LATEST NEWS
ಮಂಗಳೂರು ಮಾರುಕಟ್ಟೆಗಳು ಡೆಂಗ್ಯೂ ಕೇಂದ್ರಗಳಾಗಿವೆ – ಪಾಲಿಕೆಯಲ್ಲಿ ಕಾಂಗ್ರೆಸ್ ಸದಸ್ಯರ ಆರೋಪ
ಮಂಗಳೂರು ಜುಲೈ 25: ಮಂಗಳೂರು ಮಹಾ ಮಂಗಳಾ ಸಭಾಂಗಣದಲ್ಲಿ ನಡೆದ ಪಾಲಿಕೆಯ ಸಾಮಾನ್ಯ ಸಭೆ ನಡೆಯಿತು. ಸಭೆಯಲ್ಲಿ ಡೆಂಗ್ಯೂ ಜ್ವರದ ಬಗ್ಗೆ ವಿಪಕ್ಷದ ಸದಸ್ಯರು ಮೇಯರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ ಕಳೆದ ಸುಮಾರು ನಾಲ್ಕು ವರ್ಷಗಳಿಂದ ಮನಪಾ ಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಗಳು ಸೇರಿದಂತೆ ಹಲವು ಯೋಜನೆಗಳು ಗುರಿ ತಲುಪುತ್ತಿಲ್ಲ ಎಂದರು. ಪಾಲಿಕೆ ವ್ಯಾಪ್ತಿಯ ಎಲ್ಲಾ ಮಾರುಕಟ್ಟೆಗಳು ಡೆಂಗ್ಯೂ ಕೇಂದ್ರಗಳಾಗಿವೆ ಎಂದರು. ಬರೀ ಪೋನ್ ಇನ್ ಕಾರ್ಯಕ್ರಮ ಮಾಡಿದರೆ ಆಗುವುದಿಲ್ಲ ಎನಾದರೂ ಕೆಲಸ ಮಾಡಿ ಎಂದರು.
ನಗರದ ಕದ್ರಿ ಮಾರುಕಟ್ಟೆ ಡೆಂಗಿ ಉತ್ಪತ್ತಿ ತಾಣವಾಗಿದೆ. ಮೊಣಕಾಲುವರೆಗೆ ಅಲ್ಲಿ ನೀರು ನಿಲ್ಲುತ್ತಿದೆ. ಕಳೆದ ಸಭೆಯಲ್ಲಿಯೂ ಡೆಂಗಿ ಬಗ್ಗೆ ಕ್ರಮಕ್ಕೆ ಆಗ್ರಹಿಸಲಾಗಿತ್ತು ಆದರೆ ಏನು ಆಗಿಲ್ಲ ಎಂದು ಸದಸ್ಯ ವಿನಯರಾಜ್ ಆರೋಪಿಸಿದರು. ಈ ವೇಳೆ ಪ್ರತಿಕ್ರಿಯೆ ನೀಡಿದ ಮೇಯರ್ ಸುಧೀರ್ ಶೆಟ್ಟಿ ನಗರ ವ್ಯಾಪ್ತಿಯ ೧೦ ಆರೋಗ್ಯ ಕೇಂದ್ರಗಳ ವೈದ್ಯರ ನೇತೃತ್ವದಲ್ಲಿ ವಿವಿಧ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ಮೂಲಕ ನಗರದಲ್ಲಿ ಮನೆಗಳ ಸರ್ವೆ ಕಾರ್ಯ, ಜಾಗೃತಿಯ ನೀಡಲಾಗುತ್ತಿದೆ ಎಂದರು.
ಪಾಲಿಕೆ ವ್ಯಾಪ್ತಿಯಲ್ಲಿ ಜಾರಿಯಲ್ಲಿರುವ ಸ್ವಯಂಘೋಷಿತ ಆಸ್ತಿ ತೆರಿಗೆಯಿಂದ ಸಾರ್ವಜನಿಕರಿಗೆ ಆಗುತ್ತಿರುವ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ, ಹಾಲಿ ಮಾರ್ಗಸೂಚಿ ದರದಲ್ಲಿ ಪರಿಷ್ಕರಣೆಗೊಳಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮಂಗಳೂರು ಪಾಲಿಕೆ ನಿರ್ಧರಿಸಿದೆ.