DAKSHINA KANNADA
ಮಂಗಳೂರು: ಲಿಪ್‌ಲಾಕ್ ವೀಡಿಯೋ ವೈರಲ್ ಪ್ರಕರಣ: ಓರ್ವ ವಶಕ್ಕೆ-ಹಲವರು ಸಸ್ಪೆಂಡ್

ಮಂಗಳೂರು, ಜುಲೈ 21 : ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಲಿಪ್‌ಲಾಕ್ ವೀಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ. ಓರ್ವನನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕಮೀಷನರ್, ನಮಗೆ ಸಿಕ್ಕ ಪ್ರಾಥಮಿಕ ಮಾಹಿತಿಯ ಪ್ರಕಾರ ಈ ಘಟನೆಯು 3-4 ತಿಂಗಳ ಹಿಂದೆ ಈ ಘಟನೆ ನಡೆದಿದೆ. ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜು ಪಕ್ಕದ ಅಪಾರ್ಟ್‌ಮೆಂಟ್‌ವೊಂದರಲ್ಲಿ ರೂಂ ಬಾಡಿಗೆ ಪಡೆದು ಅಲ್ಲಿ ವಾಸ್ತವ್ಯ ನಡೆಸುತ್ತಿದ್ದರು.

ಅಲ್ಲಿ ವಿದ್ಯಾರ್ಥಿನಿಯರನ್ನು ಕರೆದು ಈ ಕೃತ್ಯದಲ್ಲಿ ತೊಡಗಿದ್ದಾರೆ. ಈ ಬಗ್ಗೆ ಈಗಾಗಲೇ ಓರ್ವನನ್ನು ವಶಕ್ಕೆ ಪಡೆಯಲಾಗಿದ್ದು, ಟ್ರುತ್ ಆ್ಯಂಡ್ ಡೇರ್ ಗೇಮ್‌ನಲ್ಲಿ ಈ ರೀತಿ ಮಾಡಿದ್ದಾರೆಂದು ಪ್ರಾಥಮಿಕವಾಗಿ ತಿಳಿದು ಬಂದಿದೆ. ವೀಡಿಯೋದಲ್ಲಿರುವವರು ಅಪ್ರಾಪ್ತರೋ ಅಥವಾ ವಯಸ್ಕರೋ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ಬಗ್ಗೆ ಬಾಲಕಿಯರನ್ನು ಠಾಣೆಗೆ ಕರೆಸಿ ಮಾಹಿತಿ ಪಡೆಯಾಗುವುದು ಎಂದರು.
ಕೆಲ ತಿಂಗಳ ಹಿಂದೆ ನಡೆದ ಈ ವೀಡಿಯೋವನ್ನು ತನ್ನದೇ ಕಾಲೇಜಿನ ವಾಟ್ಸಪ್ ಗ್ರೂಪಿನಲ್ಲಿ ಅದೇ ತಂಡದಲ್ಲಿದ್ದ ಓರ್ವ ವಿದ್ಯಾರ್ಥಿ ಷೇರ್ ಮಾಡಿದ್ದ. ಈ ವೇಳೆ ಅದೇ ಗ್ರೂಪಿನಲ್ಲಿದ್ದ ಶಿಕ್ಷಕಿಯ ಗಮನಕ್ಕೆ ಬಂದು ಕಾಲೇಜು ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಕಾಲೇಜು ಆಡಳಿತ ಮಂಡಳಿ ಇದರಲ್ಲಿ ಕೆಲವರನ್ನು ಸಸ್ಪೆಂಡ್ ಮಾಡಿದೆ. ಘಟನೆ ನಡೆದ ಸ್ಥಳಕ್ಕೆ ಕಮೀಷನರ್ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಸದ್ಯ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಕಮೀಷನರ್ ತಿಳಿಸಿದ್ದಾರೆ.