Connect with us

    LATEST NEWS

    ವೈಭವದ ಶೋಭಾಯಾತ್ರೆಯೊಂದಿಗೆ ಮಂಗಳೂರು ದಸರಾಕ್ಕೆ ತೆರೆ

    ಮಂಗಳೂರು ಅಕ್ಟೋಬರ್ 14: ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಕಳೆದ 10 ದಿನಗಳಿಂದ ನಡೆಯುತ್ತಿದ್ದ ಮಂಗಳೂರು ದಸರಾ ಕಾರ್ಯಕ್ರಮಕ್ಕೆ ತೆರೆ ಬಿದ್ದಿದೆ.


    ಝಗಮಗಿಸುವ ವಿದ್ಯುದ್ದೀಪಗಳಿಂದ ಸಿಂಗಾರಗೊಂಡ ಮಂಟಪದಲ್ಲಿ ವಿರಾಜಮಾನವಾಗಿದ್ದ ಶಾರದೆ, ನವದುರ್ಗೆಯರ ಮನಮೊಹಕ ಮೂರ್ತಿಗಳು ನಗರದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ಮೂಲಕ ಸಾಗಿ ಬಂದಿದ್ದು, ದೃಶ್ಯಗಳನ್ನು ಕಣ್ತುಂಬಿಕೊಂಡ ಭಕ್ತರು ಮೂಕವಿಸ್ಮಿತರಾದರು. ಕುದ್ರೋಳಿ ಕ್ಷೇತ್ರದಲ್ಲಿ ಹತ್ತು ದಿನಗಳ ಕಾಲ ಪೂಜೆಗೊಂಡ ಗಣಪತಿ, ನವದುರ್ಗೆಯರ ಮೂರ್ತಿಗಳ ಶೋಭಾಯಾತ್ರೆ ನಡೆಯಿತು.


    ಮುಡಿ ತುಂಬಾ ಮಲ್ಲಿಗೆ ಮುಡಿದು, ಕರದಲ್ಲಿ ಬೆಳ್ಳಿಯ ವೀಣೆಯ ಹಿಡಿದು ಬಗೆ ಬಗೆಯ ಬಂಗಾರದ ಒಡವೆಗಳಿಂದ ಸಿಂಗಾರಗೊಂಡಿದ್ದ ಹೊಳಪು ಕಂಗಳ ಶಾರದೆಯನ್ನು ನೋಡಲು ಭಕ್ತರು ಹಾತೊರೆಯುತ್ತಿದ್ದರು. ಗಣಪತಿ, ಆದಿಶಕ್ತಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಿನಿ, ಸ್ಕಂದಮಾತಾ, ಕಾತ್ಯಾಯಿನಿ, ಮಹಾಗೌರಿ, ಮಹಾಕಾಳಿ, ಸಿದ್ಧಿಧಾತ್ರಿ, ಶೈಲಪುತ್ರಿ ಮೂರ್ತಿಗಳು ಒಂದರ ಹಿಂದೆ ಒಂದಾಗಿ ಸಾಗಿ ಬರುವ ದೃಶ್ಯಗಳನ್ನು ಭಕ್ತರು ಮನ ತುಂಬಿಕೊಂಡರು.


    ಬಣ್ಣದ ಕೊಡೆಗಳು, ನಗಾರಿ, ಗೊಂಡ ಡಕ್ಕೆ, ಕೊಂಬು–ಕಹಳೆ, ಡೊಳ್ಳು ಕುಣಿತ, ಕಂಗೀಲು, ತಮಟೆ, ವೀರಗಾಸೆ, ಹಗಲು ವೇಷ, ಕುರುಬರ ಡೊಳ್ಳು ಮೊದಲಾದ ಕಲಾ ತಂಡಗಳು ದಸರಾ ಶೋಭಾಯಾತ್ರೆಯ ವಿಶೇಷ ಮೆರುಗು ತುಂಬಿದವು. ಮಂಗಳೂರು ದಸರಾದ ಸೊಬಗನ್ನು ವೈವಿಧ್ಯಮಯ ಟ್ಯಾಬ್ಲೊಗಳು ಮತ್ತಷ್ಟು ಹೆಚ್ಚಿಸಿದವು. ಪೌರಾಣಿಕ ಕಥಾನಕಗಳನ್ನು ಸಾರುವ ಸ್ತಬ್ಧ ಚಿತ್ರಗಳ ವೈಭವಕ್ಕೆ ಜನ ಮಾರು ಹೋದರು.

    ಶಿವಫ್ರೆಂಡ್ಸ್‌, ಗ್ರೀನ್‌ ಪಾರ್ಕ್‌ ಜ್ಯೂನಿಯರ್‌ ಬಾಯ್ಸ್‌, ಬಲ್ಲಾಳ್‌ಬಾಗ್‌ ಫ್ರೆಂಡ್ಸ್‌, ಸತ್ಯ ಸಾರಾಮಾನಿ, ಯುವ ಸಂಗಮ್‌ ಕುದ್ರೋಳಿ, ಬಿರುವೆರ್‌ ಕುಡ್ಲ, ಕುಡ್ಲ ಬ್ರದರ್ಸ್‌ ಪಾಂಡೇಶ್ವರ, ಪಾದುವಾ ಫ್ರೆಂಡ್ಸ್‌ ಸೇರಿದಂತೆ ವಿವಿಧ ತಂಡಗಳು, ಸಂಘ ಸಂಸ್ಥೆಗಳ ಸ್ತಬ್ಧಚಿತ್ರಗಳು ಗಮನ ಸೆಳೆದವು.


    ಹುಲಿವೇಷ ಮಂಗಳೂರು ದಸರಾದ ವಿಶೇಷ ಆಕರ್ಷಣೆ. ವಾಹನ ಮೇಲೆಯೇ ನಾನಾ ಕಸರತ್ತು ಪ್ರದರ್ಶಿಸಿದ ಹುಲಿವೇಷಗಳ ಅಬ್ಬರ ದಸರಾ ಮೆರವಣಿಗೆಯು ನೆನಪಿನಂಗಳದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿತು.

    Share Information
    Advertisement
    Click to comment

    You must be logged in to post a comment Login

    Leave a Reply