DAKSHINA KANNADA
ಮಂಗಳೂರು : ಮುಂದೂಡಲ್ಪಟ್ಟ ಚುನಾವಣೆಯಲ್ಲಿ ಮತ್ತೆ ಹೈಡ್ರಾಮಾ, ಸರ್ಕಾರಿ ಸಂಘದ ಎಲೆಕ್ಷನ್‌ಗೆ ಕೋರ್ಟ್ ನಿಂದ ಡೆಡ್ ಲೈನ್..!
ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣೆ ಕಗ್ಗಂಟು ಹಾಗೆಯೇ ಮುಂದುವರಿದಿದೆ. ಇದೀಗ ಮುಂದೂಡಲ್ಪಟ್ಟ ಚುನಾವಣೆಯನ್ನು ನಿಗದಿತ ಗಡುವಿನೊಳಗೆ ಮುಕ್ತಾಯಗೊಳಿಸುವಂತೆ ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯ ನಿರ್ದೇಶನ ನೀಡಿದೆ.
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣೆ ಕಗ್ಗಂಟು ಹಾಗೆಯೇ ಮುಂದುವರಿದಿದೆ. ಇದೀಗ ಮುಂದೂಡಲ್ಪಟ್ಟ ಚುನಾವಣೆಯನ್ನು ನಿಗದಿತ ಗಡುವಿನೊಳಗೆ ಮುಕ್ತಾಯಗೊಳಿಸುವಂತೆ ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯ ನಿರ್ದೇಶನ ನೀಡಿದೆ.
ನಿಗದಿತ ವೇಳಾಪಟ್ಟಿಯ ಪ್ರಕಾರ ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ನೌಕರರ ಸಂಘದ ನ್ಯಾಯಾಂಗ ಇಲಾಖೆಯ ಚುನಾವಣೆ 16-11-2024ರಂದು ನಡೆಯಬೇಕಿತ್ತು.
ಆದರೆ, ಚುನಾವಣಾ ಪ್ರಕ್ರಿಯೆಯಲ್ಲಿ ಅಭ್ಯರ್ಥಿಯೊಬ್ಬರ ನಾಮಪತ್ರ ಕ್ರಮಬದ್ಧವಾಗಿದ್ದರೂ ನ್ಯಾಯಾಲಯದ ಆದೇಶಕ್ಕೆ ತಲೆಬಾಗದೆ ನಾಮಪತ್ರವನ್ನು ತಿರಸ್ಕರಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಬಾಧಿತ ಅಭ್ಯರ್ಥಿಯವರು ಮತ್ತೆ ನ್ಯಾಯಾಲಯದ ಮೊರೆ ಹೋಗಿ ನ್ಯಾಯಾಂಗ ನಿಂದನೆಯ ಮೊಕದ್ದಮೆಯನ್ನು ದಾಖಲಿಸಿದ್ದರು. ಈ ಪ್ರಕರಣದ ನೋಟೀಸ್ ಜಾರಿಯಿಂದ ತಪ್ಪಿಸಿಕೊಳ್ಳಲು ಚುನಾವಣಾಧಿಕಾರಿಯವರು ರಜೆಯ ಮೇಲೆ ತೆರಳುವ ನಾಟಕವಾಡಿದ್ದರು.
ಆದರೆ, ಮತ್ತೆ ನ್ಯಾಯಾಲಯ ಚಾಟಿ ಬೀಸಿದ ಪರಿಣಾಮ ಪೊಲೀಸರ ನೆರವಿನಿಂದ ನೋಟೀಸ್ ಜಾರಿಯಾಯಿತು. ಜೈಲು ಅಥವಾ ಆಸ್ತಿ ಜಪ್ತಿಯಂತಹ ಗಂಭೀರ ಶಿಕ್ಷೆಗೆ ದಾರಿಮಾಡಿಕೊಡಬಹುದಾಗಿದ್ದ ನ್ಯಾಯಾಂಗ ನಿಂದನೆಯ ಆರೋಪದಿಂದ ಪಾರಾಗಲು ನಾಮಪತ್ರವನ್ನು ತಿರಸ್ಕರಿಸಿದ್ದ ಆದೇಶವನ್ನು ರದ್ದುಗೊಳಿಸಿ ಚುನಾವಣೆಯಲ್ಲಿ ಬಾಧಿತ ಅಭ್ಯರ್ಥಿಯ ನಾಮಪತ್ರ ಸಿಂಧು ಎಂದು ಘೋಷಿಸಲಾಯಿತು.
ಆ ಬಳಿಕ ಮತ್ತೆ ‘ಕಾಣದ ಕೈ’ಗಳ ಒತ್ತಡಕ್ಕೆ ಮಣಿದ ಚುನಾವಣಾಧಿಕಾರಿ ರಾಜೀನಾಮೆ ನೀಡಿ ಮತ್ತೊಂದು ಪ್ರಹಸನಕ್ಕೆ ದಾರಿ ಮಾಡಿಕೊಟ್ಟರು.
‘ಸಕ್ಷಮ ಪ್ರಾಧಿಕಾರ’ದ ಹೊರತಾಗಿ, ಸಂಘದ ಕಾರ್ಯದರ್ಶಿಯವರಿಂದ ನಿಯುಕ್ತರಾದ ನೂತನ ಚುನಾವಣಾಧಿಕಾರಿಯವರು ಅಧಿಕಾರ ಸ್ವೀಕರಿಸಿದ್ದಲ್ಲದೆ, 16-11-2024ರಂದು ನಡೆಯಬೇಕಿದ್ದ ನ್ಯಾಯಾಂಗ ಇಲಾಖೆಯ ಚುನಾವಣೆಯನ್ನು ಮುಂದೂಡಿ ಆದೇಶ ಹೊರಡಿಸಿದ್ದರು.
ಇದರಿಂದ ಬಾಧಿತರಾದ ನ್ಯಾಯಾಂಗ ಇಲಾಖೆಯ ಮತ್ತೊಬ್ಬ ಅಭ್ಯರ್ಥಿಯವರು ಮತ್ತೆ ನ್ಯಾಯಾಲಯದ ಕದ ಬಡಿದರು. ಈ ಪ್ರಕರಣವನ್ನು ದಾಖಲಿಸಿದ ಮಾನ್ಯ ನ್ಯಾಯಾಲಯ ದಿನಾಂಕ 26-11-2024ರೊಳಗೆ ಚುನಾವಣಾ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸುವಂತೆ ಆದೇಶ ಹೊರಡಿಸಿದೆ.
ಈ ಮೂಲಕ ಹಲವು ತಿರುವುಗಳನ್ನು ಪಡೆದುಕೊಂಡ ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣಾ ಕಾನೂನಾತ್ಮಕ ಹೋರಾಟದ ವೇದಿಕೆಯಾಗಿ ಪರಿಣಮಿಸಿದ್ದು, ನ್ಯಾಯಾಲಯದ ಆದೇಶದ ಪಶ್ಚಾತ್ ಘಟನೆಗಳ ಬಗ್ಗೆ ವ್ಯಾಪಕ ಕುತೂಹಲ ಕೆರಳಿಸಿದೆ.