರಿಕೆಟ್ ಪಂದ್ಯಾಟದ ಸಂದರ್ಭ ನೂರಾರು ಜನರ ಎದುರು ನಡೆದ ಮಾಬ್ ಲಿಂಚಿಂಗ್, ಅಪರಿಚಿತನ ಹತ್ಯೆಯ ಕುರಿತು ಊರಿಡೀ ಸುದ್ದಿ ಹಬ್ಬಿದ್ದರು ಪೊಲೀಸ್ ಇಲಾಖೆಗೆ ಮರು ದಿನ ಮಧ್ಯಾಹ್ನದ ವರೆಗು ಈ ಕುರಿತು ಯಾವುದೇ ಮಾಹಿತಿ ಇರಲಿಲ್ಲ ಎಂಬುದು ಸಾಮಾನ್ಯ ನಾಗರಿಕರೂ ನಂಬಲು ಸಾಧ್ಯ ವಿಲ್ಲದ ಸಂಗತಿ. ಆಳವಾದ ಗಾಯಗಳು ಮೃತ ದೇಹದ ಮೇಲೆ ಕಂಡು ಬರುತ್ತಿದ್ದರೂ, ಸಣ್ಣ ಪುಟ್ಟ ತರುಚಿದ ಗಾಯಗಳಷ್ಟೆ ಮೃತ ದೇಹದ ಮೇಲೆ ಕಾಣುತ್ತಿತ್ತು, ಇದರಿಂದಾಗ ತಕ್ಷಣಕ್ಕೆ ಕೊಲೆ ಎಂದು ತೀರ್ಮಾನಕ್ಕೆ ಬರಲಿಲ್ಲ ಎಂಬ ಹೇಳಿಕೆಯೂ ಅನುಮಾನಕ್ಕೆ ಕಾರಣವಾಗಿದೆ. ಮೃತ ದೇಹವನ್ನು ಶವಾಗಾರದಲ್ಲಿ ಸಂದರ್ಶಿಸಿದ ಸಾಮಾಜಿಕ, ರಾಜಕೀಯ ಮುಖಂಡರೂ “ಮೃತ ದೇಹದ ಮೇಲೆ ಹಲ್ಲೆಯ ಗಾಯಗಳು ಎದ್ದು ಕಾಣುತ್ತಿತ್ತು” ಎಂದು ಹೇಳಿರುತ್ತಾರೆ.

ಘಟನೆ ನಡೆದು 24 ಗಂಟೆಗಳ ಕಾಲ ಪೊಲೀಸರು ಕೊಲೆ ನಡೆದಿರುವ ಆಧಾರದಲ್ಲಿ ತನಿಖೆ ನಡೆಸದಿರುವುದು, ಮಾಧ್ಯಮಗಳಿಗು ಮಾಹಿತಿ ನೀಡದಿರುವುದು, ಊರಿಡೀ ಗುಂಪು ಹತ್ಯೆಯ ಸುದ್ದಿ ಹಲ್ಲೆ ಕೋರರ ಹೆಸರಿನ ಜೊತೆಗೆ ಹರಿದಾಡುತ್ತಿದ್ದರೂ ಪೊಲೀಸರು “ತಮಗೆ ಮಾಹಿತಿಯೇ ಇರಲಿಲ್ಲ” ಎಂದು ಸುಮ್ಮನಿದ್ದದ್ದು, ಮೈ ಮೇಲೆ ಪೂರ್ತಿ ಗಾಯಗಳಾಗಿದ್ದರು, “ಸಾಮಾನ್ಯ ತರಚಿದ ಗಾಯಗಳು, ನಶೆಯಿಂದ ಉರುಳಿ ಬಿದ್ದು ಗಾಯಗಳಾಗಿರುವ ಸಾಧ್ಯತೆ ಇದೆ” ಎಂದು ಅಸಹಜ ಸಾವಿನ ಪ್ರಕರಣವಾಗಿ ಮಾತ್ರ ಒಂದಿಡೀ ದಿನ ವ್ಯರ್ಥ ಮಾಡಿದ್ದು ದಟ್ಟ ಅನುಮಾನಗಳಿಗೆ ಕಾರಣವಾಗಿದೆ. ಪೊಲೀಸರು ಪ್ರಜ್ಞಾಪೂರ್ವಕವಾಗಿ ಮಾಬ್ ಲಿಂಚಿಂಗ್ ಪ್ರಕರಣವನ್ನು ಮುಚ್ಚಿಹಾಕುವ, ಬಿಜೆಪಿಯೊಂದಿಗೆ, ಶಾಸಕರುಗಳೊಂದಿಗೆ ಸಂಪರ್ಕ ಹೊಂದಿರುವ ಬಲಪಂಥೀಯ ಕ್ರಿಮಿನಲ್ ಗುಂಪನ್ನು ರಕ್ಷಿಸಲು ಮಾಡಿದ ಯತ್ನದಂತೆ ಕಾಣಿಸುತ್ತದೆ. ಮಾಬ್ ಲಿಂಚಿಂಗ್ ಪ್ರಕರಣ ಮಂಗಳೂರು ನಗರದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಯ ಪರಿಸ್ಥತಿಯನ್ನು ಎತ್ತಿತೋರಿಸಿರುವುದರಿಂದ ಆ ಕಳಂಕದಿಂದ ಪಾರಾಗಲೂ ಪೊಲೀಸ್ ಇಲಾಖೆ ಎಲ್ಲಾ ಮಾಹಿತಿಗಳ ಹೊರತಾಗಿಯೂ ಪ್ರಕರಣವನ್ನು ಲಘುವಾಗಿಸಲು ಗರಿಷ್ಟ ಯತ್ನ ನಡೆಸಿದೆ.

ಪೊಲೀಸ್ ಇಲಾಖೆಯ 24 ತಾಸುಗಳ ಮೌನಾಚರಣೆಯ ಲಾಭ ಪಡೆದು ಪ್ರಕರಣದ ಪ್ರಮುಖ ಆರೋಪಿ, ಬಿಜೆಪಿ ಮುಖಂಡ ರವೀಂದ್ರ ನಾಯಕ್, ಮೊಬೈಲ್ ಗಳಲ್ಲಿ ಸೆರೆಯಾಗಿದ್ದ ಮಾಬ್ ಲಿಂಚಿಂಗ್, ಹಾಗೂ ಹತ್ಯೆ ಘಟನೆಯ ವೀಡಿಯೋಗಳು ಹಾಗೂ ಸ್ಥಳೀಯ ಸಿ ಸಿ ಕೆಮೆರಾ ಗಳ ರೆಕಾರ್ಡಿಂಗ್ ಗಳನ್ನು ಅಲಿಸಿ ಹಾಕಿದ್ದಾನೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಮಂಗಳೂರು ಕಮಿಷನರೇಟ್ ಪೊಲೀಸ್ ಕುಡುಪು ಮಾಬ್ ಲಿಂಚಿಂಗ್ ನಲ್ಲಿ ನಡೆದು ಕೊಂಡಿರುವ ರೀತಿಯನ್ನು ಗಮನಿಸಿದರೆ, ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳ ಬಂಧನ ಹಾಗೂ ಸರಿಯಾದ ಸಾಕ್ಷ್ಯ ಸಂಗ್ರಹ, ನ್ಯಾಯಾಲಯದಲ್ಲಿ ಆರೋಪ ಸಾಬೀತಾಗುವುದು ಸುಲಭ ಅಲ್ಲ ಎಂದು ಕಾಣುತ್ತದೆ. ಈ ಎಲ್ಲಾ ಅಂಶಗಳನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಬೇಕು, ಕುಡುಪು ಮಾಬ್ ಲಿಂಚಿಂಗ್ ಪ್ರಕರಣವನ್ನು ಮಂಗಳೂರಿನ ಹೊರ ಭಾಗದ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸಬೇಕು, ಪ್ರಕರಣದ ಆರಂಭದಿಂದಲೆ ತನಿಖಾ ಲೋಪ ಎಸಗಿರುವ ಮಂಗಳೂರು ಪೊಲೀಸ್ ಕಮೀಷನರ್ ಅಗ್ರವಾಲ್ ಹಾಗೂ ಸಂಬಂಧ ಪಟ್ಟ ಪೊಲೀಸರನ್ನು ಇಲಾಖಾ ತನಿಖೆಗೆ ಒಳಪಡಿಸಬೇಕು, ಮಂಗಳೂರು ಪೊಲೀಸ್ ಕಮೀಷನರ್, ಅಡಿಷನಲ್ ಪೊಲೀಸ್ ಕಮೀಷನರ್ ರನ್ನು ಬದಲಾಯಿಸುವ ಜೊತೆಗೆ ಇಡೀ ಕಮೀಷನರೇಟ್ ಪೊಲೀಸ್ ನಲ್ಲಿ ಅಮೂಲಾಗ್ರ ಬದಲಾವಣೆ ತರಬೇಕು, ಜೊತೆಗೆ ಹತ್ಯೆಗೀಡಾದ ಅಮಾಯಕನ ಕುಟುಂಬಕ್ಕೆ ಪರಿಹಾರ ಧನ ಒದಗಿಸಬೇಕು ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ರಾಜ್ಯ ಸರಕಾರವನ್ನು ಆಗ್ರಹಿಸುತ್ತದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *