LATEST NEWS
ಮಂಗಳೂರು – ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾಯುಕ್ತ ದಾಳಿ
ಮಂಗಳೂರು ನವೆಂಬರ್ 21: ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಬೆಳ್ಳಂಬೆಳಗ್ಗೆಯೇ ಬೆಂಗಳೂರು, ಮಂಗಳೂರು, ಮಂಡ್ಯ ಸೇರಿ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ ನಡೆದಿದೆ. ಬೆಂಗಳೂರಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಎಂಸಿ ಕೃಷ್ಣವೇಣಿ ಮನೆ ಮೇಲೆ ದಾಳಿ ನಡೆದಿದೆ. ಸದ್ಯ ಕೃಷ್ಣವೇಣಿ ಮಂಗಳೂರಿಗೆ ವರ್ಗವಾಗಿದ್ದು, ಅಲ್ಲಿಯೂ ಅವರ ಮನೆ ಮೇಲೆ ದಾಳಿ ನಡೆದಿದೆ. ಅವರ ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆದಿದೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಕೃಷ್ಣವೇಣಿ ಅವರ ಮಂಗಳೂರಿನ ವೆಲೆನ್ಸಿಯಾದ ಮನೆ ಹಾಗೂ ಕಚೇರಿಗೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಕೃಷ್ಣವೇಣಿ 2 ತಿಂಗಳ ಹಿಂದಷ್ಟೇ ವರ್ಗಾವಣೆ ಆಗಿ ಮಂಗಳೂರಿಗೆ ಬಂದಿದ್ದಾರೆ. ಇವರು ಈ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಗಣಿ ಇಲಾಖೆ ಅಧಿಕಾರಿಯಾಗಿದ್ದರು. ಚಿಕ್ಕಬಳ್ಳಾಪುರದಲ್ಲಿ ಕೃಷ್ಣವೇಣಿ ವಿರುದ್ಧ ದೂರು ದಾಖಲಾದ ಹಿನ್ನೆಲೆ ಈ ದಾಳಿ ನಡೆದಿದೆ. ಮಂಗಳೂರು ಲೋಕಾಯುಕ್ತ ಎಸ್ಪಿ ನಟರಾಜ್ ನೇತೃತ್ವದಲ್ಲಿ ದಾಳಿ ನಡೆದಿದೆ.
ಮಂಗಳೂರಿನ ವೇಲೆನ್ಸಿಯಾ ಬಳಿಯ ಫ್ರೆಡ್ ರೋಸ್ ಎನ್ಕಲೇವ್ ಅಪಾರ್ಟ್ಮೆಂಟ್ಗೆ ಬೆಳಗ್ಗೆಯೇ ಮೂರು ವಾಹನಗಳಲ್ಲಿ ಆಗಮಿಸಿದ ಲೋಕಾ ಅಧಿಕಾರಿಗಳು ದಾಳಿ ನಡೆಸಿದರು. ಮಂಗಳೂರು ಹಾಗೂ ಚಿಕ್ಕಬಳ್ಳಾಪುರ ಲೋಕಾಯುಕ್ತ ಅಧಿಕಾರಿಗಳ ತಂಡ ಜಂಟಿಯಾಗಿ ಕಾರ್ಯಾಚರಣೆ ನಡೆಸಿದೆ. ಮಲ್ಲಿಕಟ್ಟೆ ಬಳಿಯ ಕಚೇರಿಗೂ ಲೋಕಾಯುಕ್ತ ಎಂಟ್ರಿಕೊಟ್ಟಿದೆ.