LATEST NEWS
ಮಂಗಳೂರು : ಪಂಜಿಮೊಗರಿನಲ್ಲಿ ಗುಡ್ಡಕುಸಿತದ ಭೀತಿ, ಪ್ರಾಣ ಭಯದದಲ್ಲಿ ಬಡಕುಟುಂಬ..!
ಮಂಗಳೂರು : ಕಳೆದ ಮೂರು ದಿನಗಳಿಂದ ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಿಂದ ಭಾರಿ ಪ್ರಮಾಣದಲ್ಲಿ ಆಸ್ತಿ ಪಾಸ್ತಿ ನಷ್ಟ ಉಂಟಾಗಿದ್ದು ಮಂಗಳೂರಿನ ಪಂಜಿಮೊಗರುವಿನಲ್ಲಿ ಬಡ ಕುಟುಂಬಕ್ಕೆ ಗುಡ್ಡ ಕುಸಿತದ ಭೀತಿ ಎದುರಾಗಿದೆ.
ಭಾರಿ ಮಳೆಗೆ ಜಿಲ್ಲೆಯಲ್ಲಿ ಈಗಾಗಲೇ ಹಲವರು ಜೀವ ಕಳಕೊಂಡಿದ್ದಾರೆ. 20 ಕ್ಕೂ ಅಧಿಕ ಮನೆಗಳಿಗೆ ಭಾರಿ ಪ್ರಮಾಣದ ಹಾನಿಯಾಗಿದೆ. ಇನ್ನೂ ಆನೇಕ ಮನೆಗಳು ಕುಸಿಯುವ ಭೀತಿಯಲ್ಲಿವೆ. ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯ ಪಂಜಿಮೊಗರು ವಿದ್ಯಾನಗರದಲ್ಲಿ ಬಡ ಕುಟುಂಬವೊಂದು ಮಳೆಯಿಂದ ಗುಡ್ಡ ಕುಸಿತದ ಭೀತಿಯಲ್ಲಿ ದಿನದೂಡುತ್ತಿದೆ.
ಗೌರಿ ಎಂಬ ಬಡ ಮಹಿಳೆಯ ಕುಟುಂಬ ಇಲ್ಲಿನ ಕುಸಿಯುತ್ತಿರುವ ಗುಡ್ಡದ ಪಕ್ಕದಲ್ಲೇ ವಾಸಿಸುತ್ತಿದ್ದು ಈಗಾಗಲೇ ಮಣ್ಣು ಕುಸಿಯಲಾರಂಭಿಸಿದ್ದು, ಕುಟುಂಬ ಪ್ರಾಣ ಭಯದ ಭೀತಿಯಲ್ಲೇ ದಿನದೂಡುತ್ತಿದೆ. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಯವರಿಗೆ ಲಿಖಿತ ಮನವಿ ಸಲ್ಲಿಸಿದ್ದು ಪ್ರಾಣ ಹಾನಿಯ ಭೀತಿಯಿದ್ದು ಕೂಡಲೇ ಕ್ರಮಕ್ಕಾಗಿ ಮನವಿ ಮಾಡಿದ್ದಾರೆ. ಕಳೆದ ಬಾರಿಯೂ ಈ ಪ್ರದೇಶದಲ್ಲಿ ಗುಡ್ಡ ಕುಸಿತ ಉಂಟಾಗಿತ್ತು ಬೇರೆ ದಾರಿ ಕಾಣದ ಕುಟುಂಬ ಇದೀಗ ಜಿಲ್ಲಾಡಳಿತದ ತುರ್ತು ಕ್ರಮಕ್ಕೆ ಕಾಯುತ್ತಿದೆ.