DAKSHINA KANNADA
ಮಂಗಳೂರು ಜೆರೋಸಾ ಶಾಲಾ ವಿವಾದ: ಶಾಸಕರು, ಕಾರ್ಪೊರೇಟರುಗಳು ಸೇರಿ ಹಲವರ ವಿರುದ್ಧ FIR ದಾಖಲು..!
ಮಂಗಳೂರು:ಮಂಗಳೂರಿನ ಸಂತ ಜೆರೋಸಾ ಶಾಲೆಯಲ್ಲಿ ನಡೆದ ಹಿಂದೂ ಧರ್ಮ, ದೇವರ ಅವಹೇಳನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ, ಇಬ್ಬರು ಪಾಲಿಕೆ ಸದಸ್ಯರುಗಳು ಮತ್ತು ಇತರರ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಲೆಯ ಶಿಕ್ಷಕಿ ಯೋರ್ವರು ಹಿಂದೂ ಧರ್ಮ ಮತ್ತು ದೇವರನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಶಾಲೆಯ ವಿದ್ಯಾರ್ಥಿಗಳ ಹೆತ್ತವರು ಎನ್ನಲಾದ ಕೆಲವು ಮಂದಿ ಸಂಘ ಪರಿವಾರದ ಕಾರ್ಯಕರ್ತರ ಜೊತೆಗೂಡಿ ಶಾಲೆಯ ಬಳಿ ಅಶಾಂತಿಯ ವಾತಾವರಣ ಸೃಷ್ಟಿಸಿದ್ದರು ಎಂದು ಹೇಳಲಾಗಿತ್ತು. ಫೆ.12ರಂದು ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಡಾಭರತ್ ಶೆಟ್ಟಿ ಶಾಲೆಯ ಮುಂದೆ ಜಮಾಯಿಸಿ ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕನ್ನು ಶಾಲೆಯ ವಿರುದ್ಧ ಎತ್ತಿಕಟ್ಟುವಂತಹ ಪ್ರಯತ್ನ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಇದೀಗ ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಕಾರ್ಪೊರೇಟರ್‌ಗಳಾದ ಸಂದೀಪ್ ಗರೋಡಿ, ಭರತ್ ಕುಮಾರ್, ವಿಹೆಚ್‌ಪಿ ನಾಯಕ ಶರಣ್ ಪಂಪ್‌ವೆಲ್ ಮತ್ತಿತರರ ವಿರುದ್ಧ ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ಶಾಲೆಯ ಬಳಿ ಅಕ್ರಮವಾಗಿ ಪ್ರತಿಭಟನೆ ನಡೆಸುವಂತೆ ಕರೆ ನೀಡಿ, ಶಾಲೆಯ ಮುಂದೆ ಅಕ್ರಮವಾಗಿ ಸೇರಿ ಜೈ ಶ್ರೀರಾಮ್ ಎಂದು ಘೋಷಣೆಗಳನ್ನು ಕೂಗಿ ಕ್ರಿಶ್ಚಿಯನ್ ಧರ್ಮದ ವಿರುದ್ಧ ಮಾತನಾಡಿ, ಶಾಲಾಡಳಿತ ಮಂಡಳಿಯ ನಿಯಮಗಳನ್ನು ವಿದ್ಯಾರ್ಥಿಗಳು ಉಲ್ಲಂಘಿಸುವಂತೆ ಪ್ರಚೋದಿಸಿ, ಹಿಂದೂ-ಕ್ರಿಶ್ಚಿಯನರ ಮಧ್ಯೆ ಗಲಭೆ ಸೃಷ್ಟಿಸಲು ಪ್ರಚೋದಿಸಿರುವುದಾಗಿ ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.