LATEST NEWS
ಮಂಗಳೂರಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಡ್ರಗ್ ಫೆಡ್ಲರ್ ನೈಜೇರಿಯಾ ಪ್ರಜೆ ಅರೆಸ್ಟ್
ಮಂಗಳೂರು ಡಿಸೆಂಬರ್ 18: ಗೋವಾದಿಂದ ಮಂಗಳೂರಿಗೆ ಕೋಕೇನ್ ಪೂರೈಸುತ್ತಿದ್ದ ನೈಜೇರಿಯಾ ಪ್ರಜೆಯನ್ನು ಮಂಗಳೂರು ಸಿಸಿಬಿ ಪೊಲೀಸರು ಗೋವಾದಲ್ಲಿ ಅರೆಸ್ಟ್ ಮಾಡಿದ್ದಾರೆ. ಉತ್ತರ ಗೋವಾದಲ್ಲಿ ವಾಸವಿದ್ದ ನೈಜೀರಿಯಾ ಪ್ರಜೆ ಮೈಕಲ್ ಒಕಾಫರ್ ಒಡಿಕೊ (44 ವರ್ಷ) ಬಂಧಿತ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಯಿಂದ 30 ಗ್ರಾಂ ಕೊಕೇನ್ ವಶಪಡಿಸಿಕೊಂಡಿದ್ದಾರೆ.
ನಗರಕ್ಕೆ ಗೋವಾದಿಂದ ಕೊಕೇನ್ ತಂದು ಮಾರಾಟ ಮಾಡುತ್ತಿದ್ದ ಆರೋಪಿಗಳಾದ ಸದಕತ್.ಯು ಅಲಿಯಾಸ್ ಶಾನ್ ನವಾಜ್ ಮತ್ತು ಮಹಮ್ಮದ್ ಅಶ್ವಾಕ್ ಅಲಿಯಾಸ್ ಅಶ್ನಾ ಎಂಬುವರನ್ನು ಸಿಸಿಬಿ ಪೊಲೀಸರು 2024ದ ಮಾರ್ಚ್‌ನಲ್ಲಿ ಅಂಬ್ಲಮೊಗರು ಗ್ರಾಮದ ಎಲ್ಯಾರ್ ಪದವು ಮೈದಾನದ ಬಳಿಯಲ್ಲಿ ಬಂಧಿಸಿದ್ದರು.
ಆರೋಪಿಗಳಿಂದ 34 ಗ್ರಾಂ ಕೊಕೇನ್ ಸೇರಿದಂತೆ ಒಟ್ಟು ₹2.72 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದರು. ಆರೋಪಿಗಳಿಗೆ ಗೋವಾದ ಡ್ರಗ್ ಪೆಡ್ಲರ್ ಕೊಕೇನ್ ಪೂರೈಸಿದ್ದ ಕುರಿತು ಮಾಹಿತಿ ಸಂಗ್ರಹಿಸಿದ್ದ ಪೊಲೀಸರು ಉತ್ತರ ಗೋವಾದ ಕಾಲನ್ ಗೂಟ್ ಎಂಬಲ್ಲಿ ಆರೋಪಿ ಮೈಕಲ್ ಒಕಾಫರ್ ಒಡಿಕೊನನ್ನು ಬಂಧಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ. ‘ಆರೋಪಿಯಿಂದ 30 ಗ್ರಾಂ ಕೋಕೇನ್ ಜೊತೆಗೆ, ಬಲೆನೊ ಕಾರು, ಎರಡು ಮೊಬೈಲ್ ಫೋನ್‌ಗಳು, ₹ 4500 ನಗದು, ಡಿಜಿಟಲ್ ಮಾಪಕವನ್ನ ವಶಪಡಿಸಿಕೊಳ್ಳಲಾಗಿದೆ.
ಭಾರತಕ್ಕೆ ವ್ಯಾಪಾರದ ವೀಸಾದಲ್ಲಿ 2012ರಲ್ಲಿ ಬಂದಿದ್ದ ಆರೋಪಿಯು ಮುಂಬೈಯಲ್ಲಿ ಒಂದೂವರೆ ವರ್ಷ ವಾಸವಿದ್ದ. ಬಳಿಕ ಗೋವಾದಲ್ಲಿ ನೆಲೆಸಿ ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದ. ಆತನ ವಿರುದ್ಧ ಮಾದಕ ವಸ್ತು ಮಾರಾಟ ಸಂಬಂಧ ಗೋವಾದಲ್ಲಿ 3 ಪ್ರಕರಣಗಳು ದಾಖಲಾಗಿವೆ