LATEST NEWS
ಮಂಗಳೂರು ವಿವಿ ಗಣೇಶೋತ್ಸವ – ಪೊಲೀಸ್ ಬಂದೋಬಸ್ತ್ ಮಾಡಿ ಭಯದ ವಾತಾವರಣ ಮೂಡಿಸಿದ ಸರಕಾರ
ಮಂಗಳೂರು ಸೆಪ್ಟೆಂಬರ್ 20: ಮಂಗಳೂರು ವಿಶ್ವವಿದ್ಯಾನಿಲಯದ ಗಣೇಶೋತ್ಸವ ಈ ಹಿಂದಿನಂತೆಯೇ ಅದೇ ಸ್ಥಳದಲ್ಲಿ ಆಚರಣೆಯಾಗುವ ಮೂಲಕ ಎಲ್ಲ ಗೊಂದಲಗಳಿಗೆ ತೆರೆ ಬಿದ್ದಂತಾಗಿದೆ, ಆ ಮೂಲಕ ಇದು ಹಿಂದೂ ಸಮಾಜದ ಹೋರಾಟಕ್ಕೆ ಸಂದ ಜಯ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.
ಹಲವಾರು ದಿನಗಳಿಂದ ನಡೆದ ಎಲ್ಲ ಬೆಳವಣಿಗೆಗಳ ಮಧ್ಯೆ ವಿಶ್ವವಿದ್ಯಾನಿಲಯದ ಕುಲಪತಿಗಳು ಸರ್ಕಾರಕ್ಕೆ ಪತ್ರ ಬರೆದು ಗಣೇಶೋತ್ಸವ ಬಗ್ಗೆ ಸೂಕ್ತ ಮಾರ್ಗದರ್ಶನ ಕೋರಿದ್ದರು. ಈಗ ಕೊನೆಗೂ ಮಂಗಳಾ ಸಭಾಂಗಣದಲ್ಲಿಯೇ ವಿಘ್ನ ವಿನಾಯಕ ಪ್ರತಿಷ್ಠಾಪನೆಗೊಂಡಿರುವುದಕ್ಕೆ ವಿಶ್ವವಿದ್ಯಾನಿಲಯಕ್ಕೆ ಮತ್ತು ಇದಕ್ಕೆ ಸಹಕರಿಸಿದ ಸಮಸ್ತ ಹಿಂದೂ ಸಮಾಜಕ್ಕೆ ಧನ್ಯವಾದ ಸಲ್ಲಿಸುತ್ತೇನೆ.
ಇದರ ಮಧ್ಯೆ ಇಂತಹ ಶುಭ ಕಾರ್ಯಕ್ಕೂ ಒಬ್ಬ ಕಮ್ಯುನಿಸ್ಟ್ ನಾಯಕ ವಿಘ್ನ ಉಂಟುಮಾಡುವ ಬೆದರಿಕೆ ಹಾಕಿದ ಹಿನ್ನಲೆಯಲ್ಲಿ ಇಡೀ ಗಣೇಶೋತ್ಸವಕ್ಕೆ ಭಾರೀ ಪೊಲೀಸ್ ಬಂದೋಬಸ್ತ್ ಹಾಕಿ ಸಾಮಾನ್ಯ ಜನರಲ್ಲಿ ಭಯದ ವಾತಾವರಣ ಮೂಡಿಸಿ ಹಬ್ಬದ ಸಂಭ್ರಮವನ್ನೇ ಕಸಿದ ಸರ್ಕಾರದ ನಡೆಯನ್ನು ಖಂಡಿಸುತ್ತೇನೆ. ಅದರ ಬದಲು, ಬೆದರಿಕೆ ಹಾಕಿದ್ದ ಆ ಕಮ್ಯುನಿಸ್ಟ್ ವ್ಯಕ್ತಿಯನ್ನು ಠಾಣೆಗೆ ಕರೆಯಿಸಿ ಹದ್ದು ಬಸ್ತಿನಲ್ಲಿರುವಂತೆ ಪೊಲೀಸರ ಮೂಲಕ ಖಡಕ್ ಸೂಚನೆ ನೀಡಬೇಕಿತ್ತು.
ಈ ಬಾರಿಯ ಗಣೇಶನ ಮೂರ್ತಿ ಚಿಕ್ಕದಾಗಿ ಕಿರೀಟವೇ ದೊಡ್ಡದಾಗಿದ್ದಲ್ಲದೇ ಕೆಲವೊಂದು ವ್ಯವಸ್ಥೆಗಳು ಈ ಹಿಂದಿನಂತೆ ಇಲ್ಲದಿದ್ದರ ಬಗ್ಗೆ ಹಲವರು ನನ್ನ ಗಮನಕ್ಕೆ ತಂದಿದ್ದಾರೆ. ಮುಂದಿನ ಬಾರಿಯಾದರೂ ಈ ಹಿಂದಿನ ಗಾತ್ರದ್ದೇ ಗಣೇಶನ ಮೂರ್ತಿ ಹಾಗೂ ಅದಕ್ಕೆ ಸರಿ ಹೊಂದುವ ಎಲ್ಲಾ ಅಚ್ಚುಕಟ್ಟಾದ ವ್ಯವಸ್ಥೆಗಳ ಬಗ್ಗೆ ಹೆಚ್ಚಿನ ಗಮನಹರಿಸಿ ಯಾವುದೇ ಗೊಂದಲಕ್ಕೆ ಆಸ್ಪದ ಇಲ್ಲದಂತೆ ಇಡೀ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು- ಸಿಬ್ಬಂದಿಗಳು-ಸ್ಥಳೀಯರು ಸೇರಿಕೊಂಡು ಸೌಹಾರ್ದಯುತವಾಗಿ ವಿಜೃಂಭಣೆಯಿಂದ ಗಣೇಶೋತ್ಸವವನ್ನು ಆಚರಿಸುವಂತ ವಾತಾವರಣ ಸೃಷ್ಟಿಯಾಗಲಿ ಎಂದು ಸರ್ವ ಶಕ್ತ ಗಣೇಶನಲ್ಲಿ ಪ್ರಾರ್ಥಿಸುತ್ತೇನೆ ಎಂದು ಶಾಸಕರು ಹೇಳಿದರು