LATEST NEWS
ಕೋಲ್ಕತ ವೈದ್ಯೆಯ ಅತ್ಯಾಚಾರ ಹತ್ಯೆ ಖಂಡಿಸಿ ಮಂಗಳೂರಿನಲ್ಲಿ ವೈದ್ಯರ ಪ್ರತಿಭಟನೆ

ಮಂಗಳೂರು ಅಗಸ್ಟ್ 17: ಪಶ್ಚಿಮಬಂಗಾಳದಲ್ಲಿ ನಡೆದ ವೈದ್ಯವಿಧ್ಯಾರ್ಥಿನಿಯ ಮೇಲಿನ ಅತ್ಯಾಚಾರ ಕೊಲೆ ಪ್ರಕರಣ ಖಂಡಿಸಿ ಮಂಗಳೂರಿನಲ್ಲಿ ವೈದ್ಯರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಭಾರತೀಯ ವೈದ್ಯರ ಸಂಘದ ಜಿಲ್ಲಾ ಘಟಕದ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿಗೆ ಶಾಂತಿಯುತ ನಡಿಗೆಯಲ್ಲಿ ಸಾಗಿದರು. ವೈದ್ಯರು, ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು, ಇತರ ಸಿಬಂದಿ ಸೇರಿ ಎರಡು ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಸಾಥ್ ಕೊಟ್ಟರು. ಪ್ರತಿಭಟನೆಯಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಕೂಡ ಸಾಥ್ ನೀಡಿದರು.

ಪ್ರತಿಭಟನೆ ಜಾಥಾ ವೇಳೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಲು ಯತ್ನಿಸಿದ ಪ್ರತಿಭಟನಾಕಾರನ್ನು ಪೊಲೀಸರು ತಡೆ ಹಾಕಿ, ಹತ್ತು ಮಂದಿಗಷ್ಟೇ ಜಿಲ್ಲಾಧಿಕಾರಿ ಬಳಿಗೆ ಹೋಗಲು ಅವಕಾಶ ನೀಡುತ್ತೇವೆಂದು ಹೇಳಿದರು. ಈ ವೇಳೆ, ಶಾಸಕರು ಮತ್ತು ವೈದ್ಯಕೀಯ ಸಂಘದ ಪ್ರತಿನಿಧಿಗಳು ಹಾಗೂ ಪೊಲೀಸರ ನಡುವೆ ಕೆಲಹೊತ್ತು ಮಾತುಕತೆ ನಡೆಯಿತು. ಶಾಸಕರು ನಾವೆಲ್ಲ ಒಳಗಡೆ ಬರುತ್ತೇವೆ ಎಂದಾಗ, ಡಿಸಿಪಿ ಸಿದ್ಧಾರ್ಥ ಗೋಯಲ್ ಅವಕಾಶ ನೀಡಲಿಲ್ಲ. ಬಳಿಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸ್ಥಳಕ್ಕೆ ಬಂದು ವೈದ್ಯರ ಸಂಘದ ಮನವಿಯನ್ನು ಸ್ವೀಕರಿಸಿದರು.