DAKSHINA KANNADA
ಮಂಗಳೂರು ನಗರದ ಮಾರುಕಟ್ಟೆಗಳು ಈಗ ರೋಗ ಹರಡುವ ಕೇಂದ್ರಗಳು ; ಸಂತೋಷ್ ಬಜಾಲ್

ಮಂಗಳೂರು : ಮಂಗಳೂರು ನಗರದ ಉರ್ವಸ್ಟೋರ್ ಮಾರುಕಟ್ಟೆ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ಮೂಗು ಬಿಡದಂತಹ ಸ್ಥಿತಿ ನಿರ್ಮಾಣಗೊಂಡಿದೆ. ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ತೆರೆದ ಚರಂಡಿಗಳಿಂದಾಗಿ ದುರ್ನಾತ ಬೀರುವ ಈ ಮಾರುಕಟ್ಟೆಯಲ್ಲಿ ಸೃಷ್ಟಿಯಾದ ರೋಗಗಳಿಗೆ ಸಣ್ಣ ಪುಟ್ಟ ವ್ಯಾಪಾರಿಗಳು ಅನಾರೋಗ್ಯದಿಂದ ಬಳಲಿ ಮನೆ ಸೇರಿದ್ದಾರೆ.
ಇವತ್ತು ನಗರದ ಬಹುತೇಕ ಮಾರುಕಟ್ಟೆಗಳು ವ್ಯಾಪಾರ ಕೇಂದ್ರಗಳಿಗಿಂತಲೂ ರೋಗ ಹರಡುವ ಕೇಂದ್ರಗಳಾಗಿ ಮಾರ್ಪಟ್ಟಿದೆ ಇದು ಬಿಜೆಪಿ ಆಡಳಿತ ಕೊಡುಗೆ ಎಂದು ಡಿವೈಎಫ್ಐನ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಸೋಮವಾರ ಡಿವೈಎಫ್ಐ ಉರ್ವಸ್ಟೋರ್ ಘಟಕದ ನೇತ್ರತ್ವದಲ್ಲಿ ಉರ್ವಸ್ಟೋರ್ ಮಾರುಕಟ್ಟೆಯನ್ನು ಮೇಲ್ದರ್ಜೆಗೇರಿಸಲು ಹಾಗೂ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಒತ್ತಾಯಿಸಿ ಉರ್ವಸ್ಟೋರ್ ಮಾರುಕಟ್ಟೆ ಮುಂಭಾಗ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ನಗರದ ಬಹುಮುಖ್ಯ ಕೇಂದ್ರ ಹಾಗೂ ಪಾಲಿಕೆ ಕಚೇರಿಯ ಕೆಲವೇ ಅಂತರದಲ್ಲಿರುವ ಉರ್ವಸ್ಟೋರ್ ಮಾರುಕಟ್ಟೆಯನ್ನು ಅಭಿವೃದ್ಧಿಗೊಳಿಸಲು ಪಾಲಿಕೆ ಆಡಳಿತಕ್ಕೆ ಈವರೆಗೂ ಸಾಧ್ಯವಾಗಿಲ್ಲ. ಪೊಲೀಸ್ ಸ್ಟೇಷನ್ ಸಹಿತ ಹಲವಾರು ಸರಕಾರಿ ಕೇಂದ್ರಗಳಿರುವ ಮತ್ತು ಸದಾ ಜನನಿಬಿಡ ಪ್ರದೇಶವಾಗಿರುವ ಉರ್ವಸ್ಟೋರ್ ನಲ್ಲಿ ಮಾರುಕಟ್ಟೆಯ ಅಭಿವೃದ್ಧಿಯನ್ನು ಕಡೆಗಣಿಸಿದ್ದು ಮಾತ್ರವಲ್ಲ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಲು ಸಾಧ್ಯವಾಗದೆ ಇರುವ ನಡೆ ಈ ಭಾಗದ ಶಾಸಕನ ಬೇಜವಾಬ್ದಾರಿಯ ಪರಮಾವಧಿ ಅಷ್ಟೇ. ನಗರದ ತೆರಿಗೆ ಹಣದಲ್ಲಿ ಈವರೆಗೆ ನಿರ್ಮಿಸಿದ ಸೆಂಟ್ರಲ್, ಸುರತ್ಕಲ್ ಮಾರುಕಟ್ಟೆ ಈವರೆಗೂ ಪೂರ್ಣಗೊಂಡಿಲ್ಲ. ಉರ್ವ, ಬಿಜೈನಂತಹ ನಿರ್ಮಾಣಗೊಂಡಿರುವ ಇತರೆ ಮಾರುಕಟ್ಟೆಗಳು ಬಳಕೆಗೆ ಯೋಗ್ಯವಾಗದೆ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಪಾಲಿಕೆ ಆಡಳಿತದಿಂದ ಹಿಡಿದು ಶಾಸಕರು, ಸಂಸದರು, ಪ್ರಧಾನಿ ಎಲ್ಲವೂ ಬಿಜೆಪಿ ಅಧಿಕಾರದಲ್ಲಿದೆ ಆದರೂ ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ಪಕ್ಷ ಯಾವ ಕೊಡುಗೆ ನೀಡದೆ ಇರುವುದೇ ಅವರ ಬಹು ಮುಖ್ಯ ಸಾಧನೆ ಎಂದು ಟೀಕಿಸಿದರು.
ಕಾರ್ಮಿಕ ಮುಖಂಡ ಸುನೀಲ್ ಕುಮಾರ್ ಬಜಾಲ್ ಮಾತನಾಡುತ್ತಾ ಉರ್ವಸ್ಟೋರ್ ಮಾರುಕಟ್ಟೆಯ ಅವ್ಯವಸ್ಥೆ ಹೇಗಿದೆಯೆಂದರೆ ಮೇಲ್ಚಾವಣಿ ಇಲ್ಲ, ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆಗಳಿಲ್ಲ. ಜನಪ್ರತಿನಿಧಿ ಮತ್ತು ಪಾಲಿಕೆ ಆಡಳಿತದ ಅಧಿಕಾರಿಗಳಿಗೆ ಈ ಮಾರುಕಟ್ಟೆಗೆ ಕನಿಷ್ಟ ಮೂಲಭೂತ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿಲ್ಲ ಆದರೆ ಜನರ ತೆರಿಗೆ ದುಡ್ಡನ್ನು ತಿಂದು ತೇಗಿ ಅಕ್ರಮ ಆಸ್ತಿ ಸಂಪಾದಿಸಲು ಸಾಧ್ಯವಾಗಿದೆ ಎಂದು ಆರೋಪಿಸಿದರು. ಇಂತಹ ಅವ್ಯವಸ್ಥೆಯ ವಿರುದ್ದ ಡಿವೈಎಫ್ಐ ನಡೆಸುವ ಹೋರಾಟಗಳಿಗೆ ಜನ ಬೆಂಬಲಿಸಬೇಕು ಎಂದರು.
ಪ್ರತಿಭಟನೆಯಲ್ಲಿ ಡಿವೈಎಫ್ಐ ನ ಜಿಲ್ಲಾ ಸಮಿತಿ ಸದಸ್ಯರಾದ ಪುನೀತ್ ಉರ್ವಸ್ಟೋರ್, ಪ್ರಶಾಂತ್ ಆಚಾರ್, ಮನೋಜ್ ಉರ್ವಸ್ಟೋರ್, ಗೌರವ್, ಧನ್ ರಾಜ್, ಸುಧಾಕರ್, ಇಕ್ಬಾಲ್, ಕಾರ್ಮಿಕ ಮುಖಂಡರಾದ ಅಶೋಕ್ ಶ್ರೀಯಾನ್, ದಲಿತ ಹಕ್ಕುಗಳ ಸಮಿತಿ ಮುಖಂಡರಾದ ಕೃಷ್ಣಪ್ಪ, ಪ್ರಶಾಂತ್ ಎಂ.ಬಿ, ರಘುವೀರ್ ಉರ್ವಸ್ಟೋರ್, ಕಿಶೋರ್ ಉರ್ವಸ್ಟೋರ್ , ಹರಿಣಾಕ್ಷಿ ಎಂ.ಬಿ ಮುಂತಾದವರು ಉಪಸ್ಥಿತರಿದ್ದರು.
ಡಿವೈಎಫ್ಐ ಉರ್ವಸ್ಟೋರ್ ಘಟಕದ ಅಧ್ಯಕ್ಷರಾದ ರಾಜೇಶ್ ಉರ್ವಸ್ಟೋರ್ ಸ್ವಾಗತಿಸಿದರು ಕಾರ್ಯದರ್ಶಿ ಸುಕೇಶ್ ಉರ್ವಸ್ಟೋರ್ ವಂದಿಸಿದರು.