Connect with us

DAKSHINA KANNADA

ಮಂಗಳೂರು: ಪೆಟ್ರೋಲ್‌- ಎಲೆಕ್ಟ್ರಿಕಲ್‌ ಆಟೋ ಚಾಲಕರ ನಡುವೆ ಪಾರ್ಕಿಂಗ್ ವಿಷಯದಲ್ಲಿ ಸಂಘರ್ಷ..!

ಮಂಗಳೂರು, ಮಾರ್ಚ್ 03 : ನಿಗದಿತ ಬಣ್ಣವನ್ನು ಬಳಿಯದ ಮತ್ತು ವಲಯ ಸಂಖ್ಯೆಯನ್ನು ನಮೂದಿಸದಿರುವ ಇ-  ಆಟೋ ರಿಕ್ಷಾಗಳಿಗೆ ರಿಕ್ಷಾ ತಂಗುದಾಣಗಳಲ್ಲಿ ನಿಲುಗಡೆಗೆ ಅವಕಾಶ ನೀಡ ಬಾರದೆಂದು ಪೆಟ್ರೋಲ್‌ ಚಾಲಿತ ಆಟೋ ರಿಕ್ಷಾ ಚಾಲಕರು ಮಂಗಳೂರಿನ ಕೆಲವು ಪ್ರಮುಖ ರಿಕ್ಷಾ ಪಾರ್ಕ್ ಗಳಲ್ಲಿ ಫಲಕವನ್ನು ಹಾಕಿದ್ದು, ಇದು ಇ-  ಆಟೋ ರಿಕ್ಷಾ ಚಾಲಕರು ಮತ್ತು ಪೆಟ್ರೋಲ್‌ ಚಾಲಿತ ರಿಕ್ಷಾ ಚಾಲಕರ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ.

ಇಂದು ಇ-  ಆಟೋ ರಿಕ್ಷಾ ಚಾಲಕರು ತಮ್ಮ ವಾಹನಗಳನ್ನು ನಿಲುಗಡೆ ಮಾಡಲು ಪಾರ್ಕ್‌ ಗಳಿಗೆ ಕೊಂಡೊಯ್ದಾಗ ಅಲ್ಲಿದ್ದ ಪೆಟ್ರೋಲ್‌ ಚಾಲಿತ ರಿಕ್ಷಾ ಚಾಲಕರು ಪಾರ್ಕಿಂಗ್‌ ಮಾಡಲು ನಿರಾಕರಿಸಿದ್ದು, ಇದು ಚಾಲಕರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.

ಬಳಿಕ ಇ- ಆಟೋ ಚಾಲಕರು ಆರ್‌ಟಿಒ ಕಚೇರಿ ಬಳಿ ಒಟ್ಟು ಸೇರಿ ಚರ್ಚಿಸಿ ಪೊಲೀಸ್‌ ಆಯುಕ್ತರ ಕಚೇರಿಗೆ ತೆರಳಿದರು. ನಾವು ರಿಕ್ಷಾಗಳಿಗೆ ವಲಯ ಸಂಖ್ಯೆ ನಮೂದಿಸಲು ಸಿದ್ಧರಿದ್ದೇವೆ. ಆದರೆ ಅದನ್ನು ಬರೆಯುವವರು ಯಾರು? ಪೊಲೀಸರೇ ಬರೆಯುವ ವ್ಯವಸ್ಥೆ ಮಾಡ ಬೇಕು ಎಂದು ಇ-  ಆಟೋ ರಿಕ್ಷಾ ಚಾಲಕ ಪ್ರಕಾಶ್‌ ವಿ.ಎನ್‌. ತಿಳಿಸಿದರು.

ಕೇಂದ್ರ ಸರಕಾರ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಇ-  ಆಟೋ ರಿಕ್ಷಾಗಳಿಗೆ ಪ್ರೋತ್ಸಾಹ ನೀಡಿದೆ. ಸಾಲ ಪಡೆದು ನಾವು ಇ-  ಆಟೋ ರಿಕ್ಷಾ ಖರಿಸಿದ್ದೇವೆ. ನಮಗೆ ದುಡಿಯಲು ಅವಕಾಶ ಮಾಡಿ ಕೊಡಿ ಎಂದು ಗೌರವಾಧ್ಯಕ್ಷ ಅವಿಲ್‌ ಮನವಿ ಮಾಡಿದರು. ಮಂಗಳೂರು ನಗರದಲ್ಲಿ ಸುಮಾರು 700 ಇ-  ಆಟೋ ರಿಕ್ಷಾ ಮತ್ತು 7 ಸಾವಿರ ಪೆಟ್ರೋಲ್‌ ಚಾಲಿತ ರಿಕ್ಷಾಗಳಿವೆ.

ಎಲ್ಲಾ  ಆಟೋ ರಿಕ್ಷಾಗಳಿಗೆ ಕಪ್ಪು ಹಳದಿ ಬಣ್ಣ ಬಳಿಯುವ ಹಾಗೂ ವಲಯ ಸಂಖ್ಯೆಯನ್ನು ನಮೂದಿಸುವ ಪ್ರಕ್ರಿಯೆಯನ್ನು 2022 ನವೆಂಬರ್‌ 25 ರೊಳಗೆ ಪೂರ್ತಿಗೊಳಿಸುವಂತೆ 2022 ಅಕ್ಟೋಬರ್‌ 27ರಂದು ನಡೆದ ಆರ್‌ಟಿಎ ಸಭೆಯಲ್ಲಿ ಸೂಚಿಸಲಾಗಿತ್ತು ಆದ್ರೆ ಅದನ್ನು ಜಾರಿಗೆ ತರದ ಕಾರಣ ಸಂಘರ್ಷದ ವಾತಾವರಣ ನಿರ್ಮಾಣವಾಗಿತ್ತು.

ಇತ್ತಂಡಗಳ ಪ್ರಮುಖರನ್ನು ಕರೆಸಿ ಮಾತುಕತೆ ನಡೆಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಗೊಂದಲ ಪರಿಹರಿಸುವ ಕಾರ್ಯ ಮಾಡಿದರು. ಮಂಗಳೂರು ಪೊಲೀಸ್‌ ಅಯುಕ್ತರ ಕಚೇರಿಯಲ್ಲಿ ಇಂದು ನಡೆದ ಮಾತುಕತೆಯ ವೇಳೆ ಈ ಕುರಿತು ನಿರ್ಣಯಿಸಲಾಯಿತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *