LATEST NEWS
ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಜೈಲು ಸೇರಿದ್ದ ಆರೋಪಿ ಜೈಲಿನಲ್ಲೇ ಆತ್ಮಹತ್ಯೆಗೆ ಶರಣು

ಮಂಗಳೂರು ಮಾರ್ಚ್ 16: ಕಳೆದ ಕೆಲವು ದಿನಗಳ ಹಿಂದೆ ಅಪ್ರಾಪ್ತ ಬಾಲಕಿಗೆ ಲೈಂಗಿ ಕಿರುಕುಳ ನೀಡಿದ ಆರೋಪದಲ್ಲಿ ಅರೆಸ್ಟ್ ಆಗಿ ಜೈಲಿನಲ್ಲಿದ್ದ ಆರೋಪಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಮೂಡುಬಿದಿರೆ ಲಾಡಿಯ ಪ್ರಕಾಶ್ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡ ಆರೋಪಿ. ಪಕ್ಕದ ಮನೆಯ ಹದಿಮೂರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಲಾಡಿ ಅಜಂಕಲ್ಲು ನಿವಾಸಿ ಪ್ರಕಾಶ್ (57) ಎಂಬವರನ್ನು ಮೂಡುಬಿದಿರೆ ಇನ್ ಸ್ಪೆಕ್ಟರ್ ಸಂದೇಶ್ ಪಿ.ಜಿ. ಅವರ ನೇತೃತ್ವದ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.
ಜೈಲಿನ ಬಿ ಬ್ಯಾರಕಿನ ಶೌಚಾಲಯದ ಕಿಟಕಿಯ ಸರಳುಗಳಿಗೆ ಆರೋಪಿ ಮುಂಜಾನೆ ಶಾಲಿನಿಂದ ನೇಣುಬಿಗಿದುಕೊಂಡಿದ್ದನ್ನು ಜೈಲಿನ ಭದ್ರತಾ ಸಿಬ್ಬಂದಿ ಗಮನಿಸಿದ್ದರು. ಆತನನ್ನು ತಕ್ಷಣವೇ ಜಿಲ್ಲಾ ಸರ್ಕಾರಿ ವೆನ್ಸಾಕ್ ಆಸ್ಪತ್ರೆಗೆ ಜೈಲಿನ ವಾಹನದಲ್ಲಿ ಕರೆದೊಯ್ದಿದ್ದರು. ಆತ ಅಸುನೀಗಿರುವುದಾಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದರು.

‘ಆರೋಪಿ ಪ್ರಕಾಶ್ ವಿಪರೀತ ಕುಡಿತದ ಚಟ ಹೊಂದಿದ್ದ. ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದಲ್ಲಿ ಬಂಧನಕ್ಕೊಳಗಾದ ಆತನಿಗೆ ಈ ಪ್ರಕರಣದಲ್ಲಿ ಜಾಮೀನು ಸಿಕ್ಕಿರಲಿಲ್ಲ. ಜೈಲಿನಿಂದ ತನ್ನನ್ನು ಬಿಡಿಸುವುದಕ್ಕೆ ಕುಟುಂಬಸ್ಥರು ಯಾರೂ ಬರುವುದಿಲ್ಲ ಎಂಬ ಕಾರಣಕ್ಕೆ ನೊಂದಿದ್ದ’ ಎಂದು ಜೈಲಿನ ಮೂಲಗಳು ತಿಳಿಸಿವೆ. ಆತ್ಮಹತ್ಯೆ ಕುರಿತು ಬರ್ಕೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.