Connect with us

DAKSHINA KANNADA

ಮಂಗಳೂರು : ಪತ್ರಕರ್ತ ಮಿಥುನ್ ಕೊಡೆತ್ತೂರುಗೆ ಸೌಹಾರ್ದತೆಯ “ಬ್ರಾಂಡ್ ಮಂಗಳೂರು” ಪ್ರಶಸ್ತಿ ಪ್ರದಾನ

ಮಂಗಳೂರು: ಸೌಹಾರ್ದ ಮಂಗಳೂರು ಸ್ಥಾಪಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ಬ್ರಾಂಡ್ ಮಂಗಳೂರು 2024ನೇ ಪ್ರಶಸ್ತಿಯನ್ನು ಹೊಸದಿಗಂತ ಪತ್ರಿಕೆಯ ವರದಿಗಾರ ಮಿಥುನ್ ಕೊಡೆತ್ತೂರು ಅವರಿಗೆ ಪ್ರದಾನ ಮಾಡಲಾಯಿತು. ನಗರದ ಪತ್ರಿಕಾ ಭವನದಲ್ಲಿ ಜರುಗಿದ ಸರಳ ಕಾರ್ಯಕ್ರಮದಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರು ಪ್ರಶಸ್ತಿ ಪ್ರದಾನಗೈದು ಮಾತಾಡಿದರು.


“ಪ್ರತಿಯೊಂದು ಕಡೆಯಲ್ಲೂ ಪಾಸಿಟಿವ್ ಮತ್ತು ನೆಗೆಟಿವ್ ಅಭಿಪ್ರಾಯ ಇದ್ದೇ ಇರುತ್ತದೆ. ನಾವು ನೋಡುವ ರೀತಿ ಪಾಸಿಟಿವ್ ಆಗಿದ್ದರೆ ಎಲ್ಲವೂ ಪಾಸಿಟಿವ್ ಆಗಿಯೇ ಗೋಚರಿಸುತ್ತದೆ. ಮಂಗಳೂರು ಅನ್ನುವುದೇ ಒಂದು ದೊಡ್ಡ ಬ್ರಾಂಡ್. ಬೇರೆ ಕಡೆಗಿಂತ ಇಲ್ಲಿನ ಜನರು ಭಿನ್ನವಾಗಿದ್ದಾರೆ. ಇಲ್ಲಿನ ಜನರು ವಿಶ್ವದಲ್ಲಿ ಗುರುತಿಸಲ್ಪಡುತ್ತಿದ್ದಾರೆ. ಕಳೆದೆರಡು ದಶಕಗಳಿಂದ ಇಲ್ಲಿ ಕೋಮು ಗಲಭೆ, ವೈಷಮ್ಯ ಬೆಳೆದಿದೆ. ಇದನ್ನು ಮಟ್ಟಹಾಕಲು ಪತ್ರಕರ್ತರ ನೆರವು ಅಗತ್ಯ. ಪಾಸಿಟಿವ್ ವರದಿಗಳ ಅಗತ್ಯವಿದೆ. ಆ ಕೆಲಸವನ್ನು ಮಾಡುವ ಪತ್ರಕರ್ತರಿಗೆ ಪ್ರಶಸ್ತಿ ನೀಡುವುದು ಖುಷಿಯ ವಿಚಾರ” ಎಂದರು.


ಬಳಿಕ ಮಾತಾಡಿದ ಮಿಥುನ್ ಕೊಡೆತ್ತೂರು ಅವರು, “ಸಮಾಜದಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ದೇವಸ್ಥಾನಗಳಿಗೆ ಹೂವು ಕೊಂಡೊಯ್ಯುವಾಗ ಅದನ್ನು ಮುಸ್ಲಿಮರು ಅಥವಾ ಕ್ರೈಸ್ತರು ಬೆಳೆದಿದ್ದಾರೆಯೇ ಎಂದು ನೋಡುವುದಿಲ್ಲ. ಅದೇ ರೀತಿ ತಿನ್ನುವ ಅನ್ನ ಯಾರು ಬೆಳೆದಿದ್ದಾರೆ ಅನ್ನೋದು ತಿಳಿದಿರುವುದಿಲ್ಲ. ಎಲ್ಲವೂ ನಮ್ಮಲ್ಲಿನ ಚಿಂತನೆಯಲ್ಲಿ ಅಡಕವಾಗಿರುತ್ತದೆ” ಎಂದರು.


ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, “ದಕ್ಷಿಣ ಕನ್ನಡ ಜಿಲ್ಲೆಯ ಜನರು ಪರಿಶ್ರಮದಿಂದ ಮೇಲೆ ಬಂದವರು. ಇಲ್ಲಿನ ಜನರು ಎಲ್ಲ ಭಾಷೆಯನ್ನು ಮಾತಾಡುತ್ತಾರೆ. ಮಂಗಳೂರಲ್ಲಿ ಹುಟ್ಟಿರುವುದೇ ನಮ್ಮೆಲ್ಲರ ಭಾಗ್ಯ. ಇಲ್ಲಿನ ಪತ್ರಕರ್ತರು ಸಾಮಾಜಿಕ ವ್ಯವಸ್ಥೆಯಲ್ಲಿನ ಸರಿ ತಪ್ಪುಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಾರೆ. ಕೋಮು ಸೌಹಾರ್ದ ಸ್ಥಾಪಿಸುವ ನಿಟ್ಟಿನಲ್ಲಿ ಬ್ರಾಂಡ್ ಮಂಗಳೂರು ಪ್ರಶಸ್ತಿಯನ್ನು ಪತ್ರಕರ್ತರ ಸಂಘ ಕೊಡುತ್ತಿರುವುದು ಒಳ್ಳೆಯ ವಿಚಾರ” ಎಂದರು.
ವೇದಿಕೆಯಲ್ಲಿ ಕ್ಯಾ. ಗಣೇಶ್ ಕಾರ್ಣಿಕ್, ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್, ಕ್ರೆಡೈ ಅಧ್ಯಕ್ಷ ವಿನೋದ್ ಪಿಂಟೋ, ಆಯುಷ್ ಇಲಾಖೆಯ ಮುಹಮ್ಮದ್ ಇಕ್ಬಾಲ್, ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಮತ್ತಿತರರು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನ್ನಾಡಿದರು. ಕೋಶಾಧಿಕಾರಿ ಪುಷ್ಪರಾಜ್ ಬಿ ಎನ್ ನಿರೂಪಿಸಿ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *