LATEST NEWS
ಕರಾವಳಿಯಲ್ಲಿ ಸುಡು ಬಿಸಿಲು – ಮೊಡ ಕವಿದ ವಾತಾವರಣದ ಜೊತೆ ವಿಪರೀತ ಸೆಕೆ

ಮಂಗಳೂರು ಫೆಬ್ರವರಿ 21:ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಉರಿ ಬಿಸಿಲು ಕಾಣಿಸಿಕೊಂಡಿದೆ. ಬಿಸಿಲಿನ ಜೊತೆ ಮೊಡ ಕವಿದವ ವಾತಾವರಣವಿದ್ದು, ತೇವಾಂಶ ಹೆಚ್ಚಾದ ಕಾರಣ ಮೇ ತಿಂಗಳ ಬಿಸಿಲಿನ ಝಳ ಈ ಬಾರಿ ಫೆಬ್ರವರಿಯಲ್ಲೇ ಕಾಣಿಸಿಕೊಂಡಿದೆ.
ಕರ್ನಾಟಕದಲ್ಲಿ ಕರಾವಳಿಯಲ್ಲಿ ಈಗ ಬೇಸಿಗೆ ಕಾಲ ಪ್ರಾರಂಭವಾಗಲಿದೆ. ಇನ್ನು ಮೂರು ತಿಂಗಳು ಕರಾವಳಿಯ ಜಿಲ್ಲೆಗಳಲ್ಲಿ ಬಿಸಿಲಿನ ಹೊಡೆತ ಜೋರಾಗಿಯೇ ಇರಲಿದೆ, ಈ ಬಾರಿ ಫೆಬ್ರವರಿಯಲ್ಲೇ ಸುಡು ಬಿಸಿಲು ಪ್ರಾರಂಭವಾಗಿದ್ದು. ಇನ್ನು ಎಪ್ರಿಲ್ ಮೇ ತಿಂಗಳಿನ ಕಥೆ ಹೇಗೆ ಎನ್ನವುದು ಆತಂಕಕ್ಕೆ ಕಾರಣವಾಗಿದೆ.

ಸಾಮಾನ್ಯವಾಗಿ ಮಾರ್ಚ್ ಬಳಿಕ ಬಿಸಿಲು ಹೆಚ್ಚುತ್ತಾ ಹೋಗುತ್ತದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚಿನ ಧಗೆ ಕಂಡುಬರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಫೆಬ್ರವರಿ ತಿಂಗಳಿನಿಂದಲೇ ಸುಡು ಬಿಸಿಲು ಕಾಣಿಸಿಕೊಳ್ಳುತ್ತಿದ್ದು ಜನರು ಕಷ್ಟಪಡುತ್ತಿದ್ದಾರೆ. ಆದರೆ ಡಿಸೆಂಬರ್ ತಿಂಗಳಲ್ಲಿ ಫೆಂಗಾಲ್ ಚಂಡಮಾರುತದ ಬಳಿಕ ಜಿಲ್ಲೆಯಲ್ಲಿ ಮಳೆ ಸುರಿದಿಲ್ಲ. ಹೀಗಾಗಿ ಭೂಮಿಯಲ್ಲಿ ತೇವಾಂಶ ಕಡಿಮೆಯಾಗುತ್ತಿದ್ದು, ಹೆಚ್ಚಿನ ಬಿಸಿ ಕಂಡುಬರುತ್ತಿದೆ. ಬಿಸಿಲಿನ ತಾಪ ಹೆಚ್ಚುತ್ತಿರುವ ಹಿನ್ನೆಲೆ ಮಕ್ಕಳಲ್ಲಿಅತಿಸಾರದಂತಹ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹಿರಿಯರಿಗೂ ತಾಪಮಾನ ಹೆಚ್ಚಳದಿಂದ ತೊಂದರೆಯಾಗಬಹುದು. ಹೀಗಾಗಿ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ ಎಂಬುದು ಆರೋಗ್ಯ ತಜ್ಞರ ಸಲಹೆಯಾಗಿದೆ. ಮೋಡ ಕವಿದ ವಾತಾವರಣ ಹಾಗೂ ಬಿಸಿಲು ಹೆಚ್ಚಾಗಿರುವ ಕಾರಣ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.