DAKSHINA KANNADA
ಮಂಗಳೂರು : ಮಾರುಕಟ್ಟೆಯಲ್ಲಿ ಈರುಳ್ಳಿಗೆ ಬರ – ಏರುತ್ತಿರುವ ದರ ಶತಕದತ್ತ, ಗ್ರಾಹಕ ಸಂಕಷ್ಟದಲ್ಲಿ..!
ಮಂಗಳೂರು : ಕಳೆದ ಕೆಲವು ದಿನಗಳಿಂದ ಈರುಳ್ಳಿ ದರ ಗಣನೀಯವಾಗಿ ಗಗನಕ್ಕೇರುತ್ತಿದ್ದು, ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. 40 ರಿಂದ 50 ರೂ.ನಷ್ಟಿದ್ದ ಈರುಳ್ಳಿ ಬೆಲೆ (Onion Price) ಸಗಟು ಮಾರುಕಟ್ಟೆಯಲ್ಲಿ 70 ರಿಂದ 80 ರೂ.ಗಳಿಗೆ ಏರಿಕೆಯಾಗಿದೆ.
ಈರುಳ್ಳಿ ಬೆಲೆ ಏರಿಕೆ ಕಂಡಿರುವುದು ರೈತರಿಗೆ ಖುಷಿ ತಂದರೆ, ಗ್ರಾಹಕರಿಗೆ ಕಣ್ಣೀರು ತರಿಸುವಂತಾಗಿದೆ. ಬೆಂಗಳೂರು, ದೆಹಲಿ ಮತ್ತು ಮುಂಬೈನಂತಹ ಮೆಟ್ರೋ ನಗರಗಳಲ್ಳೂ (Metro Cities), ಪ್ರತಿ ಕೆಜಿ ಈರುಳ್ಳಿ ಬೆಲೆ ನವೆಂಬರ್‌ನಲ್ಲಿ 80 ರೂ.ಗಳಿಗೆ ತಲುಪಿದೆ. ಕಳೆದ 5 ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದಂತಾಗಿದೆ. ಮುಂದಿನ ದಿನಗಳಲ್ಲಿ 100 ರ ಗಡಿ ದಾಟುವ ಸಾಧ್ಯತೆ ಇದೆ.
ಈ ಬಾರಿ ಇಳುವರಿ ಕಡಿಮೆಯಾಗಿರುವುದು, ಅಕಾಲಿಕ ಮಳೆ, ಗುಣಮಟ್ಟದ ಈರುಳ್ಳಿ ಕೊರತೆ ಮತ್ತು ಸರಬರಾಜಿನಲ್ಲಿ ಉಂಟಾದ ಏರುಪೇರು ಹಾಗೂ ರಫ್ತಿಗೆ ಹೆಚ್ಚಿದ ಬೇಡಿಕೆಯಿಂದಾಗಿ ಬೆಲೆ ಗಗನಕ್ಕೇರಿದೆ. ಮತ್ತೊಂದು ಕಡೆ ಆಲೂಗಡ್ಡೆಯ ಬೆಲೆಯೂ ನಿಧಾನವಾಗಿ ಏರುತ್ತಿದೆ. ಸದ್ಯಕ್ಕೆ ಏರಿಕೆ ಕಂಡಿದ್ದ ಟೊಮೆಟೊ ಬೆಲೆ ಮಾತ್ರ ಇಳಿಯುತ್ತಿದೆ. ಬೆಂಗಳೂರಿನಲ್ಲೂ ಈರುಳ್ಳಿ ಬೆಲೆ ಏರುತ್ತಿದ್ದು, ಕಳೆದ ಮೂರು ದಿನಗಳಲ್ಲಿ ಪ್ರತಿ ಕೆಜಿಗೆ 20-30 ರೂಪಾಯಿವರೆಗೆ ಹೆಚ್ಚಳವಾಗಿದ್ದು, ಕೆಜಿ ಈರುಳ್ಳಿ ಬೆಲೆ 80 ರೂಪಾಯಿ ಆಸುಪಾಸಿನಲ್ಲಿದೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮಾರಾಟಗಾರರೊಬ್ಬರು, ʻಈರುಳ್ಳಿ ಬೆಲೆ ಪ್ರತಿ ಕೆಜಿಗೆ 60 ರಿಂದ 70, 80 ರೂ.ಗಳಿಗೆ ಏರಿಕೆಯಾಗಿದೆ. ನಾವು ಮಾರಾಟ ಮಾಡಲು ಮಂಡಿಯಿಂದ ಪಡೆಯುತ್ತಿವೆ. ಅಲ್ಲಿ ಪಡೆಯುವ ಬೆಲೆ ಹಾಗೂ ಮಾರಾಟ ಮಾಡುವ ಬೆಲೆಗಳಿಗೆ ವ್ಯತ್ಯಾಸ ಇರುತ್ತದೆ. ಸಾಮಾನ್ಯವಾಗಿ ಬೆಲೆ ಏರಿಕೆಯಾದಂತೆ ಕೊಳ್ಳುವವರ ಸಂಖ್ಯೆ ಇಳಿಕೆಯಾಗುತ್ತಿತ್ತು. ಆದ್ರೆ ಈರುಳ್ಳಿ ಅಗತ್ಯ ವಸ್ತುಗಳಲ್ಲಿ ಒಂದಾಗಿರುವುದರಿಂದ ಜನರು ಖರೀದಿಸಲೇಬೇಕಾದ ಅನಿವಾರ್ಯತೆ ಬಂದೊದಗಿದೆ. ಇದು ಮನೆಯ ಆರ್ಥಿಕ ನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಸರ್ಕಾರ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
https://youtu.be/H6NKZBqUS9U