LATEST NEWS
ಕೋಟೆಕಾರು ಬ್ಯಾಂಕ್ ದರೋಡೆ – ತಮಿಳುನಾಡಿನಲ್ಲಿ ಮೂವರ ಅರೆಸ್ಟ್
ಮಂಗಳೂರು, ಜನವರಿ 20: ಕೋಟೆಕಾರು ವ್ಯವಸಾಯ ಸಹಕಾರಿ ಸಂಘದ ಕೆ.ಸಿ.ರೋಡ್ ತಲಪಾಡಿ ಶಾಖೆ ಕಚೇರಿಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ.
ಬಂಧಿತರನ್ನು ತಮಿಳುನಾಡಿನ ತಿರುನಲ್ವೇಲಿಯ ಪದ್ಮನೇರಿ ಎಂಬಲ್ಲಿ ಮುರುಗಂಡಿ ದೇವರ್, ಯೋಶುವಾ ರಾಜೇಂದ್ರನ್ ಮತ್ತು ಕಣ್ಣನ್ ಮಣಿ(36) ಎಂದು ಗುರುತಿಸಲಾಗಿದೆ. ಶುಕ್ರವಾರ ಮಧ್ಯಾಹ್ನ ಸಹಕಾರಿ ಸಂಘದಿಂದ ಸುಮಾರು 4 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ದರೋಡೆ ಮಾಡಿ ಕೇರಳ ಮೂಲಕ ತಮಿಳುನಾಡಿಗೆ ಆರೋಪಿಗಳು ಪರಾರಿಯಾಗಿದ್ದರು. ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿ ದರೋಡೆಗೆ ಬಳಸಿದ ಕಾರು, ಮಾರಕಾಯುಧಗಳನ್ನು ವಶ ಪಡಿಸಿಕೊಂಡಿದ್ದಾರೆ.
ದರೋಡೆ ಪ್ರಕರಣ ಸಂಬಂಧಿಸಿ ಒಟ್ಟು ಎಂಟು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಮುಂಬೈ, ಕೇರಳ, ತಮಿಳುನಾಡಿಗೆ ಪೊಲೀಸರು ತೆರಳಿದ್ದು, ಮಾಹಿತಿ ಆಧರಿಸಿ ಕಾರನ್ನು ಬೆನ್ನಟ್ಟಿ ಹೋಗಿದ್ದರು. ಈ ವೇಳೆ, ತಿರುನಲ್ವೇಲಿಯನಲ್ಲಿ ಮೂವರು ಸಿಕ್ಕಿಬಿದ್ದಿದ್ದಾರೆ ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ. ಆರೋಪಿಗಳಿಗೆ ಸ್ಥಳೀಯರು ಸಹಕಾರ ನೀಡಿರುವ ಶಂಕೆ ವ್ಯಕ್ತವಾಗಿದೆ ಎಂದು ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಮುಂಬೈಯಿಂದ ಮಾಹಿತಿ ಕಲೆ ಹಾಕಿ ತಮಿಳುನಾಡಿಗೆ ತೆರಳಿ ಬಂಧನ ಮಾಡಿದ್ದೇವೆ. ಮುರುಗಂಡಿ ದೇವರ್ ಈ ಪ್ರಕರಣದ ಮುಖ್ಯ ಕಿಂಗ್‌ಪಿನ್, ಬಂಧಿತರಿಂದ ಫಿಯೆಟ್ ಕಾರ್ ವಶಪಡಿಸಿಕೊಂಡಿದ್ದೇವೆ. ದರೋಡೆಗೆ ಮಹಾರಾಷ್ಟ್ರ ಮೂಲದ ಫಿಯೆಟ್ ಕಾರ್ ಬಳಸಿದ್ದರು.